ಬೆಂಗಳೂರು ಮೆಟ್ರೋದಲ್ಲಿ ಶ್ರೀಮಂತರು ಇನ್ ಬಡವರು ಔಟ್? ಇದೆಂಥ ರೂಲ್ಸ್?
ಬೆಂಗಳೂರು ಫೆಬ್ರವರಿ 26: ಬೆಂಗಳೂರಿನಲ್ಲಿ ರೈತನ ಮೇಲೆ ಮೆಟ್ರೋ ಸಿಬ್ಬಂದಿಯೊಬ್ಬರು ದರ್ಪ ತೋರಿಸಿದ ಘಟನೆ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಮೆಟ್ರೋ ಸಿಬ್ಬಂದಿ ನಡೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ವಯಸ್ಸಾದ ರೈತನೊಬ್ಬ ಒಳಪ್ರವೇಶಿಸುವುದನ್ನು ಸಿಬ್ಬಂದಿಯೊಬ್ಬರು ತಡೆದು ಅಮಾನವೀಯವಾಗಿ ವರ್ತಿಸಿದ್ದಾರೆ. ಸಿಬ್ಬಂದಿ ರೈತನಿಗೆ ನಿಲ್ದಾಣದ ಒಳಗೆ ಬಿಡಲು ನಿರಾಕರಿಸಿ ದುರಹಂಕಾರ ವರ್ತನೆ ತೋರಿದ್ದಾರೆ.

ರೈತನ ಬಟ್ಟೆ ಕ್ಲೀನ್ ಇಲ್ಲ ಎಂದು ಮೆಟ್ರೋ ಸಿಬ್ಬಂದಿ ಅಪಮಾನ ಮಾಡಿದ್ದಾರೆ ಎಂದು ಇತರ ಪ್ರಯಾಣಿಕರು ಸಿಬ್ಬಂದಿ ವಿರುದ್ಧ ಕಿಡಿ ಕಾರಿದ್ದಾರೆ. ನಿಲ್ದಾಣದಲ್ಲೇ ಸಿಬ್ಬಂದಿಯನ್ನು ಇತರ ಪ್ರಯಾಣಿಕರು ಪ್ರಶ್ನೆ ಮಾಡಿದ್ದಾರೆ. ಇದು ವಾಗ್ವಾದಕ್ಕೂ ಕಾರಣವಾಗಿದೆ. ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ.
ಶ್ರೀಮಂತರಿಗೆ ಮಾತ್ರ ಮೆಟ್ರೋದಲ್ಲಿ ಪ್ರಯಾಣ ಮಾಡಲು ಹಕ್ಕಿದಿಯಾ? ಬಡ ರೈತರಿಗೆ ಪ್ರಯಾಣ ಮಾಡುವ ಹಕ್ಕು ಇಲ್ವಾ? ಎಂದು ಜನ ಪ್ರಶ್ನೆ ಮಾಡಿದ್ದಾರೆ. ವಿಡಿಯೋದಲ್ಲಿ ಮೆಟ್ರೋದಲ್ಲಿ ರೈತನನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವುದು ಕಂಡು ಬಂದಿದೆ.
'ರೈತರ ಬಟ್ಟೆ ಕೊಳೆಯಾಗದೆ ಅನ್ನವಿಲ್ಲ' ನಾರಾಯಣಗೌಡ
ಈ ಬಗ್ಗೆ ಮಾತನಾಡಿದ ಕರವೇ ಅಧ್ಯಕ್ಷ ಟಿಎ ನಾರಾಯಣಗೌಡ ಮೆಟ್ರೋ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. 'ರೈತರು ಮೆಟ್ರೋದಲ್ಲಿ ಓಡಾಡಬಾರದು ಅಂದರೆ ಹಾಗೆ ಅಂದವನನ್ನು ಮುಲಾಜಿಲ್ಲದೆ ಸಸ್ಪೆಂಡ್ ಮಾಡಬೇಕು. ಅವನು (ರೈತ) ಕಾಸು ಕೊಟ್ಟು ಹೋಗ್ತಾಯಿದಾನೆ ತಾನೆ? ಅವರೇನ್ ಟೆರೆರಿಸ್ಟಾ? ಮೆಟ್ರೋದಲ್ಲಿ ರೈತ ಓಡಾಡಬಾರದಾ? ಅವರ ಬಟ್ಟೆ ಕೊಳಕಾದೇ ಇದ್ದರೆ ನಾವು ಅನ್ನ ತಿನ್ನಲ್ಲ. ರೈತರನ್ನು ಈ ನೆಲದ ಯೋಗಿ ಅಂತ ಕರೆಯುತ್ತಾರೆ. ಸಿಬ್ಬಂದಿ ವರ್ತನೆ ನೋಡಿದರೆ ಎಂಥಹ ಕೆಟ್ಟ ವ್ಯವಸ್ಥೆಯಲ್ಲಿ ನಾವೆಲ್ಲಾ ಬದುಕುತ್ತಿದ್ದೇವೆ ಅನ್ನಿಸುತ್ತದೆ. ರೈತನನ್ಉ ಮೆಟ್ರೋದಲ್ಲಿ ಪ್ರಯಾಣಿಸದಂತೆ ಯಾರು ತಡದಿದ್ದಾರೋ ಅವನಿಗೆ ಕೆನ್ನೆಗೆ ಬಾರಿಸಿ ಕೆಲಸದಿಂದ ಮನೆಗೆ ಕಳಿಸಬೇಕು'' ಎಂದು ಕಿಡಿ ಕಾರಿದರು.
ಜೊತೆಗೆ 'ಮೆಟ್ರೋ ಸಿಬ್ಬಂದಿ ಹಳ್ಳಿಯಿಂದ ಬಂದವರಿಗೆ ಸಹಾಯ ಮಾಡಬೇಕು. ಮೆಟ್ರೋ ನಿಲ್ದಾಣದಲ್ಲಿ ಎಲ್ಲಾ ಹಿಂದಿಯವರನ್ನು ತುಂಬಿಕೊಂಡಿದ್ದರೆ ಅವರಿಗೆ ರೈತರು ಅಂದರೆ ಏನ್ ಗೊತ್ತಾಗುತ್ತದೆ. ಹಿಂದಿ ಮಾತನಾಡುವಂತವರನ್ನು ತಂದು ಇಟ್ಟುಕೊಂಡರೆ ಇನ್ನೇನ್ ಆಗುತ್ತದೆ'' ಎಂದು ಅವರು ಕಿಡಿ ಕಾರಿದರು.
'ಇದು ಕನ್ನಡಿಗರಾದ ಅವಮಾನ' ವಾಟಾಳ್ ನಾಗರಾಜ್
ಇನ್ನೂ ಈ ಬಗ್ಗೆ ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, 'ಇದು ಒಬ್ಬ ರೈತನಿಗೆ ಆದ ಅಪಮಾನ ಅಲ್ಲ. ಇಡೀ ಕನ್ನಡಿಗರಾದ ಅವಮಾನ. ಬಟ್ಟೆ ಕೊಳೆಯಾದರೆ ಇವನ್ಯಾರು ಕೇಳೋಕೆ? ಬಟ್ಟೆನೇ ಹಾಕಿಕೊಂಡು ಬರಲ್ಲ ಏನ್ ಮಾಡ್ತಾರೆ. ರೈತನಿಗೆ ಅಪಮಾನ ಮಾಡಿದವರನ್ನು ಕೆಲಸದಿಂದ ತೆಗೆದು ಹಾಕಬೇಕು' ಎಂದು ಆಕ್ರೋಶಗೊಂಡರು.
ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆಯಾಗಿದ್ದು, ರಾಜಾಜಿನಗರ ಘಟನೆಯ ಕುರಿತು ತನಿಖೆ ನಡೆಸಿ , ಭದ್ರತಾ ಮೇಲ್ವಿಚಾರಕರ ಸೇವೆಯನ್ನು ವಜಾಗೊಳಿಸಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಿಗಮವು ವಿಷಾದಿಸುತ್ತದೆ.
— ನಮ್ಮ ಮೆಟ್ರೋ (@OfficialBMRCL) February 26, 2024
ರೈತನ ಮೇಲೆ ದರ್ಪ ತೋರಿದ ಸಿಬ್ಬಂದಿ ವಜಾ:-
'ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆಯಾಗಿದ್ದು, ರಾಜಾಜಿನಗರ ಘಟನೆಯ ಕುರಿತು ತನಿಖೆ ನಡೆಸಿ , ಭದ್ರತಾ ಮೇಲ್ವಿಚಾರಕರ ಸೇವೆಯನ್ನು ವಜಾಗೊಳಿಸಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಿಗಮವು ವಿಷಾದಿಸುತ್ತದೆ' ಎಂದು ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿದೆ.












Click it and Unblock the Notifications