ಮಹಿಳೆಯರೇ ಎಚ್ಚರ: ಬೆಂಗಳೂರಲ್ಲಿ ಕಚೇರಿಗೆ ನುಗ್ಗಿ ಲೈಂಗಿಕ ಕಿರುಕುಳಕ್ಕೆ ಯತ್ನ: ನಿಷ್ಕ್ರೀಯ ಪೊಲೀಸ್ ಎಂದ ಎಎಪಿ
ಬೆಂಗಳೂರು, ಸೆಪ್ಟಂಬರ್ 06: ಹಾಡುಹಗಲೇ ಬೆಂಗಳೂರಿನ ಚರ್ಚ್ ಸ್ಟ್ರೀಟ್ ಕಚೇರಿ ಒಂದಕ್ಕೆ ಏಕಾಏಕಿ ಪ್ರವೇಶಿಸಿದ ಕಾಮಂದನೊಬ್ಬ ಕಚೇರಿಯಲ್ಲಿದ್ದ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಹೀಗಾದರೆ ನಗರದಲ್ಲಿ ಮಹಿಳೆಯರಿಗೆ ಸುರಕ್ಷತೆ ಇದೆಯೆ? ಎಂದು ಪ್ರಶ್ನಿಸಿದ ಆಮ್ ಆದ್ಮಿ ಪಕ್ಷ, ಪೊಲೀಸರು ನಿಷ್ಕ್ರಿಯೆಗೊಂಡಿದ್ಧಾರೆ ಎಂದು ಆರೋಪಿಸಿದೆ.
ಈ ಪ್ರಕರಣವನ್ನು ಬೆಳಕಿಗೆ ತಂದ ಆಮ್ ಆದ್ಮಿ ಪಕ್ಷದ ಬೆಂಗಳೂರು ಮಾಧ್ಯಮ ಸಂಚಾಲಕ ಅನಿಲ್ ನಾಚಪ್ಪ ವಿಡಿಯೋ ಮತ್ತು ಆಡಿಯೋ ದಾಖಲೆಗಳನ್ನು ಬಿಡುಗಡೆ ಮಾಡಿ ಬುಧವಾರ ಸುದ್ದಿಗಾರರಿಗೆ ಮಾಹಿತಿ ನೀಡಿದೆ.

ಯುವಕನೊಬ್ಬ ಏಕಾಎಕಿ ಕಚೇರಿಗೆ ಪ್ರವೇಶಿಸಿ ಮಹಿಳಾ ಉದ್ಯೋಗಿಗೆ ನೇರವಾಗಿ ಲೈಂಗಿಕ ಚಟುವಟಿಕೆಗೆ ಬರಬೇಕೆಂದು ಪೀಡಿಸಿದ ಪ್ರಸಂಗ ನಡೆದಿದೆ. ಇದು ನಿಜಕ್ಕೂ ಬೆಂಗಳೂರಿನ ಖ್ಯಾತಿಗೆ ಮಸಿ ಬಳೆಯುವಂತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಘಟನೆ ನಡೆದ ತಕ್ಷಣವೇ ಮಹಿಳಾ ಉದ್ಯೋಗಿಯು ಹತ್ತಿರದ ಕಬ್ಬನ್ ಪಾರ್ಕ್ ಪೊಲೀಸರಿಗೆ ಕರೆ ಮಾಡಿದ್ದಾರೆ. ದೂರು ನೀಡಿದರು ಸಹ ಪೊಲೀಸರು ತಕ್ಷಣದಲ್ಲಿ ಸಹಕರಿಸದೆ ಕೈ ಚೆಲ್ಲಿ ಕುಳಿತರು. ಸೂಕ್ತ ಸಮಯದಲ್ಲಿ ಸ್ಥಳಕ್ಕೆ ಆಗಮಿಸದೆ ನಂತರ ಒತ್ತಡ ಬಂದಾಗ ನಾಮಕಾವಸ್ಥೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುವ ಕಾರ್ಯವನ್ನು ಕೈಗೊಂಡರು ಎಂದು ಅವರು ವಿವರಿಸಿದರು.
ನಗರದಲ್ಲಿ ಸಿಸಿ ಕ್ಯಾಮೆರಾ ನಿಷ್ಕ್ರೀಯ ಮಾಹಿತಿ ಬಹಿರಂಗ
ಹತ್ತಿರದ ರಸ್ತೆಯಲ್ಲಿ ಇದ್ದ ಸಿಸಿ ಕ್ಯಾಮರಾಗಳು ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ಹೀಗಾಗಿ ಕಿರುಕುಳ ನೀಡಿದ್ದ ಆರೋಪಿಯನ್ನು ಹಿಡಿಯಲು ಸಾಕಷ್ಟು ಕಷ್ಟವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ಬೆಂಗಳೂರು ಪೊಲೀಸರು ಮಹಿಳಾ ಸುರಕ್ಷತೆಯ ವಿಚಾರದಲ್ಲಿ ಸಾಕಷ್ಟು ಬೇಜವಾಬ್ದಾರಿಯನ್ನು ಹೊಂದಿದ್ದಾರೆ ಎಂಬುದು ಸಾಬೀತಾಗುತ್ತದೆ ಎಂದು ಅವರು ದೂರಿದರು.

ಬೆಂಗಳೂರಿನ ಅನೇಕ ಪ್ರಮುಖ ರಸ್ತೆಗಳಲ್ಲಿ ಸುರಕ್ಷತೆಗಾಗಿ ಹಾಕಿರುವ ಸಿಸಿ ಕ್ಯಾಮೆರಾಗಳು ಸಂಪೂರ್ಣ ನಿಷ್ಕ್ರಿಯವಾಗಿರುವ ವಿಚಾರ ಪೊಲೀಸರಿಂದಲೇ ಬೆಳಕಿಗೆ ಬಂದಿದೆ. ಠಾಣೆಯಲ್ಲಿ ಯಾವುದೇ ದೂರು ನೀಡಿದರು ಸಿಸಿ ಕ್ಯಾಮೆರಾ ಗಳು ಕೆಲಸ ಮಾಡುತ್ತಿಲ್ಲವೆಂಬ ಉತ್ತರ ಸಿಗುತ್ತದೆ ಎಂದು ಅವರು ಹೇಳಿದರು.
ಸಿಸಿ ಕ್ಯಾಮೆರಾಗಳ ಕೆಲಸ, ಜನರ ರಕ್ಷಣೆಗೆ ಆಗ್ರಹ
ಪೊಲೀಸರ ಬೇಜವಾಬ್ದಾರಿ, ನಿಷ್ಕ್ರಿಯಗೊಂಡ ಸಿಸಿ ಕ್ಯಾಮೆರಾ ಇವೆಲ್ಲವುಗಳು ಬೆಂಗಳೂರಿನ ಘನತೆಗೆ ಗೌರವ ತರುವಂತದ್ದಲ್ಲ. ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡಿ ನಗರ ಸುರಕ್ಷತೆಗೆ ಹಾಕಿರುವ ಸಿಸಿ ಕ್ಯಾಮೆರಾಗಳು ಭ್ರಷ್ಟಾಚಾರ ರೂಪದಲ್ಲಿ ಏಜೆನ್ಸಿಗಳು ಹಾಗೂ ಸ್ಥಳೀಯ ರಾಜಕಾರಣಿಗಳ ಪಾಲಾಗುತ್ತಿದೆ. ಜನರಿಗೆ ಸುರಕ್ಷತೆ ಇಲ್ಲದಾಗಿದೆ.
ಬೆಂಗಳೂರಿನ ಜನತೆಗೆ ಈ ಕ್ಯಾಮೆರಾ ಗಳಿಂದ ಯಾವುದೇ ಸುರಕ್ಷತೆ, ರಕ್ಷಣೆ ಲಭ್ಯವಿಲ್ಲದಂತಾಗಿದೆ. ಕೂಡಲೇ ಗೃಹ ಸಚಿವರು ತನಿಖೆಯನ್ನು ನಡೆಸಿ ಸಿಸಿ ಕ್ಯಾಮೆರಾಗಳ ಕಾರ್ಯ ಶೈಲಿಯನ್ನು ಪರಿಶೀಲಿಸಿ ಮಹಿಳೆಯರ ಸುರಕ್ಷತೆಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಅನಿಲ್ ನಾಚಪ್ಪ ಅವರು ಆಗ್ರಹಿಸಿದರು.












Click it and Unblock the Notifications