ದೀಪಾವಳಿː ಹೆಚ್ಚುವರಿ ಬಸ್ ಬಿಡಲಿರುವ ಕೆಎಸ್ ಆರ್ ಟಿಸಿ
ಬೆಂಗಳೂರು, ಅ.19: ದಸರಾ ಸಂದರ್ಭ ಊರಿಗೆ ತೆರಳಲು ಬಸ್ ಸಿಗದೇ ಪರದಾಡಿದ್ದೀರಾ? ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡು ಬಸ್ ತಪ್ಪಿಸಿಕೊಂಡಿದ್ದೀರಾ? ಈ ಬಾರಿ ಈ ಎಲ್ಲ ಚಿಂತೆ ಬಿಡಿ. ಮುಂಗಡ ಟಿಕೆಟ್ ಕಾಯ್ದಿರಿಸಿ ಊರಿಗೆ ಹಾಯಾಗಿ ತೆರಳಿ.
ಹೌದು... ಈ ಬಾರಿ ಕೆಎಸ್‌ಆರ್ ಟಿಸಿ ಜನರಿಗೆ ಸಮಸ್ಯೆಯಾಗಬಾರದೆಂದು ದೀಪಾವಳಿಗೆ ಹೆಚ್ಚುವರಿ ಬಸ್ ಸೇವೆ ನೀಡಲಿದೆ. ಅಕ್ಟೋಬರ್ 21ರಿಂದ 24ರವರೆಗೆ ಬಸ್‌ಗಳು ಸಂಚರಿಸಲಿವೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.[ಪ್ರಯಾಣ ದರ ಕಡಿತವಿಲ್ಲ, ಸಚಿವರ ಸ್ಪಷ್ಟನೆ]

ದಸರಾದಂತೆ ಈ ಬಾರಿ ದೀಪಾವಳಿಗೂ ಸರಣಿ ರಜೆ ಬಂದಿದೆ. ಹಾಗಾಗಿ ಪ್ರಯಾಣಿಕರ ಒತ್ತಡ ಹೆಚ್ಚಾಗಲಿದೆ. 22ಕ್ಕೆ ನರಕ ಚತುರ್ದಶಿ, 24ರಂದು ಬಲಿಪಾಡ್ಯಮಿಯಿದ್ದು, 26 ಭಾನುವಾರವಾಗಿದೆ. ಇದರೊಂದಿಗೆ 23 ಮತ್ತು 25ರಂದು ರಜೆ ಪಡೆದರೆ ಒಟ್ಟು ಐದು ದಿನವಾಗಲಿದ್ದು ಬೆಂಗಳೂರಿನಲ್ಲಿ ನೆಲೆಸಿರುವ ರಾಜ್ಯದ ವಿವಿಧ ಮೂಲೆಯ ಜನ ಊರಿಗೆ ತೆರಳಿದ್ದಾರೆ ಎಂದು ಕೆಎಸ್ ಆರ್ ಟಿಸಿ ತಿಳಿಸಿದೆ.
ಮಹಾನಗರದ ವಿವಿಧ ಪಿಕ್ ಅಪ್ ಪಾಯಿಂಟ್ ಗಳಿಂದಲೇ ಮುಂಗಡ ಬುಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಬಸ್‌ಗಳು ಮೈಸೂರು ರಸ್ತೆ ಬಸ್ ನಿಲ್ದಾಣ, ಆರ್ ಪಿಸಿ ಲೇಔಟ್ ಬಸ್ ನಿಲ್ದಾಣ, ವಿಜಯನಗರ ಟಿಟಿಎಂಸಿ, ಯಶವಂತಪುರ ಟಿಟಿಎಂಸಿ, ಗಂಗಾನಗರ, ಮಲ್ಲೇಶ್ವರಂ 18ನೇ ಅಡ್ಡರಸ್ತೆ, ಜಯನಗರ 4ನೇ ಬ್ಲಾಕ್, ಬನಶಂಕರಿ ಟಿಟಿಎಂಸಿ ಮುಂತಾದ ಸ್ಥಳಗಳಿಂದ ಸಂಚರಿಸಲಿವೆ. ದೀಪಾವಳಿ ಹಿಂದಿನ ದಿನವೇ(ಅಕ್ಟೋಬರ್ 21) ಹೆಚ್ಚುವರಿ ಬಸ್ ಸೇವೆ ಆರಂಭವಾಗಲಿದೆ.
ಪೀಣ್ಯಕ್ಕೆ ತೆರಳುವವರಿಗೆ ವಿನಾಯಿತಿ ಇಲ್ಲ
ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಕೊಲ್ಲಾಪುರ, ಹೊಸಪೇಟೆ, ಗಂಗಾವತಿ, ಕೊಪ್ಪಳ, ಬಾಗಲಕೋಟೆ, ಗುಲ್ಬರ್ಗ, ರಾಯಚೂರು, ಬೀದರ್ ಮೊದಲಾದ ಉತ್ತರ ಕರ್ನಾಟಕದ ಭಾಗಗಳಿಗೆ ತೆರಳುವವರು ಪೀಣ್ಯಕ್ಕೆ ತೆರಳುವುದು ಕಡ್ಡಾಯ. ಆದರೆ ಶಿವಮೊಗ್ಗ ಮಾರ್ಗದಿಂದ ಮುಂಗಡ ಕಾಯ್ದಿರಿಸದ ಪ್ರಯಾಣಿಕರಿಗೆ ಕೆಂಪೇಗೌಡ ಬಸ್ ನಿಲ್ದಾಣದ ಬಿಎಂಟಿಸಿ ಸರ್ವೀಸ್ ರಸ್ತೆ ಮೂಲಕ ಬಸ್ ಸೇವೆ ಒದಗಿಸಲಾಗಿದೆ.[ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಹೇಗಿದೆ ಗೊತ್ತೆ?]












Click it and Unblock the Notifications