ಬೆಂಗಳೂರು ಶಿಕ್ಷಕರ ಕ್ಷೇತ್ರ; ಉಪ ಚುನಾವಣೆ ಮತದಾರರ ಪಟ್ಟಿ ಗೊಂದಲ
ಬೆಂಗಳೂರು, ಆಗಸ್ಟ್ 09; ಚುನಾವಣಾ ಆಯೋಗ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಉಪ ಚುನಾವಣೆಗೆ ಶೀಘ್ರವೇ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ. ಜೆಡಿಎಸ್ ಪಕ್ಷ ಉಪ ಚುನಾವಣೆಗೆ ಈಗಾಗಲೇ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿಜೆಪಿಯ ಪುಟ್ಟಣ್ಣ ರಾಜೀನಾಮೆ ನೀಡಿರುವುದರಿಂದ ಉಪ ಚುನಾವಣೆ ನಡೆಯಬೇಕಿದೆ. ಆಯ್ಕೆಯಾಗುವ ಸದಸ್ಯರ ಅವಧಿ ಮೂರು ವರ್ಷಕ್ಕಿಂತ ಅಧಿಕವಾಗಿದೆ.

ಒಟ್ಟು ಎರಡು ಸ್ಥಾನಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ಆದರೆ ಉಪ ಚುನಾವಣೆ ಮತದಾರರ ಪಟ್ಟಿ ಬಗ್ಗೆ ಗೊಂದಲ ಉಂಟಾಗಿದೆ. ಮತದಾರರ ಪಟ್ಟಿ ಅವೈಜ್ಞಾನಿಕವಾಗಿದೆ ಎಂಬ ಆರೋಪವಿದೆ. ಆದ್ದರಿಂದ ಉಪ ಚುನಾವಣೆ ವೇಳಾಪಟ್ಟಿ ಘೋಷಣೆಯಾದರೆ 6 ವರ್ಷದ ಹಿಂದಿನ ನೋಂದಣಿ ಪರಿಗಣನೆ ಮಾಡುವ ಸಾಧ್ಯತೆ ಇದೆ.
ಏನು ಗೊಂದಲವಿದೆ?; ಬೆಂಗಳೂರು ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆ ಒಳಗೊಂಡಿದೆ. 2026ರ ನವೆಂಬರ್ 11ರ ತನಕ ಸದಸ್ಯತ್ವದ ಅವಧಿ ಇದೆ. ಪುಟ್ಟಣ್ಣ ರಾಜೀನಾಮೆ ನೀಡಿದ ಕಾರಣಕ್ಕೆ ಈಗ ಉಪ ಚುನಾವಣೆ ನಡೆಯುವುದು ಅನಿವಾರ್ಯವಾಗಿದೆ.
ಬೆಂಗಳೂರು ಪದವೀಧರ ಕ್ಷೇತ್ರ, ಆಗ್ನೇಯ ಪದವೀಧರ ಕ್ಷೇತ್ರ, ದಕ್ಷಿಣ ಶಿಕ್ಷಕರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಹಾಲಿ ಸದಸ್ಯರ ಅವಧಿ ಜೂನ್ 2024ಕ್ಕೆ ಮುಗಿಯಲಿದೆ. ಆ ಚುನಾವಣೆಗೂ ಮೊದಲು ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಿದೆ.
ಆದರೆ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಈಗಲೇ ಉಪ ಚುನಾವಣೆ ನಡೆಯುವುದರಿಂದ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುವುದಿಲ್ಲ. ಆದ್ದರಿಂದ 6 ವರ್ಷಗಳ ಹಿಂದೆ ತಯಾರು ಮಾಡಿದ ಪಟ್ಟಿಯ ಅನ್ವಯವೇ ಮತದಾನ ನಡೆಸಬೇಕಾಗುತ್ತದೆ.
ಮೂರು ವರ್ಷದಿಂದ ನಿರಂತರವಾಗಿ ಶಿಕ್ಷಕ ವೃತ್ತಿ ಮಾಡುತ್ತಿರುವವರು ಮತದಾನ ಮಾಡಲು ಅರ್ಹರು. ಆರು ವರ್ಷದ ಹಿಂದೆ ಮತದಾರರ ಪಟ್ಟಿ ಸೇರಿದವರು ಈಗ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆಯೇ?. ಆರು ವರ್ಷದ ಬಳಿಕ ಶಿಕ್ಷಕರಾಗಿ ಸೇರ್ಪಡೆಗೊಂಡವರು ಮತದಾರರ ಪಟ್ಟಿ ಸೇರಿಲ್ಲ. ಆದ್ದರಿಂದ ಗೊಂದಲ ಉಂಟಾಗಿದೆ.
ನವೆಂಬರ್ 2020ರಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯ ಪುಟ್ಟಣ್ಣ ಗೆಲುವು ಸಾಧಿಸಿದ್ದರು. ಈ ಬಾರಿಯ ವಿಧಾನಸಭೆ ಚುನಾವಣೆ ಸಮಯದಲ್ಲಿ ಪುಟ್ಟಣ್ಣ ವಿಧಾನ ಪರಿಷತ್ ಸದಸ್ಯತ್ವ, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು.
ರಾಜಾಜಿನಗರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. 50564 ಮತಗಳನ್ನು ಪಡೆದು ಬಿಜೆಪಿಯ ಸುರೇಶ್ ಕುಮಾರ್ ವಿರುದ್ಧ ಸೋತಿದ್ದರು. ಈಗ ಅವರು ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಪರಿಷತ್ ಉಪ ಚುನಾವಣೆ ಟಿಕೆಟ್ ಬಯಸಿದ್ದಾರೆ, ಪ್ರಚಾರವನ್ನು ನಡೆಸುತ್ತಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದ ಜೊತೆ ಮಂಗಳೂರು, ಉಡುಪಿ, ತುಮಕೂರು, ಕೊಡಗು, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಒಳಗೊಂಡ ನೈಋತ್ಯ ಪದವೀಧರ ಕ್ಷೇತ್ರಕ್ಕೂ ಉಪ ಚುನಾವಣೆ ನಡೆಯಬೇಕಿದೆ. ಈ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿಜೆಪಿಯ ಆಯನೂರು ಮಂಜುನಾಥ್ ವಿಧಾನಸಭೆ ಚುನಾವಣೆ ಸಮಯದಲ್ಲಿ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಬಿಟ್ಟು ಜೆಡಿಎಸ್ ಸೇರಿದ್ದರು.
ಜೆಡಿಎಸ್ ಪಕ್ಷ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿಯಗಿ ಎ. ಪಿ. ರಂಗನಾಥ್ ಹೆಸರು ಘೋಷಣೆ ಮಾಡಿದೆ. ವಕೀಲ ರಂಗನಾಥ್ ಜೆಡಿಎಸ್‌ನ ಕಾನೂನು ವಿಭಾಗದ ರಾಜ್ಯಾಧ್ಯಕ್ಷರು. 2020ರಲ್ಲಿ ನಡೆದ ಚುನಾವಣೆಯಲ್ಲಿಯೂ ಎ. ಪಿ. ರಂಗನಾಥ್ ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ 2228 ಮತಗಳ ಅಂತರದಲ್ಲಿ ರಂಗನಾಥ್ ಸೋಲಿಸಿದ್ದರು.












Click it and Unblock the Notifications