ಬೆಂಗಳೂರಿನಲ್ಲಿ ಗಣೇಶ ಮೂರ್ತಿ ಧ್ವಂಸಗೊಳಿಸಿದ ಕಿಡಿಗೇಡಿಗಳು- ದೃಶ್ಯ ಸೆರೆ
ಬೆಂಗಳೂರು ಮೇ 29: ದೇವರ ಮೂರ್ತಿಗೆ ಹಾನಿಯನ್ನುಂಟು ಮಾಡುವ ಘಟನೆಗಳು ಆಗಾಗ ರಾಜ್ಯ ರಾಜಧಾನಿಯಲ್ಲಿ ನಡೆಯುತ್ತಲೇ ಇರುತ್ತವೆ. ಬೆಂಗಳೂರಿನಲ್ಲಿ ಗಣೇಶ ಮೂರ್ತಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಭಾನುವಾರ ತಡರಾತ್ರಿ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಗುಂಜೂರು ಹೊಸಹಳ್ಳಿ ಮುಖ್ಯರಸ್ತೆಯಲ್ಲಿ ಈ ಗಣೇಶ ಮೂರ್ತಿ ಇದ್ದು ಅದನ್ನು ಸುತ್ತಿಗೆ ತೆಗೆದುಕೊಂಡು ಹೊಡೆದಿರುವುದು ಸ್ಥಳದ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸುತ್ತಿಗೆಯಿಂದ ಗಣೇಶ್ ಮೂರ್ತಿ ಸುತ್ತಲೂ ಹೊಡೆಯುವುದನ್ನು ಕಾಣಬಹುದು. ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಸದ್ಯ ಗಣೇಶ್ ಮೂರ್ತಿಯನ್ನು ಬಿಳಿ ಬಟ್ಟೆಯಿಂದ ಮುಚ್ಚಲಾಗಿದೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂರ್ತಿ ಹೊಡೆದು ಹಾಕಿದ ಕಿಡಿಗೇಡಿ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ. ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ವಾರಾಂತ್ಯವಾದ್ದರಿಂದ ಸ್ಥಳದಲ್ಲಿ ಜನರ ಓಡಾಟ ಕಡಿಮೆ ಇತ್ತು. ಇದನ್ನೆ ಗಮನಿಸಿದ ದಾಳಿಕೋರ ಮೂರ್ತಿ ದ್ವಂಸಕ್ಕೆ ಹೊಂಚು ಹಾಕಿದ್ದಾನೆ. ರಸ್ತೆಯಲ್ಲಿ ವಾಹನ ಜನರ ಓಡಾಟ ಸಂಪೂರ್ಣವಾಗಿ ಬಂದ್ ಆದ ಬಳಿಕ ಗುಂಜೂರು ಹೊಸಹಳ್ಳಿ ಮುಖ್ಯ ರಸ್ತೆಯಲ್ಲಿರುವ ಗಣೇಶ ವಿಗ್ರಹವನ್ನು ಕಿಡಿಗೇಡಿ ಹೊಡೆದು ಹಾಕಿದ್ದಾನೆ. ಒಂದಲ್ಲಾ ಎರಡಲ್ಲ ಬರೋಬ್ಬರಿ ಒಂಬತ್ತು ಬಾರಿ ಸುತ್ತಿಗೆಯಿಂದ ವಿಗ್ರಹಕ್ಕೆ ಹೊಡೆದಿದ್ದಾನೆ.
ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕಿಡಿಗೇಡಿ ವಿಗ್ರಹವನ್ನು ಧ್ವಂಸಗೊಳಿಸುವ ವೇಳೆ ಅನೇಕ ಬಾರಿ ಅತ್ತಿತ್ತ ನೋಡುತ್ತಿರುವುದು ಕಂಡು ಬಂದಿದೆ. ವಿಗ್ರಹಕ್ಕೆ ಹೊಡೆಯುವುದು ಅತ್ತಿತ್ತ ನೋಡುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸ್ಥಲೀಯರ ಆಕ್ರೋಶಕ್ಕೆ ಗುರಿಯಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿ ದೂರು ದಾಖಲಿಸಿದ್ದಾರೆ.
ಹಿಂದೊಮ್ಮೆ ಗಣೇಶನ ಮೂರ್ತಿ ಧ್ವಂಸ ಮಾಡಿದ ಘಟನೆ
ಪ್ರತಿಷ್ಠಾಪನೆ ಮಾಡಿದ್ದ ಗಣಪತಿ ಮೂರ್ತಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಎರಡು ವರ್ಷದ ಹಿಂದೆ ನಡೆದಿತ್ತು. ಗ್ರಾಮದ ಯುವಕರು ಗಣೇಶ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಿದ ರಾತ್ರಿ ಗಣಪತಿ ಮೂರ್ತಿಯನ್ನ ಯಾರೋ ಕಿಡಿಗೇಡಿಗಳು ಧ್ವಂಸ ಮಾಡಿದ್ದರು. ಈ ಕೃತ್ಯದಿಂದಾಗಿ ಹಿರೇಹಳ್ಳಿ ಗ್ರಾಮಸ್ಥರಲ್ಲಿ ಭಾರೀ ಆತಂಕ ಮನೆ ಮಾಡಿತ್ತು.
ವರ್ಷಗಳಿಂದ ಗ್ರಾಮದ ಯುವಕರು ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿಕೊಂಡು ಶಾಂತಿಯುತವಾಗಿ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದರು. ಕೊರೊನ ಆತಂಕದ ನಡುವೇ ತರಾತುರಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಮೂರ್ತಿಯನ್ನು ಕೀಡಿಗಳು ರಾತ್ರಿ ವೇಳೆ ಧ್ವಂಸಗೊಳಿಸಿರೋದ್ರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.
ಹಾಸನದಲ್ಲಿ ಘಟನೆ
ಕುಡಿದ ಮತ್ತಿನಲ್ಲಿ ಇಬ್ಬರು ಯುವಕರು ಪ್ರತಿಷ್ಠಾಪನೆ ಮಾಡಿದ್ದ ಗಣಪತಿಯ ಮೂರ್ತಿಯನ್ನು ಧ್ವಂಸಗೊಳಿಸಿ ದುಷ್ಟತನ ಮೆರೆದಿದ್ದ ಘಟನೆ ನಾಲ್ಕು ವರ್ಷದ ಹಿಂದೆ ನಡೆದಿತ್ತು. ಜಿಲ್ಲೆಯ ಆಲೂರು ತಾಲೂಕು ಕಳ್ಳಿಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಕಳ್ಳಿಕೊಪ್ಪಲು ಗ್ರಾಮದ ನಿವಾಸಿಗಳಾದ ಹರೀಶ ಮತ್ತು ಸಚಿನ್ ಈ ಕೃತ್ಯವೆಸೆಗಿದ್ದಾರೆ ಎಂದು ಆರೋಪಿಸಲಾಗಿತ್ತು. ತಮ್ಮ ಇಚ್ಛೆಗೆ ವಿರುದ್ಧವಾಗಿ ಗಣೇಶನನ್ನು ಕೂರಿಸಲಾಗಿದೆ ಎಂಬ ಕಾರಣಕ್ಕೆ ಇಬ್ಬರೂ ಕೋಪಗೊಂಡಿದ್ದರು. ಆದ್ದರಿಂದ ರಾತ್ರಿ ಕುಡಿದು ಬಂದು ಗಣಪನ ಮೂರ್ತಿಯನ್ನು ಒಡೆದು ಹಾಕಿದ್ದರು. ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ.












Click it and Unblock the Notifications