ಹಾರ್ಪಿಕ್ ಕುಡಿಸಿ ಕೊಲೆಗೆ ಯತ್ನಿಸಿದ ಖದೀಮ ಗಂಡ

ಪತಿ ನರೇಂದ್ರ ಬಾಬು ಟಾಯ್ಲೆಟ್ ಶುಚಿ ಮಾಡಲು ಬಳಸುವ ಹಾರ್ಪಿಕ್‌ನ್ನು ಬಲವಂತವಾಗಿ ಕುಡಿಯಲು ಹೇಳಿ ಸಾಯಿಸಲು ಪ್ರಯತ್ನಿಸಿದ್ದಾರೆ ಎಂದು ಪತ್ನಿ ಶೀಲಾ ದೂರು ನೀಡಿದ್ದಾರೆ.
ನಗರದ ಮಲ್ಟಿನ್ಯಾಷನಲ್ ಕಂಪೆನಿ ಉದ್ಯೋಗಿ ನರೇಂದ್ರ ಬಾಬು ಶೀಲಾ(27) ಅವರನ್ನು ವಿವಾಹವಾಗಿದ್ದು ಕಳೆದ ಕೆಲ ತಿಂಗಳಿನಿಂದ ಅರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಈ ಸಮಸ್ಯೆಯಿಂದ ಹೊರ ಬರಲು ತವರು ಮನೆಯ ಆಸ್ತಿಯನ್ನು ತನ್ನ ಹೆಸರಿಗೆ ಬರೆದು ಕೊಡುವಂತೆ ಪತ್ನಿ ಶೀಲಾಗೆ ಬೆದರಿಸುತ್ತಿದ್ದ.
ಆದರೆ ಶೀಲಾ ಅವರು ಬೆದರಿಕೆಗೆ ಜಗ್ಗದೆ ಇರುವುದನ್ನು ಮನಗೊಂಡ ಪತಿ ನರೇಂದ್ರ ಬಾಬು ತಾಯಿ ಜೊತೆಗೂಡಿ ಶೀಲಾರನ್ನು ಕೊಲ್ಲುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದರು. ಅದರಂತೆ ಮೇ.19ರಂದು ಬೆಂಗಳೂರಿನ ದೊಡ್ಡಕಲ್ಲಸಂದ್ರ, ಕನಕಪುರ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲೇ ಶೀಲಾರನ್ನು ಕೊಲ್ಲುವ ನಿರ್ಧಾರವನ್ನು ತಾಯಿ ಮತ್ತು ಮಗ ಮಾಡಿಕೊಂಡಿದ್ದಾರೆ.
ಅಂದು ಬೆಳಗ್ಗೆ ನರೇಂದ್ರ ಬಾಬುವಿನ ಮೊಬೈಲ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಮೊಬೈಲ್ ಸರಿಯಾಗಿ ನಿರ್ವಹಿಸದೇ ಇರುವುದಕ್ಕೆ ಪತ್ನಿ ಶೀಲಾವೇ ಕಾರಣ ಎಂದು ಸುಮ್ಮನೇ ಕ್ಯಾತೆ ತೆಗೆದಿದ್ದಾನೆ. ಶೀಲಾ ನಾನಲ್ಲ ಎಂದು ಹೇಳಿದರೂ ಕೇಳದ ಪತಿ, ತನ್ನ ತಾಯಿಯ ಜೊತೆ ಸೇರಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಶೀಲಾ ದೂರಿನಲ್ಲಿ ಹೇಳಿದ್ದಾರೆ.
ಆರಂಭದಲ್ಲಿ ಕೈ ಕಾಲುಗಳನ್ನು ಕಟ್ಟಿ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿ ಸಾಯಿಸಲು ಪ್ರಯತ್ನಿಸಿದ್ದ. ಆದರೆ ಶೀಲಾ ಅವರು ತಡೆದ ಕಾರಣ ಟಾಯ್ಲೆಟ್ ಕ್ಲೀನ್ ಮಾಡಲು ಬಳಸುವ ಹಾರ್ಪಿಕ್‌ನ್ನು ಬಲವಂತವಾಗಿ ಕುಡಿಯಲು ಹೇಳಿದ್ದಾನೆ. ಶೀಲಾ ಅವರು ಇದಕ್ಕೆ ಪ್ರತಿರೋಧ ತೋರಿದಾಗ ಎರಡು ವರ್ಷ ಮಗನಿಗೂ ಹಾರ್ಪಿಕ್ ಕುಡಿಸಿ ಸಾಯಿಸುವುದಾಗಿ ನರೇಂದ್ರಬಾಬು ಬೆದರಿಸಿದ್ದಾನೆ.
ಕೈಯಿಂದ ಹೊಡೆದದ್ದು ಮಾತ್ರವಲ್ಲದೇ ಗಾಜಿನಿಂದ ಇವರ ದೇಹಕ್ಕೆ ಗಾಯ ಮಾಡಿದ್ದಾನೆ. ಪತಿಯ ಹೊಡೆತಕ್ಕೆ ಇವರು ನೆಲಕ್ಕೆ ಉರುಳಿ ಬಿದಿದ್ದಾರೆ. ಈ ಹೊತ್ತಿಗೆ ತನ್ನ ಸಹೋದರನಿಗೆ ಅಂಗಡಿಯಿಂದ ಏನೋ ತರಲು ಹೇಳಿ ರೂಮಿನಿಂದ ಕಾಲ್ಕಿತ್ತಿದ್ದಾನೆ. ಪತಿ ರೂಮಿನಿಂದ ಹೊರ ಹೋದ ಕೂಡಲೇ ಶೀಲಾ ಅವರು ಕಷ್ಟಪಟ್ಟು 108 ನಂಬರ್‌ಗೆ ಕರೆ ಮಾಡಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದೀಗ ಶೀಲಾ ಅವರ ಆರೋಗ್ಯ ಸುಧಾರಿಸುತ್ತಿದ್ದು ಜೂನ್.8 ಕ್ಕೆ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪತಿ, ಅತ್ತೆ ಸೇರಿ ಏಳು ಜನರ ವಿರುದ್ಧ ವರದಕ್ಷಿಣೆ ಕಿರುಕುಳ ದೂರನ್ನು ಅವರು ನೀಡಿದ್ದಾರೆ.












Click it and Unblock the Notifications