Mohamed Muizzu: ಮಾಲ್ಡೀವ್ಸ್ ಅಧ್ಯಕ್ಷರ ಪತ್ನಿಗೂ ನಮ್ಮ ಬೆಂಗಳೂರಿಗೂ ಇದೆ ನಂಟು!
ಭಾರತವೆಂದರೆ ಕೆಂಡಕಾರುತ್ತಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು (Mohamed Muizzu) ಇದೀಗ ಮೂರು ದಿನಗಳ ಪ್ರವಾಸ ಕೈಗೊಂಡು, ಸಿಲಿಕಾನ್ ಸಿಟಿ ಬೆಂಗಳೂರಿಗೂ ಬಂದಿಳಿದಿದ್ದಾರೆ. ಮುಯಿಝು ಅವರೊಂದಿಗೆ ಪತ್ನಿ ಸಾಜಿದಾ ಮೊಹಮ್ಮದ್ ಅವರು ಉದ್ಯಾನಗರಿಗೆ ಬಂದಿದ್ದಾರೆ. ಆದರೆ, ಸಾಜಿದಾ ಅವರಿಗೆ ಬೆಂಗಳೂರು ಹೊಸದೇನಲ್ಲ ಎನ್ನುವ ಅಚ್ಚರಿಯ ಸಂಗತಿ ಇದೀಗ ಗಮನ ಸೆಳೆದಿದೆ.
ಮಾಲೆಯಲ್ಲಿ ಜನಿಸಿದ ಸಾಜಿದಾ ಅವರು 2003ರಲ್ಲಿ ತಮ್ಮ ಬ್ಯಾಚುಲರ್ ಪದವಿಯನ್ನು ಭಾರತದಲ್ಲೇ ಪೂರ್ಣಗೊಳಿಸಿದ್ದಾರೆ. ಮುಖ್ಯವಾಗಿ ಬೆಂಗಳೂರಿನ ಪ್ರತಿಷ್ಠಿತ ಸೇಂಟ್ ಜೋಸೆಫ್ ಕಾಲೇಜಿನಲ್ಲೇ ಸಾಜಿದಾ ತಮ್ಮ ಪದವಿಯನ್ನು ಪೂರ್ಣಗೊಳಿಸಿರುವ ವಿಚಾರ ಇದೀಗ ಎಲ್ಲೆಡೆಯೂ ಅಚ್ಚರಿ ಮೂಡಿಸಿದೆ.

ಬಳಿಕ ಅವರು ಯುನೈಟೆಡ್ ಕಿಂಗ್‌ಡಂನಲ್ಲಿ (ಯುಕೆ) ತನ್ನ ಪತಿಯೊಂದಿಗೆ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ಬಳಿಕ ಮಾಲ್ಡೀವ್ಸ್‌ನ ಸಿವಿಲ್ ಸರ್ವಿಸ್ ಕಮಿಷನ್‌ನಲ್ಲಿ ನಾಗರಿಕ ಸೇವಕರಾಗಿ ಕೆಲಸ ಮಾಡಿದರು ಎಂದು ಹೇಳಲಾಗಿದೆ.
ಹಾಗಾಗಿ ಈ ಪ್ರವಾಸವು ಮೊಹಮ್ಮದ್ ಮುಯಿಝು ಅವರಿಗೆ ಮಾತ್ರವೇ ಹೊಸದಾಗಿದ್ದು, ಪತ್ನಿ ಸಾಜಿದಾ ಅವರು ಒಂದು ರೀತಿಯಲ್ಲಿ ನಮ್ಮ ಬೆಂಗಳೂರಿನವರೇ ಎಂದು ಹೇಳಲಾಗುತ್ತಿದೆ. ಮೂರು ದಿನಗಳ ಪ್ರವಾಸದ ನಿಮಿತ್ತ ಮೊದಲಿಗೆ ದೆಹಲಿ ತಲುಪಿದ್ದ ದಂಪತಿ, ಇಂದು ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ್ದಾರೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನಕ್ಕೆ ಬಂದ ಮುಯಿಝು ದಂಪತಿಯನ್ನು ರಾಜ್ಯ ಸಚಿವರಾದ ಎಂ.ಸಿ ಸುಧಾಕರ್ ಅವರು ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಉಮಾ ಮಹದೇವನ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿಸಿ ಡಾ.ಎನ್.ಶಿವಶಂಕರ್, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮುಯಿಝು ದಂಪತಿ ಭೇಟಿಯ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಿಂದ ಪ್ರಕಟಣೆವೊಂದನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಮಾಲ್ಡೀವ್ಸ್ ಅಧ್ಯಕ್ಷರು ಹಾಗೂ ಆ ರಾಷ್ಟ್ರದ ಪ್ರಥಮ ಮಹಿಳೆ (ಸಾಜಿದಾ) ಅವರ ನೇತೃತ್ವದ ಮಾಲ್ಡೀವ್ಸ್ ನಿಯೋಗದ ಭೇಟಿಯನ್ನು ಬೆಂಗಳೂರಿನಲ್ಲಿ ಆಯೋಜಿಸಲು ತುಂಬಾ ಸಂತೋಷವಾಗಿದೆ. ಸಾಜಿದಾ ಅವರು ಬೆಂಗಳೂರಿನಲ್ಲಿ ವಿದ್ಯಾರ್ಥಿಯಾಗಿದ್ದರು ಎಂಬ ವಿಚಾರ ನಮ್ಮ ಸಂತಸವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದೆ.

ಮಾಲ್ಡೀವ್ಸ್ ಸರ್ಕಾರವು ಬೆಂಗಳೂರಿನ ಪ್ರಮುಖ ಐಟಿ ಉದ್ಯಮದೊಂದಿಗೆ ಪಾಲುದಾರಿಕೆಯನ್ನು ಹೊಂದಲು ಆಸಕ್ತಿ ಹೊಂದಿದೆ. ನಮ್ಮ ಪ್ರವಾಸೋದ್ಯಮದ ಘೋಷವಾಕ್ಯ "ಒಂದು ರಾಜ್ಯ, ಹಲವು ಪ್ರಪಂಚ". ಸುಮಾರು 300 ಕಿ.ಮೀ ಕರಾವಳಿಯ ಹೊರತಾಗಿಯೂ, ನಾವು ವಿಶ್ವದ ಎರಡನೇ ಅತಿ ದೊಡ್ಡ ಶೋಲಾ ಅರಣ್ಯವನ್ನು ಹೊಂದಿದ್ದೇವೆ. ಪಕ್ಷಿಧಾಮಗಳು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸಲು ಮಾಲ್ಡೀವ್ಸ್ ಜೊತೆಗಿನ ಪಾಲುದಾರಿಕೆಯನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಸಿಎಂ ಕಚೇರಿ ತಿಳಿಸಿದೆ.
ಸಾಜಿದಾ ಅವರು ಬೆಂಗಳೂರಿಗೆ ಈಗಾಗಲೇ ಪರಿಚಿತರಾಗಿರುವುದರಿಂದ ಖುದ್ದು ಅವರೇ ತಮ್ಮ ಪತಿ ಮೊಹಮ್ಮದ್ ಮುಯಿಝು ಅವರಿಗೆ ಸಿಲಿಕಾನ್ ಸಿಟಿಯನ್ನು ತೋರಿಸಲಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications