RR Nagar: ಕನ್ನಡಿಗರು-ತಮಿಳರ ಮಧ್ಯೆ ಮುನಿರತ್ನ ಹೇಳಿಕೆಯಿಂದ ಕಿಡಿ: ಪೊಲೀಸರಿಗೆ ಕಸುಮಾ ದೂರು, ಏನಿದು ಹೇಳಿಕೆ?
ಬೆಂಗಳೂರು, ಮಾರ್ಚ್ 31: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲ್ಲು ಎಲ್ಲ ಪ್ರಕ್ಷಗಳು ಸಜ್ಜಾಗಿವೆ. ನಾಯಕರ ಆರೋಪ ಪ್ರತ್ಯಾರೋಪಗಳು ಮಾಮೂಲು. ಆದರೆ ಇಲ್ಲೊಬ್ಬ ಸಚಿವರೇ ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅವರ ವಿರುದ್ಧ ದೂರು ಸಹ ದಾಖಲಿಸಲಾಗಿದೆ.
ಕನ್ನಡ ನೆಲದಲ್ಲಿ ನಿಂತು ತಮಿಳು-ಕನ್ನಡ ಮಾತನಾಡುವವರ ಮಧ್ಯೆ ತಮಿಳಿನಲ್ಲಿ ದ್ವೇಷದ ಕಿಚ್ಚು ಹೊತ್ತಿಸಿ "ಹಿಂಸಿಸಿ, ಮುಂದಿನದು ನಾನು ನೋಡ್ಕೊಂತೀನಿ" ಎಂಬ ಬಹಿರಂಗ ಪ್ರಚೋದನೆಯಿಂದ ಯಾರಿಗಾದರೂ ಪ್ರಾಣಹಾನಿಯಾದರೆ ಯಾರು ಹೊಣೆ?
— Kusuma Hanumantharayappa (@KusumaH_INC) March 31, 2023
ತನ್ನ ಬೆಂಬಲಿಗರ ಹಾಗೂ ಸಾಮಾನ್ಯ ಜನರ ಜೀವಕ್ಕೆ ಇವರ ಬಳಿ ಬೆಲೆ ಇಲ್ಲವೇ? pic.twitter.com/IIE500V7mm
ಬೆಂಗಳೂರು ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಹಾಲಿ ತೋಟಗಾರಿಕೆ ಸಚಿವ ಮುನಿರತ್ನ ಅವರು ಸಾರ್ವಜನಿಕ ವೇದಿಕೆ ಮೇಲೆ ಕನ್ನಡಿಗರು ಮತ್ತು ತಮಿಳರ ಮಧ್ಯೆ ಸಂಘರ್ಷಕ್ಕೆ ದಾರಿಯಾಗುವಂತೆ ಮಾತನಾಡಿದ್ದಾರೆ. ಹೀಗೆಂದು ಆರೋಪಿಸಿರುವ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿಯಾದ ಕುಸುಮಾ ಹನುಮಂತರಾಯಪ್ಪ ಅವರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಕನ್ನಡಿಗರು ಒಳಗೆ ಬಂದರೆ ಅವರ ಮೇಲೆ ಹಲ್ಲೆ ಮಾಡುವಂತೆ ತಮಿಳರಿಗೆ ಬಿಜೆಪಿ ಶಾಸಕ ಮುನಿರತ್ನ ಪ್ರಚೋದನೆ ನೀಡಿದ್ದಾರೆ ಎಂದು ಕುಸುಮಾ ಅವರು ಆರೋಪಿಸಿದ್ದಾರೆ. ಈ ಕುರಿತು ತಮ್ಮ ಟ್ವೀಟ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಕರ್ನಾಟಕ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಮೊನೆಯನ್ನಷ್ಟೇ ದಿನಾಂಕ ಘೋಷಣೆಯಾಗಿದೆ. ಹೇಗಾದರೂ ಮಾಡಿ ಆಡಳಿತ ಚುಕ್ಕಾಣಿ ಹಿಡಿಯಲು ಉಭಯ ಪಕ್ಷಗಳು ಹರಸಾಹಸ ನಡೆಸುತ್ತಿದೆ. ಇದೀಗ ರಾಜರಾಜೇಶ್ವರಿ ನಗರದ ಸಚಿವ ಮುನಿರತ್ನ ವಿರುದ್ಧ ಪ್ರಚೋದನಕಾರಿ ಹೇಳಿಕೆ ಆರೋಪಿಸಿ, ಕಾಂಗ್ರೆಸ್ ನಾಯಕಿ ಕುಸುಮಾ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಕುಸುಮಾ ಅವರ ಆಗಿದ್ದೇನು?
ತೋಟಗಾರಿಕೆ ಸಚಿವ ಮುನಿರತ್ನ ಅವರು ಸಾರ್ವಜನಿಕ ವೇದಿಕೆಯೊಂದರಲ್ಲಿ ತಮಿಳಿನಲ್ಲಿ ಮಾತನಾಡುತ್ತ 'ತಮಿಳು ಭಾಷಿಕರು ಕನ್ನಡ ಭಾಷಿಕರ ಮೇಲೆ ಹಲ್ಲೆ ಮಾಡುವಂತೆ' ಸೂಚನೆ ನೀಡುವಂತೆ ಮಾತನಾಡಿದ್ದಾರೆ. ಅವರು ಈ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ತಮಿಳು ಮತ್ತು ಕನ್ನಡಿಗರ ನಡುವೆ ಸಂಘರ್ಷಕ್ಕೆ ಎಡೆಮಾಡಿ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ತಮ್ಮ ದೂರಿನಲ್ಲಿ ಆರೋಪ ಮಾಡಿದ್ದಾರೆ.

ಟ್ವೀಟ್‌ನಲ್ಲಿ ಕಸುಮಾ ಅವರು, ಜಾಲಹಳ್ಳಿ ವಾರ್ಡಿನ ಖಾತಾನಗರಕ್ಕೆ ಯಾರಾದರೂ ಬಂದರೆ "ಹೊಡೆದು ಕಳಿಸಿರಿ" ಎಂದು ಕ್ಷೇತ್ರದ ಶಾಸಕ ಸಾರ್ವಜನಿಕ ಸಭೆಯಲ್ಲಿ ನಿಂತು ತಮಿಳಿನಲ್ಲಿ ಪ್ರಚೋದಿಸಿ ಚುನಾವಣೆಯ ಸಮಯದಲ್ಲಿ ನೇರವಾಗಿ ಅಶಾಂತಿ ಸೃಷ್ಟಿಸಲೆತ್ನಿಸುತ್ತಾರೆಂದರೆ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯ ಬಗ್ಗೆ ಆತಂಕ ಹುಟ್ಟಿಸುತ್ತದೆ ಎಂದು ಬರೆದುಕೊಂಡು ಮುನಿರತ್ನ ಮಾತನಾಡಿರುವ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಮುನಿರತ್ನ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ
ಇನ್ನೂ ಅದೇ ಟ್ವೀಟ್ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯಿಸಿದೆ, ಸಮಾಜದಲ್ಲಿ ಸಾಮರಸ್ಯ ಕದಡುವುದು ಬಿಜೆಪಿ ಪಕ್ಷದ ಹುಟ್ಟುಗುಣವಾಗಿದೆ. ಮುನಿರತ್ನ ಹೊಡಿರಿ, ಬಡಿರಿ ಎಂದು ನಿರ್ದೇಶನ ನೀಡುತ್ತಿರುವುದು ಬಿಜೆಪಿ ರೌಡಿ ಮೋರ್ಚಾದವರಿಗಾ? ಅಥವಾ ಕನ್ನಡ ಭಾಷಿಕರಿಗೂ, ತಮಿಳು ಭಾಷಿಕರಿಗೂ ದ್ವೇಷ ಹಚ್ಚುವ ಕೆಲಸವೇ? ಹಿಂಸೆಗೆ ಪ್ರಚೋದಿಸುವ ಮುನಿರತ್ನ ವಿರುದ್ಧ ಚುನಾವಣಾ ಆಯೋಗ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಈ ಹಿಂದೆ 2020ರ ನವೆಂಬರ್ ತಿಂಗಳಲ್ಲಿ ನಡೆದ ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ ಹನುಮಂತರಾಯಪ್ಪ ಅವರು ಕಣಕ್ಕಿಳಿದಿದ್ದರು. ಬಳಿಕ ಬಿಜೆಪಿಯ ಎನ್. ಮುನಿರತ್ನ ಅವರ ವಿರುದ್ಧ ಸೋಲು ಕಂಡಿದ್ದರು. ಇದೀಗ ಎರಡನೇ ಬಾರಿಗೆ ರಾಜರಾಜೇಶ್ವರಿ ನಗರದಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಕುಸುಮಾ ಮುಂದಾಗಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಎನ್ನಲಾಗುತ್ತಿರುವ ಮುನಿರತ್ನ ವಿರುದ್ಧ ಕಸುಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications