ಕೆಚ್ಚಲು ಕೊಯ್ದ ಪ್ರಕರಣ: ಸಂತ್ರಸ್ತರಿಗೆ ಸಚಿವ ಜಮೀರ್ ಮೂರು ಹಸು ಗಿಫ್ಟ್
ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ದನದ ಕೆಚ್ಚಲು ಕತ್ತರಿಸಿದ ಅಹಿತಕರ ಘಟನೆಯು ಬೆಂಗಳೂರನ್ನು ಬೆಚ್ಚಿಬೀಳಿಸಿತ್ತು. ಈ ಹಿನ್ನೆಲೆ ಕ್ಷೇತ್ರದ ಶಾಸಕರೂ ಆದ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಹಸು ಸಂತ್ರಸ್ತ ಕುಟುಂಬಕ್ಕೆ ಮೂರು ಹೊಸ ಹಸುಗಳನ್ನು ನೀಡಿದ್ದಾರೆ. ವಿನಾಯಕ ನಗರದ ಕರ್ಣ ಎಂಬುವರ ಹಸುಗಳ ಕೆಚ್ಚಲನ್ನು ಬಿಹಾರ ಮೂಲದ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಕುಯ್ದು ವಿಕೃತಿ ಮೆರೆದಿದ್ದ. ಈ ಘಟನೆ ಬಳಿಕ ಬಿಜೆಪಿ ನಾಯಕರು ಕೂಡ ಸ್ಥಳಕ್ಕೆ ಭೇಟಿ ನೀಡಿ ಆಕ್ರೋಶ ಹೊರಹಾಕಿದ್ದರು. ಅಲ್ಲದೆ ರಾಜ್ಯ ಸರ್ಕಾರದ ವಿರುದ್ಧವೂ ದೂರಿದ್ದರು.
ಇಂದು ಸಂತ್ರಸ್ತ ಕುಟುಂಬವನ್ನು ಭೇಟಿಯಾಗಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರು 3 ಲಕ್ಷ ರೂಪಾಯಿ ಮೌಲ್ಯದ ಮೂರು ಹಸುಗಳನ್ನು ವಿತರಿಸಿದ್ದಾರೆ. ಕರ್ಣನ ಅವರ ತಾಯಿ ಸವಾರಿ ಅಮ್ಮಾಳ್ ಮತ್ತು ಅವರ ಸಹೋದರಿ ಅಮುದಾ ಅವರು ಹಸುಗಳನ್ನು ಸ್ವೀಕರಿಸಿದ್ದಾರೆ. ನಿನ್ನೆಯಷ್ಟೇ ಸಂಕ್ರಾಂತಿ ಹಿನ್ನೆಲೆ ಬಿಜೆಪಿ ನಾಯಕರು ಕೂಡ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಿತ್ತು. ದನದ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾಧ್ಯಕ್ಷ ವಿಜಯೇಂದ್ರ, ಆರ್.ಅಶೋಕ್ ಅವರು ಕಾಟನ್ ಪೇಟೆಯ ದುಂಡು ಮಾರಿಯಮ್ಮ ದೇವಸ್ಥಾನದ ಬಳಿ ಇರುವ ಮಾಲೀಕನ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿ, ಗೋ ಪೂಜೆ ನೆರವೇರಿಸಿ ಪಕ್ಷದ ವತಿಯಿಂದ ಗೋವನ್ನು ಸಂತ್ರಸ್ತರಿಗೆ ನೀಡಿದ್ದರು.

ದನದ ಕೆಚ್ಚಲು ಕತ್ತರಿಸಿದ ಪ್ರಕರಣದಲ್ಲಿ ಪೊಲೀಸರು ಕಾಟಾಚಾರಕ್ಕೆ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣವನ್ನು ಸರಿಯಾಗಿ ತನಿಖೆ ಮಾಡದೆ, ಮುಚ್ಚಿಹಾಕಲು ಸರ್ಕಾರ ಯತ್ನಿಸುತ್ತಿದೆ. ಗಣೇಶ ಹಬ್ಬ, ಹನುಮ ಜಯಂತಿ ಈಗ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸಗಳಿಗೆ ಸರ್ಕಾರವೇ ಪ್ರೋತ್ಸಾಹ ನೀಡುತ್ತಿದೆ. ಕಾಂಗ್ರೆಸ್ ಪಕ್ಷ ಮುಸ್ಲಿಮರ ಅತಿಯಾದ ಓಲೈಕೆ ಬಿಡುವವರೆಗೆ ಈ ರಾಜ್ಯದಲ್ಲಿ ಶಾಂತಿ, ನೆಮ್ಮದಿ ಸಾಧ್ಯವಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದರು.
ತಾಯಿ ಸಮಾನವಾದ ಗೋಮಾತೆಯನ್ನು ಪೂಜಿಸುವ ಭೂಮಿಯಲ್ಲಿ ಗೋ ಮಾತೆಯನ್ನು ಹಿಂಸಿಸಿದ್ದು ಅಕ್ಷಮ್ಯ ಅಪರಾಧ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಗೋವುಗಳಿಗೆ ರಕ್ಷಣೆಯಿಲ್ಲ. ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಆಕ್ರೋಶ ಹೊರಹಾಕಿದ್ದರು.

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ರಾಕ್ಷಸಿ ಮನಸ್ಥಿತಿಯ ಪಾಪಿಗಳು ನಿರ್ದಯವಾಗಿ ಹಸುಗಳ ಕೆಚ್ಚಲನ್ನು ಕತ್ತರಿಸಿರುವುದು ಕ್ರೂರ ಕೃತ್ಯ. ನೊಂದ ಕುಟುಂಬಸ್ಥರ ನಿವಾಸಕ್ಕೆ ತೆರಳಿ ಗೋ ಪೂಜೆ ನೆರವೇರಿಸಿ ಸಂತ್ರಸ್ಥ ಕುಟುಂಬಕ್ಕೆ ಗೋವನ್ನು ನೀಡಿ ಧೈರ್ಯ ತುಂಬಿದ್ದೇವೆ ಎಂದು ವಿಜಯೇಂದ್ರ ಹೇಳಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಗೋ ಸುರಕ್ಷತೆಯ ಬಗ್ಗೆ ತಾತ್ಸಾರ ಧೋರಣೆ ಅನುಸರಿಸುತ್ತಿದ್ದು, ಈ ಕೃತ್ಯಗಳ ಹಿಂದಿರುವ ಶಕ್ತಿಯನ್ನು ಬಗ್ಗು ಬಡಿದು ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಹಿಂದಿರುವ ಶಕ್ತಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.
ಗೋವು ಎಂದರೆ ಸಕಲ ಜೀವರಾಶಿಗಳಿಗೂ ಮಾತೆ, ಹೀಗಾಗಿ ಹಿಂದೂಗಳು ಗೋವನ್ನು ಮಾತೃದೇವತೆಯ ಸ್ಥಾನ ನೀಡಿ ಕಾಮಧೇನು ಎಂದು ಪೂಜಿಸುತ್ತಾರೆ. ಕರ್ನಾಟಕದ ಸಂಸ್ಕೃತಿಯಲ್ಲಿ ಪುಣ್ಯಕೋಟಿಯ ಕಥೆಯ ಹಾಡು ಜಗತ್ತಿಮನೆಲ್ಲೆಡೆ ಪಸರಿಸಿದೆ. ಮಕರ ಸಂಕ್ರಾಂತಿಯಂದು ಗೋ ಮಾತೆಗೆ ಪೂಜೆ ಸಲ್ಲಿಸುವುದು ಹಬ್ಬದ ಆಚರಣೆಯ ಮಹತ್ವದ ಭಾಗ. ಇಂತಹ ಪಾವಿತ್ರ್ಯತೆಯ ಸಂದರ್ಭದಲ್ಲಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ರಾಕ್ಷಸಿ ಮನಸ್ಥಿತಿಯ ಪಾಪಿಗಳು ನಿರ್ದಯವಾಗಿ ಹಸುಗಳ ಕೆಚ್ಚಲನ್ನು ಭೀಕರವಾಗಿ ಕತ್ತರಿಸಿರುವುದು ಅತ್ಯಂತ ಹೇಯ, ಅಮಾನುಷ ಕೃತ್ಯ ಎಂದು ಖಂಡಿಸಿದ್ದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಗೋಸುರಕ್ಷತೆಯ ಬಗ್ಗೆ ತಾತ್ಸಾರ ಧೋರಣೆ ಇದೆ. ಮೊನ್ನೆಯಷ್ಟೇ ಗೋಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಪ್ರಕಟಿಸಿದ್ದು ಇದೆಲ್ಲವೂ ಗೋ ಭಕ್ಷಕ ಜನರ ಓಲೈಕೆಗಾಗಿ ಅಲ್ಲದೆ ಬೇರೇನೂ ಅಲ್ಲ. ಇರಿಯುವುದು, ಕತ್ತರಿಸುವುದನ್ನು ಕೇಳಿದ್ದೇವೆ, ಆದರೆ ಮಾತೃ ಕೊರತೆ ನೀಗಿಸಲು ಕ್ಷೀರಧಾರೆ ಹರಿಸುವ ಕೆಚ್ಚಲನ್ನೇ ಕತ್ತರಿಸುವಷ್ಟು ಪರಮ ನೀಚ ಕೃತ್ಯಕ್ಕೆ ಇಳಿದಿರುವ ಘಟನೆ ಹಿಂದಿರುವ ಕುಮ್ಮಕ್ಕಿನ ಶಕ್ತಿ ಯಾವುದು ಎನ್ನುವುದು ಊಹಿಸಿಕೊಳ್ಳದಷ್ಟು ಕರುನಾಡಿನ ಜನತೆ ಮುಗ್ಧರಲ್ಲ. ಕೃತ್ಯ ನಡೆದಿರುವ ಕ್ಷೇತ್ರ ಯಾರ ಮುಷ್ಠಿಯಲ್ಲಿದೆ? ಈ ರಾಜ್ಯ ಆಳುತ್ತಿರುವವರ ಮನಸ್ಥಿತಿ ಯಾರ ಪರವಿದೆ? ಎನ್ನುವುದು ಎಲ್ಲರಿಗೂ ತಿಳಿದ ವಿಚಾರ ಎಂದು ವಾಗ್ದಾಳಿ ನಡೆಸಿದ್ದರು.












Click it and Unblock the Notifications