"KSRTC Strike: ವೇತನ ಪರಿಷ್ಕರಣೆಗಾಗಿ ಮುಷ್ಕರ ನಡೆಸಲು ಅಡಿಪಾಯ ಹಾಕಿದ್ದೇ ನೀವಲ್ಲವೆ''
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಸೇರಿದಂತೆ ಎಲ್ಲ ನಾಲ್ಕು ರಾಜ್ಯ ಸಾರಿಗೆ ನಿಗಮಗಳ ನೌಕರರು ಮತ್ತೆ ಮೇ 20ರಂದು ಅನಿರ್ದಿಷ್ಟಾವಧಿಗೆ ಮುಷ್ಕರ ನಡೆಸಲು ಸಜ್ಜಾಗಿದ್ದಾರೆ. ಇದರ ಬೆನ್ನಲ್ಲೆ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳು ಕಿಡಿ ಕಾರುತ್ತಿವೆ. 'ಶಕ್ತಿ ಯೋಜನೆ'ಯ ಕಾರಣಕ್ಕೆ ಸಾರಿಗೆ ಸಂಸ್ಥೆಗಳು ಹೈರಾಣಾಗಿವೆ. ಮತ್ತೆ ಮುಷ್ಕರ ನಡೆಸಲು ಸರ್ಕಾರದ ವೈಫಲ್ಯ ಕಾರಣ ಎಂಬಿತ್ಯಾದಿ ಮಾತುಗಳಿಂದ ತಿವಿದಿವೆ. ಇದಕ್ಕೆಲ್ಲ ಇತಿಹಾಸ ನೆನಪಿಸುವ ಮೂಲಕ ಟೀಕೆಗಳಿಗೆ ಸಾರಿಗೆ ಸಚಿವರು ತಿರುಗೇಟು ಕೊಟ್ಟಿದ್ದಾರೆ.
ಗುರುವಾರ ಎಕ್ಸ್ ಮಾಡಿರುವ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಆರ್.ಅಶೋಕ್ ಸೇರಿ ಟೀಕಾಕಾರರಿಗೆ ಉತ್ತರಿಸಿದ್ದಾರೆ. ವಿಪಕ್ಷ ನಾಯಕರೇ ತಮ್ಮ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳು ಉತ್ತುಂಗದ ಅಭಿವೃದ್ಧಿಯಲ್ಲಿದ್ದವು ಎಂಬ ಭ್ರಮೆಯಿಂದ ಹೊರಬನ್ನಿ. ತಾವು (ಆರ್.ಅಶೋಕ್) ಸಾರಿಗೆ ಮಂತ್ರಿಗಳಾಗಿದ್ದಾಗಲೇ ಮೊದಲ ಬಾರಿಗೆ ವೇತನ ಪರಿಷ್ಕರಣೆಗಾಗಿ ಮುಷ್ಕರ ಹೂಡುವ ಪದ್ಧತಿಗೆ ಅಡಿಪಾಯ ಹಾಕಿದ್ದೀರಿ. ಇದು ನಿಮಗೆ ತಿಳಿದಿದೆಯೇ? ಎಂದಿರುವ ಸಚಿವರು ಮುಷ್ಕರದ ದಿನಾಂಕ ( 13-09-2012 ಮತ್ತು 14-09-2012) ಇತಿಹಾಸ ನೆನಪಿಸಿದ್ದಾರೆ.

ಬಿಜೆಪಿ ಅವಧಿಯಲ್ಲಿ ನೌಕರರಿಗೆ ಸಂಕಷ್ಟ
ಬಿಜೆಪಿ ಆಡಳಿತ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ 15 ದಿವಸಗಳ ಕಾಲ ಮುಷ್ಕರ ಮಾಡಿಸಿರುವ ಕೀರ್ತಿ ನಿಮಗೆ ಸಲ್ಲಬೇಕು. ನಿಮ್ಮ ಅವಧಿಯಲ್ಲಿ ಎರಡೆರಡು ಬಾರಿ ಮುಷ್ಕರ ನಡೆದದ್ದು ಮರೆತುಬಿಟ್ಟೀರಾ? (ಮುಷ್ಕರದ ದಿನಾಂಕ: 11-12-2020 ರಿಂದ 14-12-2020 ( ನಾಲ್ಕು ದಿವಸ) ಮತ್ತು 07-04-2021 ರಿಂದ 21-04-2021 ( ಹದಿನೈದು ದಿವಸ). ಮುಷ್ಕರದ ಹೆಸರಿನಲ್ಲಿ ಸರಿಸುಮಾರು 3500 ನೌಕರರನ್ನು ಕೆಲಸದಿಂದ ವಜಾ ಮಾಡಲಾಯಿತು. ಅಮಾನತು ಮಾಡಿ FIR ಹಾಕಿಸಿ, ಇಂದಿಗೂ ಅವರು ಕೋರ್ಟ್-ಕಚೇರಿ ಅಲೆಯುತ್ತಿದ್ದಾರೆ. ಈಗ ಸಾರಿಗೆ ನೌಕರರ ಬಗ್ಗೆ ಅನುಕಂಪದ ಮಾತನ್ನು ಆಡಲು ಯಾವ ನೈತಿಕತೆ ಇದೆ ಎಂದು ಸಚಿವರು ಪ್ರಶ್ನಿಸಿದರು.
ಬಿಜೆಪಿ ಸರ್ಕಾರವಿದ್ದಾಗ ಮಾರ್ಚ್ 2023 ರಲ್ಲಿ ಸಾರಿಗೆ ಸಂಸ್ಥೆಗಳ ನೌಕರರ ವೇತನ ಪರಿಷ್ಕರಣೆ ಮಾಡಿ, 38 ತಿಂಗಳ ಹಿಂಬಾಕಿ ವೇತನ ಪಾವತಿ ಬಾಕಿ ಇಡಲಾಯಿತು. ಈ ಸಂಬಂಧ ಬಜೆಟ್‌ನಲ್ಲಿ ಯಾವುದೇ ಅನುದಾನವನ್ನು ಮೀಸಲಿಡದೆ ತಪ್ಪಾದ ಸರ್ಕಾರಿ ಆದೇಶ ಹೊರಡಿಸಿರುವುದೇ ಈ ಎಲ್ಲಾ ತೊಡಕುಗಳಿಗೆ ಮೂಲ ಕಾರಣವಾಗಿದೆ ಎಂದರು.
ನೀವು ನೀಡಬೇಕಾಗಿದ್ದ ನಿವೃತ್ತ ನೌಕರರ ವೇತನ ಪರಿಷ್ಕರಣೆ ಉಪಧನ ಬಾಕಿ ಮೊತ್ತ ರೂ.224 ಕೋಟಿ ಗಳಿಗೂ ಸಹ ಯಾವುದೇ ಅನುದಾನವನ್ನು ಮೀಸಲಿಡಲಿಲ್ಲ. ಅದಾಗಿಯೂ ಸಹ ನಮ್ಮ ಸರ್ಕಾರವು 2025ರಲ್ಲಿ ಹಣ ಬಿಡುಗಡೆಗೊಳಿಸಿದೆ. ನಾಲ್ಕು ಸಾರಿಗೆ ಸಂಸ್ಥೆಗಳ ಬಾಕಿ ಹೊಣೆಗಾರಿಕೆ 31.03.2026 ರಂತೆ ರೂ. 7130.80 ಕೋಟಿ (ಇದರಲ್ಲಿ ರೂ. 2298.20 ಕೋಟಿ ನೌಕರರ ಭವಿಷ್ಯ ನಿಧಿ ಬಾಕಿ ಮತ್ತು ರೂ.822.26 ಕೋಟಿ ಇಂಧನ ಪಾವತಿ ಬಾಕಿ) ರೂಪಾಯಿ ಇದೆ.
ಬಿಜೆಪಿ ಅವಧಿಯಲ್ಲಿ ನೌಕರರ ಭವಿಷ್ಯ ನಿಧಿ ಮತ್ತು ಡೀಸೆಲ್ ಬಾಕಿ ಹಣ ಪಾವತಿಗಾಗಿ, 2025ರಲ್ಲಿ ನಮ್ಮ ಸರ್ಕಾರವು ಬ್ಯಾಂಕ್‌ನಿಂದ ರೂ.2000 ಕೋಟಿ ಸಾಲವನ್ನು ಪಡೆಯಲು ಸಾರಿಗೆ ಸಂಸ್ಥೆಗಳಿಗೆ ಅನುಮತಿಸಲಾಗಿತ್ತು. ಈ ಸಾಲದ ಅಸಲು ಮತ್ತು ಬಡ್ಡಿಯನ್ನು ನಮ್ಮ ಸರ್ಕಾರವು ಪಾವತಿಸುತ್ತಿದೆ.
ಸಾರಿಗೆ ಆದಾಯದಲ್ಲಿ ಖರ್ಚು ವೆಚ್ಚ ಎಷ್ಟಾಗುತ್ತದೆ?
ಪ್ರತಿ ವರ್ಷ ನಾಲ್ಕು ಸಾರಿಗೆ ಸಂಸ್ಥೆಗಳು ಗಳಿಸುವ ಒಟ್ಟು ಆದಾಯದಲ್ಲಿ ಶೇ. 49.15 ಸಿಬ್ಬಂದಿ ವೆಚ್ಚ (ಅಂದರೆ ರೂ.6759.68 ಕೋಟಿ) ಮತ್ತು ಶೇ. 34.49 ಡೀಸೆಲ್ ವೆಚ್ಚ ( ಅಂದರೆ ರೂ.4744.41 ಕೋಟಿ) ವೆಚ್ಚವಾಗುತ್ತಿದೆ. ಕಾರ್ಮಿಕ ಸಂಘಟನೆಗಳ ಬೇಡಿಕೆಗೆ ಸ್ಪಂದಿಸುವ ನಿಟ್ಟಿನಲ್ಲಿ ನಾವು ಅವರೊಡನೆ ಹಲವಾರು ಸಭೆಗಳನ್ನು ನಡೆಸಿದ್ದೇವೆ. ಅವರ ಬೇಡಿಕೆಯಂತೆ ಶೇ. 25 ವೇತನ ಪರಿಷ್ಕರಣೆ ಮಾಡಿದಲ್ಲಿ, ಪ್ರತಿ ತಿಂಗಳು ನಾಲ್ಕು ಸಾರಿಗೆ ಸಂಸ್ಥೆಗಳಿಗೆ ರೂ.131.52 ಕೋಟಿ, ವಾರ್ಷಿಕ ರೂ.1578.18 ಕೋಟಿ ಹಾಗೂ ನಾಲ್ಕು ವರ್ಷಗಳಿಗೆ ರೂ.6312.23 ಕೋಟಿ ಹೆಚ್ಚುವರಿ ಹಣ ಭರಿಸಬೇಕಾಗುತ್ತದೆ ಎಂದು ಅವರು ಲೆಕ್ಕ ನೀಡಿದರು.
ನೀವು ರಾಜ್ಯದ ಉಪಮುಖ್ಯಮಂತ್ರಿಗಳಾಗಿ, ಸಾರಿಗೆ ಸಚಿವರಾಗಿ ಕೆಲಸ ಮಾಡಿದವರು. ಇಷ್ಟಾದರೂ ತಮಗೆ ತಿಳಿಯಬಾರದೇ? ಸಾರಿಗೆ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ತೀವ್ರ ಕಿಷ್ಲಕರವಾಗಿದ್ದು, ಏಪ್ರಿಲ್ 1 ,2025 ರಿಂದಲೇ ಅನ್ವವಾಗುವಂತೆ ಶೇ. 25ರಷ್ಟು ವೇತನ ಹೆಚ್ಚಳ ಮಾಡಿದಲ್ಲಿ, ವಾರ್ಷಿಕ ರೂ.1578.18 ಕೋಟಿ ಹಾಗೂ ನಾಲ್ಕು ವರ್ಷಗಳಿಗೆ ರೂ.6312.23 ಕೋಟಿ ಹೆಚ್ಚುವರಿ ಹಣ ಭರಿಸಬೇಕಾಗುತ್ತದೆ. ಇಷ್ಟೊಂದು ಮೊತ್ತದ ಹಣವನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ಬಾರದೇ, ಅವರೊಡನೆ ಚರ್ಚಿಸದೆ, ಅನುಮತಿ ಪಡೆಯದೇ, ಏಕಾಏಕಿ ನಾನು ಘೋಷಿಸಲು ಸಾಧ್ಯವೇ? ಎಂದರು.
ಮುಷ್ಕರಕ್ಕೆ ಅವರೇ ಹೊಣೆ
ಈಗಾಗಲೇ ನೌಕರರೊಂದಿಗೆ ಸಭೆಯಲ್ಲಿ ಹಲವು ವಿಚಾರ ಚರ್ಚಿಸಿದ್ದೇವೆ. ಎಷ್ಟು ಶೇಕಡವಾರು ವೇತನ ಹೆಚ್ಚಳ ನೀಡುತ್ತೇವೆ ಎಂಬುದನ್ನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ತೀರ್ಮಾನಿಸಿ ಕೂಡಲೇ ತಿಳಿಸಲಾಗುವುದು ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಹೀಗಿದ್ದರು ಅವರು ಮುಷ್ಕರ ಮಾಡುತ್ತೇವೆ ಎಂದರೆ ಅದಕ್ಕೆ ಅವರೇ ಹೊಣೆ ಎಂದು ಮೇ 20ರ ಮುಷ್ಕರ ಕುರಿತು ಸಚಿವರು ಪ್ರತಿಕ್ರಿಯಿಸಿದ್ದಾರೆ.














Click it and Unblock the Notifications