ಮಲ್ಲೇಶ್ವರದ ಸಿಟಿಆರ್ ದೋಸೆ ಈಗ ಏರ್‌ಪೋರ್ಟ್‌ನಲ್ಲೂ ಲಭ್ಯ, ದರ ಎಷ್ಟು
ಬೆಂಗಳೂರು, ಜನವರಿ 11: ಬೆಂಗಳೂರು ನಗರದ ದೋಸೆ ಪ್ರಿಯರಿಗೆ ಸಿಹಿಸುದ್ದಿಯೊಂದಿದೆ. ನಗರದ ಪುರಾತನ ದೋಸೆ ಹೋಟೆಲ್ ಈಗ ತನ್ನ ಶಾಖೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದೇವನಹಳ್ಳಿಯಲ್ಲಿಯೂ ತೆರೆದಿದೆ. ನಗರದ ಜಂಜಾಟ ತಪ್ಪಿಸಿಕೊಂಡು ಲಾಂಗ್ ಡ್ರೈವ್ ಹೋಗಲು ಬಯಸುವವರು ಏರ್‌ಪೋರ್ಟ್‌ಗೆ ಹೋಗಿ ಸಿಟಿಆರ್ ದೋಸೆ ಸವಿದು, ಬಿಸಿ ಬಿಸಿ ಫಿಲ್ಟರ್ ಕಾಫಿ ಕುಡಿದು ವಾಪಸ್ ಆಗಬಹುದು.
ಹಟ್ಟಿ ಕಾಫಿ, ಊರು ಕ್ಯಾಂಟೀನ್, ಮಯ್ಯಾಸ್ ಬಳಿಕ ಈಗ ಮಲ್ಲೇಶ್ವರ ಪ್ರಸಿದ್ಧ ಸೆಂಟ್ರಲ್ ಟಿಫನ್ ರೂಂ/ ಸಿಟಿಆರ್/ ಶ್ರೀ ಸಾಗರ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 (ಆಗಮನ)ದಲ್ಲಿ ತನ್ನ ಶಾಖೆಯನ್ನು ಆರಂಭಿಸಿದೆ.

ಈ ಕುರಿತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಒಒ ಸತ್ಯಕಿ ರಘುನಾಥ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಸಿಟಿಆರ್ ದೋಸೆ ಜೊತೆಗೆ ಕುಳತಿರುವ ಫೋಟೋವನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ದೋಸೆ ದರ ಎಷ್ಟು?; 1920ರಲ್ಲಿ ಮಲ್ಲೇಶ್ವರದಲ್ಲಿ ಆರಂಭವಾದ ಸಿಟಿಆರ್ ಬೆಣ್ಣೆ ಮಸಾಲೆ ದೋಸೆ, ಫಿಲ್ಟರ್ ಕಾಫಿಗೆ ಅತ್ಯಂತ ಜನಪ್ರಿಯವಾಗಿದೆ. ಸಿನಿಮಾ ತಾರೆಯರು, ಕ್ರಿಕೆಟ್ ಆಟಗಾರರು, ರಾಜಕಾರಣಿಗಳು ಇಲ್ಲಿನ ಬಿಸಿ ಬಿಸಿ ದೋಸೆ ಸವಿದಿದ್ದಾರೆ, ವಾರಾಂತ್ಯದಲ್ಲಿ ಈಗಲೂ ಸಿಟಿಆರ್‌ಗೆ ಹೋದರೆ ದೋಸೆ ಸವಿಯಲು ಕ್ಯೂ ನಿಲ್ಲುವುದು ಅನಿವಾರ್ಯವಾಗಿದೆ.
ಈಗ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತನ್ನ ಶಾಖೆಯನ್ನು ಸಿಟಿಆರ್ ತೆರೆದಿದೆ. ಸಿಟಿಆರ್ ಮಲ್ಲೇಶ್ವರಕ್ಕೆ ಹೋಲಿಕೆ ಮಾಡಿದರೆ ಏರ್‌ಪೋರ್ಟ್‌ನಲ್ಲಿ ದೋಸೆಯ ದರ ಅಧಿಕವಾಗಿದೆ. ಸಿಟಿಆರ್‌ನ ಪ್ರಸಿದ್ಧ ಬೆಣ್ಣೆ ಮಸಾಲೆ ದೋಸೆ ದರ 90 ರೂ. ಆಗಿದೆ. ಆದರೆ ಏರ್‌ಪೋರ್ಟ್‌ನಲ್ಲಿ ಇದರ ದರ 285 ರೂ.ಗಳು.
2024ರ ಅಕ್ಟೋಬರ್‌ನಲ್ಲಿಯೇ ಏರ್‌ಪೋರ್ಟ್‌ನಲ್ಲಿ ಸಿಟಿಆರ್, ರಾಮೇಶ್ವರಂ ಕೆಫೆ ಆರಂಭವಾಗುವ ಕುರಿತು ಮಾಹಿತಿ ಬಂದಿತ್ತು. ಸದ್ಯ ಸಿಟಿಆರ್ ಆರಂಭವಾಗಿದ್ದು, ಮಾರ್ಚ್‌ನಲ್ಲಿ ಟರ್ಮಿನಲ್ -1ರಲ್ಲಿ ನಗರದ ಮತ್ತೊಂದು ಜನಪ್ರಿಯ ಹೋಟೆಲ್ ರಾಮೇಶ್ವರಂ ಕೆಫೆ ಆರಂಭವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈಗ ಏರ್‌ಪೋರ್ಟ್‌ನ ಟರ್ಮಿನಲ್-2 ಲಾಂಜ್‌ನಲ್ಲಿ ಹಟ್ಟಿಕಾಫಿ, ಟರ್ಮಿನಲ್-1 ನಿರ್ಗಮನದ ಬಳಿ ಊರು ಕ್ಯಾಂಟೀನ್, ಟರ್ಮಿನಲ್-2 ನಿರ್ಗಮನದ ಬಳಿ ಮಯ್ಯಾಸ್ ಇದೆ. ಈಗ ಸಿಟಿಆರ್ ಸಹ ಟರ್ಮಿನಲ್-2ನಲ್ಲಿ ಆರಂಭವಾಗಿದೆ.
2024ರ ಮಾರ್ಚ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏರ್‌ಪೋರ್ಟ್‌ನಲ್ಲಿ ಇಂದಿರಾ ಕ್ಯಾಂಟೀನ್ ಸಹ ಲೋಕಾರ್ಪಣೆ ಮಾಡಿದ್ದರು. ಪಾರ್ಕಿಂಗ್ ಏರಿಯಾ ಮತ್ತು ಮತ್ತೊಂದು ಕಡೆ ಇರುವ ಈ ಕ್ಯಾಂಟೀನ್ 5 ರೂ.ಗೆ ಉಪಹಾರ, 10 ರೂ.ಗೆ ಊಟ ನೀಡುವ ಮೂಲಕ ಏರ್‌ಪೋರ್ಟ್ ಕ್ಯಾಬ್ ಚಾಲಕರಿಗೆ ಅನುಕೂಲ ಮಾಡಿಕೊಟ್ಟಿವೆ.
2021ರಲ್ಲಿ ರಾಮೇಶ್ವರಂ ಕೆಫೆ ಆರಂಭಗೊಂಡಿತು. 4 ವರ್ಷಗಳಲ್ಲೇ ಅತ್ಯಂತ ಜನಪ್ರಿಯ ಹೋಟೆಲ್ ಆಗಿ ಇದು ಬೆಳವಣಿಗೆ ಹೊಂದಿದೆ. ನಗರದ ಹಲವು ಕಡೆ ಶಾಖೆಗಳಿದ್ದು, ಏರ್‌ಪೋರ್ಟ್‌ನಲ್ಲಿಯೂ ಮಾರ್ಚ್‌ನಲ್ಲಿ ಶಾಖೆ ಆರಂಭವಾಗಲಿದೆ. ಇಲ್ಲಿನ ನಂದಿನಿ ತುಪ್ಪ ಬಳಕೆ ಈಗಾಗಲೇ ಎಲ್ಲಾ ಕಡೆ ಮನೆ ಮಾತಾಗಿದೆ.
ಹಟ್ಟಿಕಾಫಿ, ಮಯ್ಯಾಸ್, ಸಿಟಿಆರ್ ಮೂಲಕ ವಿಮಾನ ನಿಲ್ದಾಣದಲ್ಲಿ ದೋಸೆಯ ದರ ಸಮರ ಆರಂಭವಾಗಿದೆ. ಇನ್ನು ರಾಮೇಶ್ವರಂ ಕೆಫೆ ಆರಂಭವಾದರೆ ದೋಸೆಗಳ ಬೆಲೆಗಳಲ್ಲಿ ಏರಿಳಿತ ಕಂಡು ಬರಲಿದೆ. ಬೆಂಗಳೂರಿನ ನೆಚ್ಚಿನ ಹೋಟೆಲ್‌ಗಳ ಖಾದ್ಯವನ್ನು ಏರ್‌ಪೋರ್ಟ್‌ನಲ್ಲಿಯೇ ಸವಿದು, ಪ್ರಯಾಣಿಕರು ನಗರಕ್ಕೆ ಆಗಮಿಸಬಹುದು.
75 ದೇಶಿಯ, 30 ಅಂತರಾಷ್ಟ್ರೀಯ ಮಾರ್ಗದ ಸಂಪರ್ಕವನ್ನು ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿದೆ. ದೇಶದ ಪ್ರಯಾಣಿಕ ದಟ್ಟಣೆಯ ವಿಮಾನ ನಿಲ್ದಾಣಗಳಲ್ಲಿ ಕೆಐಎ 3ನೇ ಸ್ಥಾನದಲ್ಲಿದೆ. 2024ರಲ್ಲಿ 40 ಲಕ್ಷ ಪ್ರಯಾಣಿಕರು ಏರ್‌ಪೋರ್ಟ್‌ಗೆ ಭೇಟಿ ನೀಡಿದ್ದಾರೆ.












Click it and Unblock the Notifications