Bengaluru Temperature : ಬೇಸಿಗೆಯ ದಿನಗಳಲ್ಲಿ ಗರಿಷ್ಠ ತಾಪಮಾನ- ಅಂಕಿಅಂಶ, ಕಾರಣ, ಮಾಹಿತಿ, ವಿವರ ತಿಳಿಯಿರಿ
ಕಳೆದ ಹತ್ತು ವರ್ಷಗಳ ಬೇಸಿಗೆಯ ತಿಂಗಳುಗಳಲ್ಲಿ ಬೆಂಗಳೂರಿನ ತಾಪಮಾನವು ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆಯ ದತ್ತಾಂಶದಿಂದ ತಿಳಿದುಬಂದಿದೆ.
ಬೆಂಗಳೂರು, ಮಾರ್ಚ್ 13: ಕಳೆದ ಹತ್ತು ವರ್ಷಗಳ ಬೇಸಿಗೆಯ ತಿಂಗಳುಗಳಲ್ಲಿ ಬೆಂಗಳೂರಿನ ತಾಪಮಾನವು ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆಯ ದತ್ತಾಂಶದಿಂದ ತಿಳಿದುಬಂದಿದೆ. ಇಲಾಖೆಯ ದತ್ತಾಂಶದ ಪ್ರಕಾರ, ಅಜಾಗರೂಕ ಅಭಿವೃದ್ಧಿಯಿಂದ ಈ ತೊಂದರೆ ಉಂಟಾಗಿದೆ. ಮುಂದಿನ ದಿನಮಾನಗಳಲ್ಲಿ ಇದು ಇನ್ನೂ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.
2011 ರ ಏಪ್ರಿಲ್‌ನಲ್ಲಿ ದಾಖಲಾದ ಗರಿಷ್ಠ ತಾಪಮಾನ 34.6 ಡಿಗ್ರಿ ಸೆಲ್ಸಿಯಸ್ ಆಗಿತ್ತು. 2022 ರ ಹೊತ್ತಿಗೆ, ಇದು 36.7 ಕ್ಕೆ ಏರಿದೆ. ಇದು ಬೆಂಗಳೂರು ನಗರದ ವಾತಾವರಣದಲ್ಲಿ 'ಹವಾಮಾನ ಬದಲಾವಣೆಯನ್ನು ತೋರಿಸುತ್ತಿದೆ' ಎಂಬುದರ ಸಂಕೇತವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಭಾರತದ ಹವಾಮಾನ ಇಲಾಖೆಯ ಪ್ರಕಾರ, 2016 ರಲ್ಲಿ ಏಪ್ರಿಲ್‌ನಲ್ಲಿ ಅತ್ಯಧಿಕ ತಾಪಮಾನವನ್ನು ದಾಖಲಿಸಿದೆ. 39.2 ಡಿಗ್ರಿ ಸೆಲ್ಸಿಯಸ್‌ಗೆ ತಾಪಮಾನ ತಲುಪಿತ್ತು. ಆ ವರ್ಷದ ಮಾರ್ಚ್‌ನಲ್ಲಿ 0.5 ಡಿಗ್ರಿ ಹೆಚ್ಚಳವೂ ಕಂಡುಬಂದಿತ್ತು.
ಹವಾಮಾನ ಇಲಾಖೆಯ 30 ವರ್ಷದ ಹವಾಮಾನಶಾಸ್ತ್ರದ ಸಾಮಾನ್ಯ ಮೌಲ್ಯವನ್ನು 30 ವರ್ಷಗಳ ಅವಧಿಗೆ ಸರಾಸರಿ ಮೌಲ್ಯವಾಗಿ ಲೆಕ್ಕಹಾಕಲಾಗುತ್ತದೆ. ಇದು ಬೆಂಗಳೂರಿನ ತಾಪಮಾನದಲ್ಲಿ ಹೆಚ್ಚಳವನ್ನು ಸಹ ತೋರಿಸಿದೆ.

ಈ ಬೆಳವಣಿಗೆಗೆ ತಜ್ಞರು ಸಾಮಾನ್ಯ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಯೋಜಿತವಲ್ಲದ ನಗರೀಕರಣ, ಖಾಲಿಯಾಗುತ್ತಿರುವ ಹಸಿರು ಹೊದಿಕೆ ಮತ್ತು ವಾಹನಗಳ ಹೊರಸೂಸುವಿಕೆ ಹವಾಮಾನವನ್ನು ಮಲಿನಗೊಳಿಸಿದೆ. ಇದು ಬೇಗುದಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
'ಕಾಂಕ್ರೀಟೀಕರಣವು ನಗರವನ್ನು ಆವರಿಸಿದೆ' ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಟಿ ವಿ ರಾಮಚಂದ್ರ 'ಡೆಕ್ಕನ್ ಹೆರಾಲ್ಡ್'ಗೆ ತಿಳಿಸಿದ್ದಾರೆ.

'1970 ರ ದಶಕದಲ್ಲಿ ಬೆಂಗಳೂರು ಸುಮಾರು ಶೇ 68 ರಷ್ಟು ಹಸಿರು ಹೊದಿಕೆಯನ್ನು ಹೊಂದಿತ್ತು. ಆ ನಂತರ ಬೆಂಗಳೂರು ಅನಿಯಂತ್ರಿತ ಬೆಳವಣಿಗೆ ಕಂಡಿತು. ನಾವು ಈಗ ಶೇ 3 ಕ್ಕಿಂತ ಕಡಿಮೆ ಹಸಿರು ಹೊದಿಕೆಯನ್ನು ಹೊಂದಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ, ತಾಪಮಾನವು ಹೆಚ್ಚಾಗುವುದು ಸ್ಪಷ್ಟವಾಗಿದೆ' ಎಂದು ಹೇಳಿದ್ದಾರೆ.
ನಿರಂತರವಾಗಿ ಏರುತ್ತಿರುವ ವಾಹನಗಳ ಹೊರಸೂಸುವಿಕೆ ಮತ್ತು ಹೆಚ್ಚಿದ ಮಾನವ ಚಟುವಟಿಕೆಗಳು ಸಹ ಸಮಸ್ಯೆಗೆ ಕಾರಣವಾಗಿವೆ ಎಂದು ಭಾರತೀಯ ಹವಾಮಾನ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
'ಇದು ಹಲವಾರು ಅಂಶಗಳ ಸಂಯೋಜನೆಯಾಗಿದೆ. ನಗರದ ಜನಸಂಖ್ಯೆಯು ಬೆಳೆಯುತ್ತಿದೆ. ಮಾನವ ಚಟುವಟಿಕೆಗಳು ತೀವ್ರವಾಗಿ ಹೆಚ್ಚುತ್ತಿವೆ. ಹಸಿರು ಹೊದಿಕೆಗೆ ವಾಹನ ಹೊರಸೂಸುವಿಕೆ ಅಪಾಯವನ್ನು ತಂದೊಡ್ಡಿದೆ. ಇವೆಲ್ಲವೂ ಪಾತ್ರವನ್ನು ವಹಿಸುತ್ತವೆ' ಎಂದು ಐಎಂಡಿ ಬೆಂಗಳೂರಿನ ವಿಜ್ಞಾನಿ ಎ ಪ್ರಸಾದ್ ಹೇಳಿದ್ದಾರೆ.
ಖ್ಯಾತ ಪರಿಸರವಾದಿ ಡಾ ಎ ಎನ್ ಯಲ್ಲಪ್ಪ ರೆಡ್ಡಿ ಅವರು, ಬೇಗುದಿ ಹೆಚ್ಚಲು ಜಲಮೂಲಗಳು ಮತ್ತು ಕೆರೆಗಳ ವಿನಾಶವೂ ಕಾರಣವೆಂದು ಹೇಳಿದ್ದಾರೆ.
'ಜಲಮೂಲಗಳು ಗಾಳಿಗೆ ತೇವಾಂಶವನ್ನು ಸೇರಿಸುವುದರಿಂದ ಮತ್ತು ಶುಷ್ಕತೆಯನ್ನು ತಡೆಯುವುದರಿಂದ ಪ್ರಮುಖ ಪಾತ್ರವನ್ನು ವಹಿಸುತ್ತವೆ. ನಾವು ಅನೇಕ ಕೆರೆಗಳನ್ನು ಕಳೆದುಕೊಂಡಿದ್ದೇವೆ. ಇದು ಹವಾಮಾನದ ಮೇಲೆ ಪರಿಣಾಮ ಬೀರುತ್ತದೆ' ಎಂದು ರೆಡ್ಡಿ ತಿಳಿಸಿದ್ದಾರೆ.
ಕಳೆದ ಎರಡರಿಂದ ಮೂರು ವರ್ಷಗಳಲ್ಲಿ ಅನುಭವಿಸಿದ ಬೇಸಿಗೆಯಂತೆಯೇ ಈ ವರ್ಷವೂ ಇರಬಹುದಾದರೂ, ಮುಂದಿನ ದಿನಮಾನಗಳಲ್ಲಿ ತೀವ್ರತೆಯು ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
'ಪ್ರತಿ ಋತುವಿನ ತೀವ್ರತೆಯು ಏರು ಗತಿಯಲ್ಲೇ ಸಾಗಲಿದೆ. ಬೇಸಿಗೆಯಲ್ಲಿ ಅತ್ಯಧಿಕ ತಾಪಮಾನ ಇರಲಿದೆ. ಮಳೆಯ ಮಾದರಿಗಳು ಬದಲಾಗುತ್ತವೆ. ಚಳಿಗಾಲವು ತೀವ್ರವಾಗಿ ತಣ್ಣಗಾಗಬಹುದು. ಹವಾಮಾನ ಬದಲಾವಣೆಯು ಬೆಂಗಳೂರಿನಲ್ಲಿ ಗಮನಾರ್ಹವಾಗಿ ಕಾಣಿಸಿಕೊಳ್ಳುತ್ತದೆ' ಎಂದು IMD ಯ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.












Click it and Unblock the Notifications