Bengaluru Rains : ಮಂಗಳವಾರ ಸಂಜೆ ಕೆಲವೆಡೆ ಜೋರು ಮಳೆ ದಾಖಲು
ಬೆಂಗಳೂರು, ಡಿಸೆಂಬರ್ 13: ಬೆಂಗಳೂರಿನಲ್ಲಿ ಎರಡು ದಿನದ ಹಿಂದೆ ತಣ್ಣಗಾಗಿದ್ದ ಮಳೆ ಮಂಗಳವಾರ ಸಂಜೆ ನಂತರ ಮತ್ತೆ ಸುರಿಯಲು ಆರಂಭಿಸಿದೆ. ರಾತ್ರಿ 9.30 ಗಂಟೆ ಹೊತ್ತಿಗೆ ಯಲಹಂಕ ವಲಯದಲ್ಲಿ ಅಧಿಕ 14ಮಿ.ಮೀ. ಮಳೆ ದಾಖಲಾಗಿದೆ. ರಸ್ತೆಯಲ್ಲಿ ನೀರು ನಿಂತ ಪರಿಣಾಮ ಕೆಲ ಕಾಲ ವಾಹನಗಳ ಸವಾರರು ತೊಂದರೆ ಅನುಭವಿಸಬೇಕಾಯಿತು.
ಹವಾಮಾನ ಇಲಾಖೆ ಇನ್ನೇನು ರಾಜ್ಯದಲ್ಲಿ ಮಳೆ ಕಡಿಮೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಅದರ ಬೆನ್ನಲ್ಲೇ ನಗರದಲ್ಲಿ ಜೋರು ಮಳೆ ಸುರಿದೆ. ಇದು ಡಿಸೆಂಬರ್ 15ರಂದು ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಲಿದೆ ಎನ್ನುತ್ತಿರುವ ವಾಯುಭಾರ ಕುಸಿತದ ಮುನ್ಸೂಚನೆ ಎನ್ನಲಾಗುತ್ತಿದೆ.
ಈ ಹಿಂದಿನ ಹವಾಮಾನ ವೈಪರಿತ್ಯ ಹಾಗೂ ಮಾಂಡೌಸ್ ಚಂಡಮಾರುತ ಪರಿಣಾಮವಾಗಿ ನಗರದಲ್ಲಿ ಎಡೆಬಿಡದೆ ಸುರಿದಿದ್ದ ಮಳೆ ಎರಡು ದಿನದ ಹಿಂದೆ ಕಡಿಮೆಯಾಗಿತ್ತು. ಮಂಗಳವಾರ ಬೆಳಗ್ಗೆಯಿಂದಲೂ ಬಿಸಿಲಿನ ದರ್ಶನವಾಯಿತು. ಆದರೆ ಸಂಜೆ ನಂತರ ಮೋಡ ಮುಸುಕಿನ ವಾತಾವರಣ ನಿರ್ಮಾಣವಾಗಿ ದಿಢೀರನೆ ಮಳೆ ಆರಂಭವಾಯಿತು. ಇದರಿಂದ ನಗರದ ಕೆಲವು ಪ್ರಮುಖ ರಸ್ತೆಗಳು, ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ತುಂಬಿ ಹರಿಯಿತು.
ಯಲಹಂಕದಲ್ಲಿ 14ಮಿ.ಮೀ.ಅಧಿಕ ಮಳೆ ಸುರಿದರೆ, ಕೊನೇನ ಅಗ್ರಹಾರದಲ್ಲಿ 13.5ಮಿಲಿ ಮೀಟರ್, ರಾಜಮಹಲ್ ಗುಟ್ಟಹಳ್ಳಿ ಯಲ್ಲಿ 12.5ಮಿಲಿ ಮೀಟರ್, ದೊಡ್ಡಾನೆಕ್ಕುಂದಿ 12ಸೆಂಟಿ ಮೀಟರ್, ಸಂಪಂಗಿರಾಮನಗರ ಮತ್ತು ಬೆಳ್ಳಂದೂರಲ್ಲಿ ತಲಾ 11ಮಿಲಿ ಮೀಟರ್ ಮತ್ತು ಹೊರಮಾವಿನಲ್ಲಿ 10.5 ಮಿಲಿ ಮೀಟರ್ ಮಳೆ ಆಗಿದೆ.

ಇದರೊಂದಿಗೆ ಚೌಡೇಶ್ವರಿ ನಗರ, ಜಿಕೆವಿಕೆ, ಹೆಬ್ಬಾಳ, ಜಯನಗರ, ಮೆಜೆಸ್ಟಿಕ್, ಬಸವನಗುಡಿ, ಮಲ್ಲೇಶ್ವರಂ, ಶೇಷಾದ್ರಿಪುರಂ, ಮಹದೇವಪುರ, ರಾಜಾಜಿನಗರ, ಹೂಡಿ, ಕೆಂಗೇರಿ, ಆರ್‌ಆರ್ ನಗರ, ಜ್ಞಾನಭಾರತಿ, ವಿದ್ಯಾರಣ್ಯಪುರ ಸೇರಿದಂತೆ ಇನ್ನಿತರ ಬಡಾವಣೆಗಳಲ್ಲಿ ಗುಡುಗು ಸಹಿತ ಹಗುರ ಮಳೆ ಬಿದ್ದಿದೆ. ಕೆಆರ್ ಮಾರುಕಟ್ಟೆ, ಟೌನ್‌ಹಾಲ್, ಚಾಲುಕ್ಯ ವೃತ್ತ, ಕೆ.ಆರ್ ವೃತ್ತ, ಮೆಜೆಸ್ಟಿಕ್ ಸುತ್ತಮುತ್ತಲಿನ ರಸ್ತೆಗಳು ಮತ್ತು ಸುಜಾತ, 80ಅಡಿ ರಸ್ತೆ, ನಾಯಂಡಹಳ್ಳಿ ಜಂಕ್ಷನ್ ರಸ್ತೆ ಮೇಲೆ ನೀರು ನಿಂತಿದ್ದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಬುಧವಾರದಿಂದ ಮತ್ತೆ ಚಳಿ, ಮಂಜು
ನಗರದಲ್ಲಿ ಜೋರು ಮಳೆ ಆಗುವುದು ಬಹುತೇಕ ಅನುಮಾನ ಎನ್ನಲಾಗಿದೆ. ಆದರೆ ನಗರದ ಬಹಳಷ್ಟು ಕಡೆಗಳಲ್ಲಿ ಆಗಾಗ ಹಗುರ ಮಳೆ ಸುರಿಯುವ ಜೊತೆಗೆ ದಿನವೀಡಿ ಚಳಿ ವಾತಾವರಣ ಕಂಡು ಬರಲಿದೆ. ಬುಧವಾರದಿಂದ ಬೆಳಗ್ಗೆ ದಟ್ಟ ಮಂಜು ಕವಿಯಲಿದೆ. ದಿನವೀಡ ಚಳಿ ಆವರಿಸಲಿದ್ದು, ಮೋಡ ಮುಸುಕಿದ ವಾತಾವರಣವೇ ನಗರಾದ್ಯಂತ ಮುಂದುವರಿಲಿದೆ. ಈ ಅವಧಿಯಲ್ಲಿ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 17-18ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ನಿರೀಕ್ಷೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.












Click it and Unblock the Notifications