MB Patil: ಬಾಗ್ಮನೆ ಸಂಸ್ಥೆಯಿಂದ ₹4 ಕೋಟಿ ಸಾಲ ಆರೋಪಕ್ಕೆ ಸಚಿವರ ಖಡಕ್ ಸ್ಪಷ್ಟನೆ
ಬೆಂಗಳೂರು, ಸೆಪ್ಟಂಬರ್ 05: ಸಿಎ ನಿವೇಶನ ಹಂಚಿಕೆ ವಿವಾದ ಎಬ್ಬಿಸಬೇಡಿ ಎಂದಿದ್ದ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಬಾಗ್ಮನೆ ಸಂಸ್ಥೆಯಿಂದ ಕೋಟ್ಯಾಂತರ ರೂಪಾಯಿ ಹಣ ಪಡೆದ ಬಗ್ಗೆ ರಾಜ್ಯ ಬಿಜೆಪಿ ಆರೋಪ ಮಾಡಿತ್ತು. ಈಆರೋಪಗಳಿಗೆ ಸ್ಪಷ್ಟನೆ ನೀಡಿರುವ ಸಚಿವರು ಕರ್ನಾಟಕ ಬಿಜೆಪಿ ನಾಯಕರಿಗೆ ದವರಿಗೆ ವಿವೇಚನೆಯೇ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಜರಿದಿದ್ದಾರೆ.
ಬಿಜೆಪಿ ಆರೋಪಗಳಿಗೆ ಸಾಮಾಜಿಕ ಜಾಲತಾಣ (ಎಕ್ಸ್)ದಲ್ಲಿ ತಿರುಗೇಟು ನೀಡಿರುವ ಸಚಿವ ಎಂಬಿ ಪಾಟೀಲ್ ಅವರು, ನಾನು ಬಾಗ್ಮನೆಯಿಂದ 4 ಕೋಟಿ ರೂ. ಸಾಲ ತೆಗೆದುಕೊಂಡಿದ್ದು 2001ರಲ್ಲಿ. ನೀವು ಬೊಬ್ಬೆ ಹೊಡೆಯುತ್ತಿರುವಂತೆ 2023ರಲ್ಲಿಯೂ ಅಲ್ಲ. ಸಾಲ ಪಡೆದಿದ್ದು ಚುನಾವಣೆ ಖರ್ಚಿಗಾಗಿಯೂ ಅಲ್ಲ. ಅವೆಲ್ಲ ನಮ್ಮ ಕೌಟುಂಬಿಕ ವ್ಯವಹಾರ. ಅನೇಕ ಸಲ ಸಾಲ ಪಡೆದು, ವಾಪಸ್ ಕೂಡ ಕೊಟ್ಟಿದ್ದೇನೆ. ಒಂದಷ್ಟು ಸಾಲಬಾಕಿಯೂ ಇದೆ.

ಬಿಜೆಪಿಯವರ ಆರೋಪಗಳು ಸತ್ಯಕ್ಕೆ ದೂರವಾದದ್ದು ಹಾಗೂ ಕುಚೇಷ್ಟೆ/ ದುರುದ್ದೇಶದಿಂದ ಕೂಡಿವೆ. ಬಾಗ್ಮನೆ ಸಂಸ್ಥೆ ಮತ್ತು ನಮ್ಮ ಕುಟುಂಬದ ಒಡನಾಟಕ್ಕೂ ಸರ್ಕಾರದ ತೀರ್ಮಾನಕ್ಕೂ ಯಾವ ಸಂಬಂಧವೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಂಸ್ಥೆ ಮಾನದಂಡ ನೋಡಿ ನಿವೇಶನ ಹಂಚಿಕೆ
2021ರಲ್ಲಿ ಬಿಜೆಪಿ ಸರ್ಕಾರವೇ ತನ್ನ ಆದೇಶದಲ್ಲಿ ನಿಗದಿಪಡಿಸಿದ್ದ ಹಂಚಿಕೆ ದರವನ್ನೇ ವಿಧಿಸಲಾಗಿದೆ. ಇದರಲ್ಲಿ ಯಾವುದೇ ರಿಯಾಯಿತಿ ನೀಡಿಲ್ಲ. ಇನ್ನು ನಿವೇಶನ ಹಂಚಿಕೆಗೆ ಪರಿಗಣಿಸುವ ಮಾನದಂಡ ಸಂಸ್ಥೆಯ ಅರ್ಹತೆ, ಸಾಮರ್ಥ್ಯ, ಅನುಭವ ಇತ್ಯಾದಿಯೇ ಹೊರತು ವ್ಯಕ್ತಿ ನಿಷ್ಟ ಮಾನದಂಡಗಳಲ್ಲ ಎಂದರು.
ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳನ್ನು ಒಳಗೊಂಡ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯ ಸಾಮೂಹಿಕ ಹಾಗೂ ಒಮ್ಮತದ ತೀರ್ಮಾನವೇ ಹೊರತು ವೈಯಕ್ತಿಕ ನಿರ್ಧಾರವಲ್ಲ.
ಅಲ್ಲದೆ, ಬಾಗ್ಮನೆಗೆ 2005, 2006 ಮತ್ತು 2009ರಲ್ಲೆಲ್ಲ ಅಂದಂದಿನ ಸರ್ಕಾರಗಳು ಕೈಗಾರಿಕಾ ಭೂಮಿ ನೀಡಿವೆ. 2009ರಲ್ಲಿ ಇದೇ ಬಾಗ್ಮನೆ ಸಮೂಹದ ಚಂದ್ರಾ ಡೆವಲಪರ್ಸ್ ಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ 25 ಎಕರೆ ಭೂಮಿ ನೀಡಿದ್ದಾಗ ನಿಮ್ಮದೇ ಸರ್ಕಾರ ಇತ್ತಲ್ಲವೇ? ಎಂದು ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ.
.@BJP4Karnataka ದವರಿಗೆ ವಿವೇಚನೆಯೇ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
— M B Patil (@MBPatil) September 4, 2024
ನಾನು ಬಾಗ್ಮನೆಯಿಂದ 4 ಕೋಟಿ ರೂ. ಸಾಲ ತೆಗೆದುಕೊಂಡಿದ್ದು 2001ರಲ್ಲಿ; ನೀವು ಬೊಬ್ಬೆ ಹೊಡೆಯುತ್ತಿರುವಂತೆ 2023ರಲ್ಲೂ ಅಲ್ಲ, ಚುನಾವಣೆ ಖರ್ಚಿಗಾಗಿಯೂ ಅಲ್ಲ. ಅವೆಲ್ಲ ನಮ್ಮ ಕೌಟುಂಬಿಕ ವ್ಯವಹಾರ. ಅನೇಕ ಸಲ ಸಾಲ ಪಡೆದು, ವಾಪಸ್ ಕೂಡ ಕೊಟ್ಟಿದ್ದೇನೆ. ಬಾಕಿಯೂ… https://t.co/PtbUr3L0zv pic.twitter.com/mLutfWen3B
ರಾಜ್ಯ ಬಿಜೆಪಿ ಆರೋಪವೇನು?
ಕರ್ನಾಟಕ ಬಿಜೆಪಿಯು, ಸಚಿವ ಎಂ.ಬಿ ಪಾಟೀಲ್ ಅವರು ಚುನಾವಣೆ ವೆಚ್ಚಕ್ಕೆಂದು ಬಾಗಮನೆ ಡೆವಲಪರ್ಸ್‌ನಿಂದ ₹4 ಕೋಟಿ ಪಡೆದಿರುವುದು ಅವರ ಚುನಾವಣಾ ಅಫಿಡವಿಟ್‌ನಲ್ಲಿಯೇ ಬಹಿರಂಗವಾಗಿದೆ ಎಂದು ಆರೋಪಿಸಿತ್ತು.
ಚುನಾವಣೆ ಮುಗಿದ ತತಕ್ಷಣ ಬಾಗಮನೆ ಡೆವಲಪರ್ಸ್‌ನ ಪಾಲುದಾರರ ಮತ್ತೊಂದು ಕಂಪನಿಯಾದ ವೈಗೈ ಇನ್ವೆಸ್ಟ್‌ಮೆಂಟ್ ಪ್ರೈ.ಲಿ ಗೆ ಬೆಂಗಳೂರಿನ ಡಿಫೆನ್ಸ್ ಎಸ್.ಇ.ಝಡ್ ಪಾರ್ಕ್ ನಲ್ಲಿ ಅಂದಾಜು ₹160 ಕೋಟಿ ಬೆಲೆಬಾಳುವ 8 ಎಕರೆ ಭೂಮಿ ನೀಡಲಾಗಿದೆ.
ವೈಗೈ ಇನ್ವೆಸ್ಟ್‌ಮೆಂಟ್ ಪ್ರೈ.ಲಿಗೆ ಭೂಮಿ ನೀಡಿದ್ದು ತಮ್ಮ ಸಾಲದ ಋಣಬಾಬತ್ತನ್ನು ತೀರಿಸಲೋ ಅಥವಾ ಅದರಲ್ಲಿಯೂ ವಸೂಲಿ ಬಾಜಿ ನಡೆದಿದೆಯೋ ಎಂಬುದನ್ನು ಟಕಾಟಕ್ ಎಂದು ಭೂಮಿ ಮಂಜೂರು ಮಾಡಿರುವ ಎಂ.ಬಿ.ಪಾಟೀಲರೇ ತಿಳಿಸಬೇಕು ಎಂದು ಬಿಜೆಪಿ ಕಿಡಿ ಕಾರಿತ್ತು. ಅದಕ್ಕೀಗ ಸಚಿವರು ಉತ್ತರ ನೀಡಿದ್ದಾರೆ.












Click it and Unblock the Notifications