Mekedatu Project: ಮೇಕೆದಾಟು ಯೋಜನೆ ಬಗ್ಗೆ ಮಹತ್ವದ ಮಾಹಿತಿ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ-ಏನದು?
ಬೆಂಗಳೂರು, ಏಪ್ರಿಲ್, 08: ಲೋಕಸಭೆ ಚುನಾವಣೆ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅವರ ಪರವಾಗಿ ಭರ್ಜರಿ ಪ್ರಚಾರ ಮಾಡಿದ್ದು, ಈ ವೇಳೆ ಅವರು ಮೇಕೆದಾಟು ಯೋಜನೆ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ಹಾಗಾದರೆ ಅದು ಏನು ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಬೆಂಗಳೂರಿಗೆ ಕುಡಿಯುವ ನೀರು ಒದಗಿಸಲು ಮೇಕೆದಾಟು ಯೋಜನೆ ಅನಿವಾರ್ಯ ಆಗಿದ್ದು, ಮೇಕೆದಾಟು ಯೋಜನೆಗೆ ಕೇಂದ್ರದಿಂದ ಅನುಮತಿ ಸಿಗಬೇಕಾದರೆ ಸೌಮ್ಯಾರೆಡ್ಡಿ ಗೆಲ್ಲಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸೌಮ್ಯಾರೆಡ್ಡಿ ಅವರ ಪರವಾಗಿ ಪ್ರಚಾರದ ಎರಡನೇ ದಿನವಾದ ಸೋಮವಾರ (ಏಪ್ರಿಲ್ 8) ಮುಖ್ಯಮಂತ್ರಿಗಳು ಬಿರುಸಿನ ರೋಡ್ ಶೋ ನಡೆಸಿದ್ದು, ಈ ವೇಳೆ ಬಿಜೆಪಿ ಸಂಸದ ತೇಜವಿ ಸೂರ್ಯ ಅವರ ಸರಣಿ ವೈಫಲ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಇನ್ನು "ಬೆಂಗಳೂರು ದಕ್ಷಿಣದಲ್ಲಿ ಕುಡಿಯುವ ನೀರಿಗಾಗಿ ಕಾವೇರಿ ಸಂಪರ್ಕ ಹೆಚ್ಚಿಸಬೇಕಿದೆ. ಈಗ ಶೇಕಡಾ 60ರಷ್ಟು ಮಾತ್ರ ಆಗಿದೆ. ಮೇಕೆದಾಟು ಯೋಜನೆ ಜಾರಿಯಾಗಬೇಕಾದರೆ ಸೌಮ್ಯಾರೆಡ್ಡಿ ಅವರ ಗೆಲುವು ಅತ್ಯಗತ್ಯ," ಎಂದರು.
ಮೇಕೆದಾಟು ಯೋಜನೆಯು ರಾಮನಗರ ಜಿಲ್ಲೆಯ ಕನಕಪುರ ಬಳಿ ಸಮತೋಲನ ಜಲಾಶಯದ ನಿರ್ಮಾಣವನ್ನು ಒಳಗೊಂಡ ಬಹುಪಯೋಗಿ ಯೋಜನೆಯಾಗಿದೆ. ಇದು ಪೂರ್ಣಗೊಂಡ ನಂತರ, ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಉದ್ದೇಶಕ್ಕಾಗಿ 4 ಟಿಎಂಸಿ ನೀರನ್ನು ಪೂರೈಸುವ ನಿರೀಕ್ಷೆಯಿದೆ ಎಂದರು.
"ವಿಧಾನಸಭಾ ಚುನಾವಣೆಯ ಮತ ಎಣಿಕೆ ವೇಳೆ ಸೌಮ್ಯಾ ರೆಡ್ಡಿಗೆ ಅನ್ಯಾಯ ಆಗಿದೆ. ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ನ್ಯಾಯ ದೊರಕಿಸಿಕೊಡಬೇಕು," ಎಂದು ಜನರಿಗೆ ಮನವಿ ಮಾಡಿದರು.
ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು 28 ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಕರ್ನಾಟಕವು 28 ಲೋಕಸಭಾ ಕ್ಷೇತ್ರಗಳನ್ನು ಹೊಂದಿದ್ದು, ಇದರಲ್ಲಿ ಐದು ಸ್ಥಾನಗಳು ಎಸ್‌ಸಿ ಅಭ್ಯರ್ಥಿಗಳಿಗೆ ಮತ್ತು ಎರಡು ಎಸ್‌ಟಿ ಅಭ್ಯರ್ಥಿಗಳಿಗೆ ಮೀಸಲಾಗಿವೆ.
2019ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ 51.7 ಶೇಕಡಾ ಮತಗಳ ಹಂಚಿಕೆಯೊಂದಿಗೆ 25 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 32.1 ಶೇಕಡಾ ಮತಗಳೊಂದಿಗೆ 1 ಸ್ಥಾನವನ್ನು ಗೆದ್ದಿದೆ. ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಸ್ವತಂತ್ರರು ತಲಾ ಒಂದು ಸ್ಥಾನವನ್ನು ಗೆದ್ದಿದ್ದಾರೆ. ಇನ್ನು 543 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19ರಿಂದ ಏಳು ಹಂತಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ.











Click it and Unblock the Notifications