ಬೆಂಗಳೂರಿನಲ್ಲಿ ಫುಟ್‌ಪಾತ್ ಮೇಲೆ ವಾಹನ ಚಲಾಯಿಸಿದವ್ರಿಗೆ ಇನ್ಮುಂದೆ ಐತಿ ಮಾರಿಹಬ್ಬ
ಬೆಂಗಳೂರು, ಫೆಬ್ರವರಿ, 03: ಬೆಂಗಳೂರಿನಲ್ಲಿ ಸಂಚಾರ ನಿಯಮಗಳ ಬಗ್ಗೆ ಪೊಲೀಸರು ಆಗಾಗ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಲಿರುತ್ತಾರೆ. ಆದರೂ ಕೆಲ ವಾಹನ ಸವಾರರು ನಿಯಮಗಳನ್ನು ಗಾಳಿಗೆ ತೂರಿ ಫುಟ್‌ಬಾತ್ ಮೇಲೆಯೇ ವಾಹನಗಳನ್ನು ಹತ್ತಿಸಿಕೊಂಡು ಹೋಗುವುದನ್ನು ಮುಂದುವರೆಸಿದ್ದಾರೆ. ಇದರಿಂದ ಪಾದಚಾರಿಗಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಇದೀಗ ಇದಕ್ಕೆಲ್ಲ ಕಡಿವಾಣ ಹಾಕಲು ಟ್ರಾಫಿಕ್ ಪೊಲೀಸರು ಕಟ್ಟಿನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.
ಸಂಚಾರಿ ಪೊಲೀಸರು ವಾಹನ ಸವಾರರಿಗೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡಬೇಡಿ. ಇದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತದೆ ಎಂದು ಮನವಿ ಮಾಡಿಕೊಳ್ಳುತ್ತಲೇ ಇರುತ್ತಾರೆ. ಆದರೂ ಕೆಲ ವಾಹನ ಸವಾರರು ಇದನ್ನು ಉಲ್ಲಂಘಿಸಿ ವಾಹನಗಳನ್ನು ಫುಟ್‌ಬಾತ್ ಮೇಲೆಯೇ ಹತ್ತಿಸುತ್ತಿದ್ದಾರೆ. ಇದೀಗ ಇಂತವರ ವಿರುದ್ಧ ಸಂಚಾರಿ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಟ್ರಾಫಿಕ್ ಜಾಮ್ ಅಂತಾ ಫುಟ್‌ಪಾತ್ ಮೇಲೆಯೇ ಗಾಡಿ ಓಡಿಸುವವರ ವಿರುದ್ಧ ನೂತನ ಅಸ್ತ್ರ ಪ್ರಯೋಗಿಸಲು ಬೆಂಗಳೂರು ಸಂಚಾರಿ ಪೊಲೀಸರು ನಿರ್ಧರಿಸಿದ್ದಾರೆ.

ದಂಡಾಸ್ತ್ರ ಜಾರಿ ಮಾಡಿದರೂ, ಬಗ್ಗದ ವಾಹನ ಸವಾರರ ಪರವಾನಗಿ ಅಮಾನತು ಮಾಡಲು ಸಂಚಾರಿ ಪೊಲೀಸರು ನಿರ್ಧರಿಸಿದ್ದಾರೆ. ಪಾದಚಾರಿಗಳ ಸುರಕ್ಷತೆ ದೃಷ್ಠಿಯಿಂದ ಸಂಚಾರಿ ಪೊಲೀಸರು ಈ ನಿಯಮ ಜಾರಿ ಮಾಡಿದ್ದಾರೆ. ಈ ಹಿಂದೆ ಫುಟಪಾತ್ ಮೇಲೆ ವಾಹನಗಳನ್ನು ಓಡಿಸಿದರೆ ಸಂಚಾರಿ ಪೊಲೀಸರು ದಂಡ ಹಾಕುತ್ತಿದ್ದರು. ದಂಡ ವಿಧಿಸಿದರೂ ವಾಹನ ಸವಾರರು ಮಾತ್ರ ಕ್ಯಾರೆ ಅನ್ನದೆ, ಮತ್ತೆ ತಮ್ಮ ವಾಹನಗಳನ್ನು ಫುಟ್‌ಪಾತ್ ಮೇಲೆ ಓಡಿಸುತ್ತಿರವುದು ಬೆಳಕಿಗೆ ಬಂದಿದೆ.
ಆದ್ದರಿಂದ ಬೆಂಗಳೂರು ಸಂಚಾರಿ ಪೊಲೀಸ್ ಹಿರಿಯ ಅಧಿಕಾರಿಗಳು ಸಭೆ ನಡೆಸಿ, ಸಂಚಾರ ನಿಯಮ ಉಲ್ಲಂಘಿಸಿ ತಮ್ಮ ವಾಹನಗಳನ್ನು ಫುಟ್‌ಪಾತ್ ಮೇಲೆ ಹತ್ತಿಸುವವರ ವಾಹನ ಚಾಲನಾ ಪರವಾನಗಿಯನ್ನು ರದ್ದು ಮಾಲು ನಿರ್ಧರಿಸಿದ್ದಾರೆ. ಮೊದಲ ಬಾರಿಗೆ ದಂಡ ಹಾಕಲಾಗುತ್ತದೆ. ಮತ್ತೆ ಮತ್ತೆ ಸಿಕ್ಕಿಬಿದ್ದರೇ, ಅಂತಹವರ ಲೈಸೆನ್ಸ್ ಅಮಾನತು ಮಾಡುವಂತೆ ಸಂಚಾರಿ ಪೊಲೀಸರು ಶಿಪಾರಸ್ಸು ಮಾಡುತ್ತಾರೆ. ಈ ಹಿನ್ನೆಲೆ ಇನ್ಮುಂದೆ ಫುಟ್‌ಪಾತ್ ಮೇಲೆ ವಾಹನಗಳನ್ನು ಓಡಿಸುವ ಮುನ್ನ ಯೋಚಿಸಿ ಎಂದು ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಡ್ರಂಕ್ & ಡ್ರೈವ್ ವಿರುದ್ಧ ಸಂಚಾರಿ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು, ಜನವರಿ 27ರಿಂದ ಫೆಬ್ರವರಿ 2ರವರೆಗೆ ತಪಾಸಣೆಯಲ್ಲಿ 80 ಲಕ್ಷ ರೂಪಾಯಿ ದಂಡ ಸಂಗ್ರಹಿಸಲಾಗಿದೆ. ಬೆಂಗಳೂರಿನ 50 ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ತಪಾಸಣೆ ನಡೆದಿದೆ. ಕಳೆದ 1 ವಾರದಲ್ಲಿ 800 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಮಾಹಿತಿ ನೀಡಿದರು.












Click it and Unblock the Notifications