ಬೆಂಗಳೂರಿನಲ್ಲಿ ಕಂಪನಿ ನೋಂದಣಿ ಆಗುತ್ತಿಲ್ಲ ಎಂದ ಎನ್‌ಆರ್‌ಐ ಬಳಿ ಕ್ಷಮೆ ಕೇಳಿದ ಸಚಿವ ಎಂ.ಬಿ ಪಾಟೀಲ್: ಆಗಿದ್ದೇನು?
ಬೆಂಗಳೂರಿನಲ್ಲಿ ತಮ್ಮ ಕಂಪನಿ ನೋಂದಣಿ ಮಾಡಲು ತುಂಬಾ ತಡವಾಗುತ್ತಿದೆ, ಸಹಕಾರ ಸಿಗುತ್ತಿಲ್ಲ ನಾನು ವಾಪಸ್ ಅಮೆರಿಕಗೆ ತೆರಳಬೇಕಾಗಬಹುದು ಎಂದಿದ್ದ ಅನಿವಾಸಿ ಭಾರತೀಯ ಉದ್ಯಮಿ ಬಳಿ ರಾಜ್ಯ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಕ್ಷಮೆ ಕೇಳಿದ್ದಾರೆ. ಅಲ್ಲದೆ ಸಮಸ್ಯೆ ಬಗೆ ಹರಿಸಲು ಸಹಾಯ ಮಾಡುವುದಾಗಿ ಹೇಳಿದ್ದಾರೆ.
ಯುಎಸ್‌ನ ಎಐ (AI) ಉದ್ಯಮದ ಎನ್‌ಆರ್‌ಐ ಬ್ರಿಜ್ ಸಿಂಗ್, ಕಂಪನಿಯನ್ನು ನೋಂದಾಯಿಸುವಲ್ಲಿ ವಿಳಂಬ ಆಗುತ್ತಿರುವ ಬಗ್ಗೆ ಟ್ವೀಟ್ ಮಾಡಿದ್ದರು. ತನಗೆ ಬೇಸರವಾಗುತ್ತಿದೆ, ಬೆಂಗಳೂರು ತೊರೆದು ವಾಪಸ್ ಹೋಗಬೇಕಾಗಬಹುದು ಎಂದು ಹೇಳಿದ್ದರು.

ಬ್ರಿಜ್ ಸಿಂಗ್ ತಮ್ಮ ಟ್ವೀಟ್‌ನಲ್ಲಿ ಬೆಂಗಳೂರು/ಭಾರತವನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದರು. "ಭಾರತದಲ್ಲಿ ತಮ್ಮ ಕಂಪನಿ ನೋಂದಣಿ ಮಾಡಲು ಎರಡು ತಿಂಗಳುಗಳಿಂದ ಪ್ರಯತ್ನ ಪಡುತ್ತಿದ್ದೇನೆ, ಆದರೂ ನೋಂದಣಿ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಸಂಭಾವ್ಯ ಗ್ರಾಹಕರು, ಹೂಡಿಕೆದಾರರು ಮತ್ತು ಸಹ ಸಂಸ್ಥಾಪಕರಿಂದ ಸಮಸ್ಯೆ-ಪರಿಹಾರ ಪ್ರತಿಕ್ರಿಯೆ ವಿಭಿನ್ನ ಮಟ್ಟದಲ್ಲಿದೆ. ನಾನು ಯುಎಸ್‌ಗೆ ಹಿಂತಿರುಗಲು ಸಮಯ ಬರಬಹುದು. ಭಾರವಾದ ಹೃದಯದಿಂದ ಇದನ್ನು ಹೇಳುತ್ತಿದ್ದೇನೆ" ಎಂದು ಟ್ವೀಟ್ ಮಾಡಿದ್ದರು.
ಉದ್ಯಮಿಯ ಟ್ವೀಟ್‌ಗೆ ಸಚಿವರ ಸ್ಪಂದನೆ
ಇನ್ನು ಬ್ರಿಜ್ ಸಿಂಗ್ ಅವರ ಟ್ವೀಟ್ ಬಗ್ಗೆ ಹಲವು ಸುದ್ದಿಗಳು ಮಾಧ್ಯಮದಲ್ಲಿ ಪ್ರಕಟವಾಗಿದ್ದವು. ಟ್ವೀಟ್ ಅನ್ನು ಗಮನಿಸಿದ ರಾಜ್ಯ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಉದ್ಯಮಿ ಬ್ರಿಜ್ ಸಿಂಗ್ ಅವರ ಬಳಿ ಕ್ಷಮೆ ಯಾಚಿಸಿದ್ದಾರೆ. ಅಲ್ಲದೇ ವೈಯಕ್ತಿಕವಾಗಿ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.
Sorry to hear about your problem.
— M B Patil (@MBPatil) July 29, 2023
Company formation is usually done by CAs and shouldn’t take more than 15-20 days, to get it cleared by RoC(which falls under the central government, and is the same for all states).
However if you have any issues I’d be happy to meet personally… https://t.co/VudqgIt4CT
ಟ್ವೀಟ್ ಮಾಡಿರುವ ಸಚಿವ ಎಂ.ಬಿ. ಪಾಟೀಲ್, "ಸಿಂಗ್ ಅವರ ಸಮಸ್ಯೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ, ಕಂಪನಿ ರಚನೆ ಸಾಮಾನ್ಯವಾಗಿ ಸಿಎ ಗಳು ಮಾಡುತ್ತವೆ ಅದನ್ನು ಆರ್ ಒಸಿ (ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತದೆ ಮತ್ತು ಎಲ್ಲಾ ರಾಜ್ಯಗಳಿಗೆ ಒಂದೇ ಆಗಿರುತ್ತದೆ). ಯಿಂದ ತೆರವುಗೊಳಿಸಲು 15-20 ದಿನಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುವಂತಿಲ್ಲ. ಹೀಗಿದ್ದರೂ ನಿಮಗೆ ಯಾವುದೇ ಸಮಸ್ಯೆಗಳು ಇದ್ದರೆ ಖುದ್ದಾಗಿ ಭೇಟಿ ಮಾಡಿ ಪರಿಹರಿಸಲು ಸಂತೋಷಪಡುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಂಗ್, "ನೀವು ನಮ್ಮ ಸಮಸ್ಯೆಯನ್ನು ಅರಿತು ಸ್ಪಂದಿಸಿದ್ದಕ್ಕೆ ಪ್ರಶಂಸಿಸುತ್ತೇವೆ ಸರ್, ಇದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಈಗ ಕೆಲಸಗಳು ನಡೆಯುತ್ತಿವೆ, ಅಗತ್ಯವಿದ್ದಲ್ಲಿ ನಾನು ನಿಮ್ಮ ತಂಡವನ್ನು ಸಂಪರ್ಕಿಸುತ್ತೇನೆ, ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು" ಎಂದು ಟ್ವೀಟ್ ಮಾಡಿದ್ದಾರೆ.
ಅನೇಕರು ಎಂ.ಬಿ ಪಾಟೀಲ್ ಅವರ ನಡೆಯನ್ನು ಶ್ಲಾಘಿಸಿದ್ದಾರೆ, ಒಬ್ಬ ಉದ್ಯಮಿಯನ್ನು ಪ್ರೋತ್ಸಾಹಿಸುವುದು, ಅವರ ಸಮಸ್ಯೆಗೆ ಸ್ಪಂದಿಸುವುದು ಉತ್ತಮ ಸರ್ಕಾರದ ಗುಣ ಎಂದಿದ್ದಾರೆ. ಇದಕ್ಕಾಗಿಯೇ ಬೆಂಗಳೂರಿಗೆ ಹೆಚ್ಚಿನ ಹೂಡಿಕೆ ಹರಿದು ಬರುತ್ತಿದೆ ಎಂದು ಹೇಳಿದ್ದಾರೆ. ಹಲವರು ಸಚಿವರು ತಡವಾಗಿ ಮನವಿಗೆ ಸ್ಪಂದಿಸಿದ್ದಾರೆ ಎಂದು ಟೀಕಿಸಿದ್ದಾರೆ.












Click it and Unblock the Notifications