Jagadish Shettar: ಜಗದೀಶ್ ಶೆಟ್ಟರ್ ವಿರುದ್ಧ ಮಹೇಶ್ ಟೆಂಗಿನಕಾಯಿಗೆ ಟಿಕೆಟ್

ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಜೀನಾಮೆ ನೀಡಿದ ಕ್ಷೇತ್ರದಲ್ಲಿ ಅಚ್ಚರಿಯ ಅಭ್ಯರ್ಥಿಯನ್ನ ಬಿಜೆಪಿ ಆಯ್ಕೆ ಮಾಡಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಆಪ್ತ ಮಹೇಶ್ ಟೆಂಗಿನಕಾಯಿಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದ ಟಿಕೆಟ್ ನೀಡಿದೆ ಬಿಜೆಪಿ. ಈ ಮೂಲಕ ಜಗದೀಶ್ ಶೆಟ್ಟರ್ ವಿರುದ್ಧ ಕಮಲ ಪಡೆ ನಾಯಕರು ಮತ್ತೊಂದು ಅಸ್ತ್ರ ಪ್ರಯೋಗಿಸಿದ್ದಾರೆ.

ನಿನ್ನೆ ಜಗದೀಶ್ ಶೆಟ್ಟರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಬಿರುಸಿನ ಬೆಳವಣಿಗೆಗಳು ಬಿಜೆಪಿಯಲ್ಲಿ ನಡೆದಿದ್ದವು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿಗೆ ಪಕ್ಷದಿಂದ ಟಿಕೆಟ್‌ ನೀಡಲು ಸಿದ್ಧತೆ ನಡೆಸಿದ್ದ ರಾಜ್ಯ ನಾಯಕರು, ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹುಬ್ಬಳ್ಳಿಯ ಆದರ್ಶ ನಗರದ ಮನೆಯಲ್ಲಿ ರಹಸ್ಯ ಸಭೆ ಕೂಡ ನಡೆದಿತ್ತು. ಈ ಚರ್ಚೆಯಲ್ಲಿ ಮಹೇಶ್ ಟೆಂಗಿನಕಾಯಿ ಸಹ ಭಾಗಿಯಾಗಿದ್ದಾರೆ ಎನ್ನಲಾಗಿತ್ತು. ಇಷ್ಟೆಲ್ಲಾ ಊಹಾಪೋಹಗಳ ನಡುವೆ ಬಿಜೆಪಿ ಮಹೇಶ್ ಟೆಂಗಿನಕಾಯಿಗೆ ಟಿಕೆಟ್ ನೀಡಿದೆ.

Mahesh tenginkai will face Jagadish Shettar in Hubli-Dharwad central constituency

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಜೊತೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಆಪ್ತರೂ ಹೌದು. ಇಷ್ಟೆಲ್ಲಾ ಇದ್ದರೂ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ಕೊಡದೆ, ಮಹೇಶ್ ಟೆಂಗಿನಕಾಯಿ ಅವರನ್ನೇ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವುದು ಬಿಜೆಪಿ ನಾಯಕರಿಗೆ ಕಷ್ಟದ ಕೆಲಸವಾಗಿತ್ತು. ಆದರೆ ಜಗದೀಶ್ ಶೆಟ್ಟರ್‌ ನಿನ್ನೆ ರಾಜೀನಾಮೆ ನೀಡಿದ ಬಳಿಕ ಹಾದಿ ಸುಗಮವಾಗಿ, ಮಹೇಶ್ ಟೆಂಗಿನಕಾಯಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

ಜಗದೀಶ್ ಶೆಟ್ಟರ್ ವಿರುದ್ಧ ಜಾತಿ ಅಸ್ತ್ರ?

ಇದೀಗ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಮಹೇಶ್ ಟೆಂಗಿನಕಾಯಿ ಕೂಡ ಜಗದೀಶ್ ಶೆಟ್ಟರ್ ಅವರ ಸಮುದಾಯಕ್ಕೆ ಸೇರಿದವರು. ಅದರಲ್ಲೂ ಇಬ್ಬರೂ ಲಿಂಗಾಯತ ಬಣಜಿಗ ಸಮುದಾಯಕ್ಕೆ ಸೇರಿದವರು. ಈ ಮೂಲಕ ಲಿಂಗಾಯತ ಸಮುದಾಯದ ಕೋಪಕ್ಕೆ ಗುರಿಯಾಗುವ ಬದಲು, ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಚರ್ಚೆ ಶುರುವಾಗಿದೆ. ಈಗಾಗಲೇ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ಅಲಂಕರಿಸಿರುವ ಮಹೇಶ್ ಟೆಂಗಿನಕಾಯಿಗೆ ತಮ್ಮದೇ ಪಕ್ಷದಿಂದ ಶಾಸಕರಾಗಿ, ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಎದುರಾಳಿ ಆಗಲಿದ್ದಾರೆ.

ಜಗದೀಶ್ ಶೆಟ್ಟರ್ ನಿರ್ಧಾರಕ್ಕೆ ಕಾಯುತ್ತಿದ್ರಾ?

ದಿಢೀರ್ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಸರು ಘೋಷಣೆ ಆಗಿರುವುದನ್ನು ನೋಡಿದರೆ, ಶೆಟ್ಟರ್ ಕಾಂಗ್ರೆಸ್ ಸೇರುವ ತನಕ ಬಿಜೆಪಿ ಕಾಯುತ್ತಿತ್ತಾ? ಎಂಬ ಪ್ರಶ್ನೆ ಮೂಡಿದೆ. 2 ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ ಹೈಕಮಾಂಡ್, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರ ಖಾಲಿ ಬಿಟ್ಟಿತ್ತು. ಇದರಿಂದಾಗಿ ಜಗದೀಶ್ ಶೆಟ್ಟರ್ ಕೋಪಗೊಂಡು ವರಿಷ್ಠರನ್ನ ಪ್ರಶ್ನೆ ಮಾಡಿದ್ದರು. ಟಿಕೆಟ್ ಸಿಗುವುದಿಲ್ಲ ಎಂಬುದು ಕನ್ಫರ್ಮ್ ಆಗುತ್ತಿದ್ದಂತೆ ಶೆಟ್ಟರ್ ಬಿಜೆಪಿ ತೊರೆದು ಇಂದು ಕಾಂಗ್ರೆಸ್ ಸೇರಿದ್ದಾರೆ. ಇತ್ತ ಶೆಟ್ಟರ್ ಕಾಂಗ್ರೆಸ್ ಸೇರುತ್ತಿದ್ದಂತೆ ಬಿಜೆಪಿ ಟೆಂಗಿನಕಾಯಿಗೆ ಟಿಕೆಟ್ ಕನ್ಫರ್ಮ್ ಮಾಡಿದೆ.

ಡ್ಯಾಮೇಜ್ ಕಂಟ್ರೋಲ್‌ ಸೂತ್ರ?

ಬಿಜೆಪಿ ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡುತ್ತಿದೆ ಎಂಬ ಆರೋಪದ ಬೆನ್ನಲ್ಲೇ ಜಗದೀಶ್ ಶೆಟ್ಟರ್ ಸ್ಪರ್ಧಿಸಬೇಕಿದ್ದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರಕ್ಕೆ ಲಿಂಗಾಯತ ಅಭ್ಯರ್ಥಿಯನ್ನೇ ಆಯ್ಕೆ ಮಾಡಿದೆ. ಈ ಮೂಲಕ ಬಿಜೆಪಿ ಡ್ಯಾಮೇಜ್ ಕಂಟ್ರೋಲ್‌ ಸೂತ್ರದ ಮೊರೆ ಹೋಯ್ತಾ? ಎಂಬ ಚರ್ಚೆ ಕೂಡ ಶುರುವಾಗಿದೆ. ಒಟ್ನಲ್ಲಿ ಇಷ್ಟುದಿನ ಕಗ್ಗಂಟಾಗಿ ಉಳಿದಿದ್ದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಫೈನಲ್ ಆಗಿದ್ದು, ನಾಮಿನೇಷನ್ ಯಾವಾಗ ಮಾಡ್ತಾರೆ ಎಂಬುದೇ ಕುತೂಹಲ ಕೆರಳಿಸಿದೆ. ಮತ್ತೊಂದು ಕಡೆ ಜಗದೀಶ್ ಶೆಟ್ಟರ್ ಮಣಿಸಲು ಬಿಜೆಪಿಯ ಘಟಾನುಘಟಿ ನಾಯಕರೇ ಈ ಕ್ಷೇತ್ರದ ಪ್ರಚಾರಕ್ಕೆ ಬರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+