ಕುರುಬ ಮಾತಿಗೆ ತಪ್ಪಲ್ಲ; ರಾಜ್ಯಕ್ಕೆ ಸಿದ್ದರಾಮಯ್ಯರ ಮಾರ್ಗದರ್ಶನ ಬೇಕು: ಶ್ರೀ ಈಶ್ವರಾನಂದಪುರೀ ಸ್ವಾಮೀಜಿ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ ಅಧಿಕಾರದಿಂದ ಹಿಂದೆ ಸರಿದಿದ್ದಾರೆ. ಹೈಕಮಾಂಡ್ ಸೂಚಿತ ನಾಯಕನಿಗೆ (ಡಿಕೆ ಶಿವಕುಮಾರ್) ಸಿಎಂ ಪಟ್ಟು ನೀಡಲು ಅನುವು ಮಾಡಿಕೊಟ್ಟಿದ್ದಾರೆ. ಈ ಹಂತದಲ್ಲಿ ಸಿದ್ದರಾಮಯ್ಯ ಅವರ ನಡೆ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಕುರುಬ ಸಮುದಾಯ ಪ್ರಮುಖ ನಾಯಕರಾಗಿ, ಸಿಎಂ ಆಗುವವರೆಗೂ ಅವರು ನಡೆದು ಬಂದ ಹಾದಿ ಸ್ಮರಿಸಲಾಗಿದೆ. ಇದೀಗ 'ನುಡಿದಂತೆ ನಡೆದ ಸಿದ್ದರಾಮಯ್ಯ' ಅವರನ್ನು ಉಲ್ಲೇಖಿಸಿ ಕಾಗಿನೆಲೆ ಕನಕಗುರುಪೀಠ ಹೊಸದುರ್ಗ ಮಠದ ಪೀಠಾಧಿಪತಿಗಳಾದ ಈಶ್ವರಾನಂದಪುರೀ ಸ್ವಾಮೀಜಿಗಳು ಸಿದ್ದರಾಮಯ್ಯರಿಗೆ ಹಾರೈಸಿದ್ದಾರೆ. ಶ್ರೀಗಳ ಫೇಸ್ಬುಕ್ ಬರಹ ಇಲ್ಲಿದೆ.
'ಕುರಿ ಹೊಲಸು ತಿನ್ನಲ್ಲ ಕುರುಬ ಮಾತಿಗೆ ತಪ್ಪಲ್ಲ ಎಂಬ ಗಾದೆ ಮಾತಿದೆ. ಈ ಮಾತಿನಂತೆ ಶ್ರೀಯುತ ಸಿದ್ದರಾಮಯ್ಯ ನೆಡೆದುಕೊಂಡಿದ್ದಾರೆ. ಪಕ್ಷದ ವರಿಷ್ಠರಿಗೆ ಕೊಟ್ಟ ಮಾತಿನಂತೆ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಿದ್ದರಾಮಯ್ಯನವರು ಒಂದು ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ'

ರಾಜ್ಯಕ್ಕೆ ಸಿದ್ದರಾಮಯ್ಯರ ಮಾರ್ಗದರ್ಶನ ಬೇಕು: ಶ್ರೀಗಳು
' ಕರ್ನಾಟಕ ರಾಜ್ಯ ಕಂಡಂತ ಮಾಸ್ ಲೀಡರ್ ಎಂದೇ ಪ್ರಸಿದ್ದಿ ಪಡೆದಿರುವ ಸಿದ್ದರಾಮಯ್ಯನವರು ಈ ರಾಜ್ಯದ ಮುಖ್ಯಮಂತ್ರಿಯಾಗಿ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ರಾಜ್ಯಕ್ಕೆ ಅವರ ಕೊಡುಗೆ ಅಪಾರ. ರಾಜ್ಯದ ಬಡವರು ಮಹಿಳೆಯರು ರೈತರು ದುರ್ಬಲ ವರ್ಗದ ಜನರ ಏಳ್ಗೆಗಾಗಿ ಶ್ರಮಿಸಿದ್ದಾರೆ. ಮುಂದೆಯೂ ಈ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಅವರ ಮಾರ್ಗದರ್ಶನ ಇರಲಿ ಎಂದು ಬಯಸುತ್ತೇವೆ.'
'ಸಿದ್ದರಾಮಯ್ಯ ಅವರು ತಮ್ಮ ಅದಿಕಾರದ ಅವಧಿಯಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಪ್ರಾಮಾಣಿಕವಾಗಿ ಅಧಿಕಾರ ನೆಡೆಸಿದ್ದಾರೆ. ಸಿದ್ದರಾಮಯ್ಯ ಅವರ ಮೇಲೆ ದೇವರ ಕೃಪೆಯಿರಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇನೆ' ಎಂದು ಈಶ್ವರಾನಂದಪುರೀ ಸ್ವಾಮೀಜಿಗಳು ಬರೆದುಕೊಂಡಿದ್ದಾರೆ.
ಸಿದ್ದರಾಮಯ್ಯಗೆ ಸಿದ್ದರಾಮಯ್ಯನೇ ಸಾಟಿ: ನೆಟ್ಟಿಗರು
ಅವರ ಪೋಸ್ಟ್ಗೆ ಹಲವರು ಕಾಮೆಂಟ್ಗಳನ್ನು ಮಾಡಿದ್ದಾರೆ. ಅದರಲ್ಲಿ ಒಬ್ಬರು, "ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ"ಸತ್ಯ ವಾಕ್ಯ ಪರಿಪಾಲಕ ಸತ್ಯಹರಿಶ್ಚಂದ್ರ. ಜಾತಿ- ಮತ, ಪಂಥದ ಅಮಲಿನಲ್ಲಿ ತುಂಬಿರುವ ಈ ಕಾಲದಲ್ಲಿ ಅವೆಲ್ಲವೂ ಮುಖ್ಯವಲ್ಲ ಮಾತೆ ಮುಖ್ಯ ಎಂದು ಹೈಕಮಾಂಡ್ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಅವರು ಮರ್ಯಾದ ಪುರುಷ ಸಿದ್ದರಾಮಯ್ಯ. ಸಿದ್ದರಾಮಯ್ಯಗೆ ಸಿದ್ದರಾಮಯ್ಯನೆ ಸಾಟಿ' ಎಂದು ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.













Click it and Unblock the Notifications