ಟ್ಯಾಂಕರ್ ನೀರು ಸುರಿದು ಕೆಆರ್ ವೃತ್ತ ಅಂಡರ್‌ಪಾಸ್ ಪರಿಶೀಲನೆ: ಸಾಮಾಜಿಕ ಕಾರ್ಯಕರ್ತರ ವಿರೋಧ
ಬೆಂಗಳೂರು, ಜೂನ್ 09: ಬೆಂಗಳೂರಿನಲ್ಲಿ ಬಾರಿ ಮಳೆಯಿಂದಾಗಿ ಯುವತಿ ಸಾವಿಗೀಡಾದ ಅಂಡರ್‌ಪಾಸ್ ನಲ್ಲಿ ಟ್ಯಾಂಕರ್ ನೀರು ಸುರಿದು ಪರಿಕ್ಷೆ ಮಾಡಲಾಗಿದೆ. ಬೇಸಿಗೆ ಈಗಷ್ಟೇ ಅಂತ್ಯಗೊಂಡಿದೆ. ಈ ಮಧ್ಯೆ ಕೆ.ಆರ್.ವೃತ್ತದ ಅಂಡರ್‌ಪಾಸ್‌ಗೆ ನೀರು ಸುರಿದು ಪರಿಶೀಲಿಸಿದ್ದಕ್ಕೆ ಕೆಲವರು ಬೇಸರ ಸಹ ವ್ಯಕ್ತಪಡಿಸಿದ್ದಾರೆ.
ನಗರದ ಕೆ.ಆರ್.ವೃತ್ತದ ಅಂಡರ್‌ಪಾಸ್‌ನಲ್ಲಿ ಕಳೆದ ಮೇ 21ರಂದು ಮಳೆ ನೀರಿಗೆ ಸಿಲುಕಿ ಯುವತಿ ಯೊಬ್ಬಳು ಅಸುನೀಗಿದ್ದರು. ಇದು ದೊಡ್ಡ ಸುದ್ದಿಯಾಗಿತ್ತು. ಈ ಘಟನೆ ಕುರಿತು ಬಿಬಿಎಂಪಿ ಸಹ ಒಂದಷ್ಟು ಪರಿಶೀಲನೆ, ಭರವಸೆ ಬಳಿಕ ಸುಮ್ಮನಾಯಿತು.

ಘಟನೆ ಸಂಬಂಧ ರಾಜ್ಯ ಲೋಕಾಯುಕ್ತರು ಸ್ವಯಂ ಪ್ರೇರಿತ ದೂರುಗಳನ್ನು ದಾಖಲಿಸಿಕೊಂಡಿದ್ದಾರೆ. ಬಳಿಕ ಮಳೆ ನೀರು ತುಂಬಿಕೊಂಡಿದ್ದ ಕೆ.ಆರ್.ವೃತ್ತದ ಅಂಡರ್‌ಪಾಸ್‌ಗೆ ಭೇಟಿ ನೀಡಿದ ಲೋಕಾಯುಕ್ತ ಐಜಿಪಿ ಸುಬ್ರಹ್ಮಣ್ಣೇಶ್ವರ್ ರಾವ್ ನೇತೃತ್ವದ ತಂಡವು ಸ್ಥಳ ಪರಿಶೀಲಿಸಿತು. ನಾಲ್ಕು ಟ್ಯಾಂಕರ್ ನೀರು ಸುರಿದು ನೀರು ಯಾಕೆ ಇಲ್ಲಿ ಹರಿಯುತ್ತಿಲ್ಲ, ಎಲ್ಲಿ ಸಂಗ್ರಹವಾಗುತ್ತದೆ ಎಂದೆಲ್ಲ ತಂಡದ ಸದಸ್ಯರು ಗಮನಿಸಿದರು.
ಒಳಚರಂಡಿ ಹರಿವು ಹೆಚ್ಚಾಗ ಘಟನೆ ನಡೆದಿದೆ
ಇದೇ ವೇಳೆ ಬಿಬಿಎಂಪಿ ಅಧಿಕಾರಿಗಳಿಂದ ಸಮಸ್ಯೆ ಏನಿತ್ತು, ತಮ್ಮ ಗಮನಕ್ಕೆ ಬಂದ ಅಂಶಗಳೇನು ಎಂಬ ಮಾಹಿತಿ ಕಲೆ ಹಾಕಲಾಯಿತು. ಅಂಡರ್‌ಪಾಸ್‌ನಲ್ಲಿ ಒಳಚರಂಡಿಯಲ್ಲಿ ನೀರಿನ ಹರಿವು ಅಧಿಕವಾದ ಕಾರಣದಿಂದಾಗಿ ನೀರು ನಿಂತು ದುರಂತ ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಸುಬ್ರಹ್ಮಣ್ಣೇಶ್ವರ್ ರಾವ್ ಮಾಹಿತಿ ನೀಡಿದರು.

ಹೀಗೆ ಲೋಕಾಯುಕ್ತ ಅಧಿಕಾರಿಗಳು ಅಂಡರ್‌ಪಾಸ್ ಪರಿಶೀಲನೆಗೆ ನೀರಿನ ಕೊರತೆ ಇದ್ದ ಸಂದರ್ಭದಲ್ಲಿ ಟ್ಯಾಂಕರ್‌ಗಳ ನೀರು ಸುರಿದಿರುವುದು ವಿಪರ್ಯಾಸವೇ ಸರಿ. ಕೆಲವು ದಿನಗಳಿಂದ ನಗರದಲ್ಲಿ ಒಂದೆಡೆ ನೀರಿದ್ದರೆ, ಮತ್ತೊಂಡೆ ನೀರಿನ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಯಾವ ಕ್ರಮ ಕೈಗೊಂಡಿಲ್ಲ.
ಸಾಮಾಜಿಕ ಕಾರ್ಯಕರ್ತರ ಅಸಮಾಧಾನ
ಇನ್ನೂ ದೈನಂದಿನ ಅಗತ್ಯೆಗಳಿಗಾಗಿ ನೀರಿನ ಟ್ಯಾಂಕರ್ ಪಡೆಯುವುದು ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಅಂಡರ್‌ಪಾಸ್‌ನಲ್ಲಿ ನೀರು ವ್ಯರ್ಥವಾಗಿ ಹರಿಸಲಾಗಿದೆ. ಮಳೆಗಾಲದಲ್ಲಿ ಗಮನಿಸುವುದು ಬಿಟ್ಟು ಈಗ ನೀರು ಹರಿಸಿ ಪರಿಶೀಲನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಮಾಜಿಕ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.
ನೀರಿನ ಅಭಾವ ಸಂದರ್ಭದಲ್ಲಿ ವ್ಯರ್ಥವಾಗಿ ನೀರು ಸುರಿದದ್ದು ಕೇಳಿ ಆಘಾತವಾಗಿದೆ. ಮಳೆಗಾಲದಲ್ಲಿ ಅಂಡರ್‌ಪಾಸ್ ಪರಿಶೀಲಿಸಿಲ್ಲ. ಈ ಅಂಡರ್‌ಪಾಸ್ ಲೋಕಾಯುಕ್ತ ಕಚೇರಿಯಿಂದ ಅನತಿ ದೂರದಲ್ಲಿದೆ. ನೀರು ನಿಂತಾಗಲೇ ಹೋಗಿ ಪರಿಶೀಲಿಸಬಹುದಿತ್ತು. ಅದನ್ನು ಬಿಟ್ಟು ಅದಕ್ಕಾಗಿಯೇ ಟ್ಯಾಂಕರ್‌ಗಟ್ಟಲೇ ನೀರು ಹರಿಸಿ ಪರಿಶೀಲಿಸಿದ್ದನ್ನು ನೋಡಿದರೆ, ಅವರ ಬುದ್ಧಿವಂತಿಕೆ ಬಗ್ಗೆ ಅನುಮಾನ ಮೂಡುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್ ಹೇಳಿದರು.












Click it and Unblock the Notifications