KSR Railway Station: 'ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರ'ದಿಂದ ಟಿಕೆಟ್ ಪಡೆಯಲು ರೈಲ್ವೆ ಪ್ರಯಾಣಿಕರು ಪರದಾಟ
ಬೆಂಗಳೂರು, ಮಾರ್ಚ್ 04: ನೈಋತ್ಯ ರೈಲ್ವೆ ವಿಭಾಗವು ಪ್ರಯಾಣಿಕರ ಅನುಕೂಲಕ್ಕಾಗಿ ಪರಿಚಯಿಸಿರುವ 'ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರ'ಗಳನ್ನು (Automatic Ticket Vending Machine-ATVM) ಕಾಲಕಾಲಕ್ಕೆ ಸಮಪರ್ಕವಾಗಿ ನಿರ್ವಹಣೆ ಮಾಡುವವರೇ ಇಲ್ಲದಾಗಿದೆ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.
ನೈಋತ್ಯ ರೈಲ್ವೆ ವಿಭಾಗ (South Western Railway)ದ ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KSR Railway Station) ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ 'ಸ್ವಯಂ ಚಾಲಿತ ಟಿಕೆಟ್ ವಿತರಣಾ ಯಂತ್ರ'ಗಳನ್ನು ಸ್ಥಾಪಿಸಲಾಗಿದೆ. ರೈಲು ನಿಲ್ದಾಣದ ಮುಖ್ಯದ್ವಾರದ ಟಿಕೆಟ್ ಕೌಂಟರ್ ಮುಂದೆ ಬಾಗಿಲ ಅಕ್ಕಪಕ್ಕ ಸಾಲಾಗಿ 6-7 ಯಂತ್ರಗಳನ್ನು ಇಡಲಾಗಿದೆ.

ರೈಲ್ವೆ ಟಿಕೆಟ್ ವಿತರಣಾ ಯಂತ್ರ 'ಔಟ್ ಆಫ್ ಆರ್ಡರ್'
ಇವುಗಳು ಪ್ರಯಾಣಿಕರಿಗೆ ಸ್ವಯಂ ಆಗಿ ಟಿಕೆಟ್ ಪಡೆಯಲು ಇಲ್ಲವೇ ಅಲ್ಲಿ ನಿಗದಿತ ವ್ಯಕ್ತಿಗಳಿಂದ ಟಿಕೆಟ್ ಪಡೆಯಲು ಅನುಕೂಲ ಮಾಡಲಿವೆ. ವಿಪರ್ಯಾಸವೆಂದರೆ, ಇವುಗಳಲ್ಲಿ ಬಹುತೇಕ ಯಂತ್ರಗಳ ಕಾರ್ಯ ಸ್ಥಗಿತಗೊಂಡಿವೆ. ನೋಡಲು ಎಲ್ಲವು ಸರಿ ಇರುವಂತೆ ಕಂಡರು ಸಹಿತ ಎರಡು ಯಂತ್ರ ಬಿಟ್ಟು ಉಳಿದೆಲ್ಲವು 'ಔಟ್ ಆಫ್ ಆರ್ಡರ್' ಸ್ಥಿತಿಯಲ್ಲಿವೆ.
ಒಂದು ಟಿಕೆಟ್ ಯಂತ್ರಕ್ಕೆ ಮಾತ್ರಕ್ಕೆ ಇದರ ಸ್ಥಿತಿ ಗತಿಯಲ್ಲಿ ಸರಿ ಇಲ್ಲ, 'ಔಟ್ ಆಫ್ ಆರ್ಡರ್' ಎಂದು ಬೋರ್ಡು ಹಾಕಲಾಗಿದೆ. ಹಾಗೆಂದ ಮಾತ್ರ ಉಳಿದವುಗಳಲ್ಲಿ ಟಿಕೆಟ್ ಪಡೆಯಬಹುದು ಎಂದುಕೊಳ್ಳುವ ಹಾಗಿಲ್ಲ. ಏಕೆಂದರೆ ಅವುಗಳ ನೋಡಲು ಆನ್ ಇದ್ದರೂ ಸಹಿತ ಸರ್ವರ್ ಸರಿ ಇಲ್ಲದ್ದನ್ನು ನೀವು ಗಮನಿಸಬಹುದು.
ಸ್ವಯಂ ಪ್ರೇರಿತವಾಗಿ ಟಿಕೆಟ್ ಪಡೆಯಲು ಹರಸಾಹಸ
ಎರಡು ಯಂತ್ರಗಳನ್ನು ಮ್ಯಾನುವಲ್ ಆಗಿ ನಿರ್ವಹಿಸಲಾಗುತ್ತದೆ. ಅಂದರೆ ಪ್ರಯಾಣಿಕರಿಂದ ಹಣ ಪಡೆದು ಅಲ್ಲಿನ ಸಿಬ್ಬಂದಿಯೇ ಟಿಕೆಟ್ ನೀಡುತ್ತಾರೆ. ಇಲ್ಲಿ ಕೌಂಟರ್‌ಗಿಂತಲೂ 5-10 ರೂಪಾಯಿ ಹೆಚ್ಚು ಹಣ ಕೊಡಬೇಕಾಗುತ್ತದೆ.

ಓದು ಬರಹಬಲ್ಲ ಪ್ರಯಾಣಿಕರು ತಾವೇ ಸ್ವಯಂಪ್ರೇರಿತವಾಗಿ ಟಿಕೆಟ್ ಪಡೆಯಲು ಇಲ್ಲಿ ಹರಸಾಹಸ ಪಡೆಬೇಕಾದ ಸ್ಥಿತಿ ಇದೆ. ಯಂತ್ರ ಕೆಟ್ಟಿರುವ ಕಾರಣ ಒಂದೇ ಯಂತ್ರದ ಮುಂದೆ ಪ್ರಯಾಣಿಕರು ಜಮಾಯಿಸಿರುತ್ತಾರೆ. ಈ ವೇಳೆ ಸಿಬ್ಬಂದಿಗೆ ಹಣ ನೀಡಿ ಟಿಕೆಟ್ ಪಡೆಯುವಾಗ ಚಿಲ್ಲರೆ ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ಪ್ರಯಾಣಿಕರ ಹೆಚ್ಚು ಸಮಯ ವ್ಯರ್ಥವಾಗುತ್ತಿದೆ.
ಇನ್ನೂ ಟಿಕೆಟ್ ಕೌಂಟರ್‌ಗಳಲ್ಲಿ ಸಹ ಅತ್ಯಧಿಕ ಜನರು ಸಾಲುಗಟ್ಟಿ ನಿಂತಿರುತ್ತಾರೆ. ಆನ್‌ಲೈನ್ ನಲ್ಲಿ ಟಿಕೆಟ್ ಕಾಯ್ದಿರಿಸದೇ ನಿಲ್ದಾಣದಲ್ಲಿಯೇ ಬಂದು ಟಿಕೆಟ್ ಪಡೆಯುವವರು ನಿತ್ಯವು ಈ ಕೆಟ್ಟುಹೋದ ಯಂತ್ರಗಳಿಂದ ತೊಂದರೆ ಎದುರಿಸುತ್ತಿದ್ದಾರೆ. ಕೆಲವೊಮ್ಮೆ ರೈಲುಗಳನ್ನು ಮಿಸ್ ಮಾಡಿಕೊಂಡ ಉದಾಹರಣೆಗಳು ಇವೆ.
ಪ್ರಯಾಣಿಕನ ಕೂಗಾಟ, ಆಕ್ರೋಶ
ಕಳೆದ ಫೆಬ್ರವರಿ 29 ರಂದು ಮಧ್ಯ ವಯಸ್ಕರೊಬ್ಬರು ಈ ಟಿಕೆಟ್ ವಿತರಣಾ ಯಂತ್ರದಿಂದ ಟಿಕೆಟ್ ಪಡೆದು ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕಿದ ಘಟನೆ ನಡೆಯಿತು. ಬೆಂಗಳೂರಿನಿಂದ ಉದ್ದೇಶಿತ ಗಮ್ಯಸ್ಥಳಕ್ಕೆ ಬದಲಾಗಿ ಬೇರೊಂದು ಗಮ್ಯ ಸ್ಥಳ ನಮೂದಾದ ಟಿಕೆಟ್ ಪಡೆದಿದ್ದರು.
ಇಲ್ಲಿ ಈ ಮಧ್ಯವಯಸ್ಕ ಪ್ರಯಾಣಿಕನ ತಲುಪುವ ಸ್ಥಳ ತಪ್ಪಾಗಿತ್ತು. ಇದು ಯಂತ್ರದ ಸಹಾಯದಿಂದ ಪಡೆದ ಕಾರಣ ಅವರಿಗೆ ಕೌಂಟರ್‌ನಲ್ಲಿ ಕುಳಿತಿದ್ದ ರೈಲ್ವೆ ಸಿಬ್ಬಂದಿ ಯಾವ ಸಹಾಯ ಮಾಡಲಿಲ್ಲ. ತಪ್ಪು ಆಯ್ಕೆಯಿಂದ ಈ ರೀತಿ ಆಗಿಲ್ಲ. ಕೆಟ್ಟ ಯಂತ್ರದಿಂದಲೇ ಈ ಲೋಪವಾಗಿದೆ ಎಂದು ಪ್ರಯಾಣಿಕ ಆರೋಪಿಸಿದರೂ ಸಹಿತ, ಪರಿಪರಿಯಾಗಿ ವಿನಂತಿಸಿದರೂ ಪ್ರಯೋಜವಾಗಲಿಲ್ಲ.
ಗಮ್ಯಸ್ಥಳ ಬದಲಾವಣೆ: ಟಿಕೆಟ್ ಹಣ ವ್ಯರ್ಥ
ಇಂತಹ ಕೆಟ್ಟುಹೋದ ಯಂತ್ರಗಳಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೂ ಅಧಿಕಾರಿಗಳು ಸಹಾಯ ಮಾಡುತ್ತಿಲ್ಲ. ಗಮ್ಯಸ್ಥಳ ಬದಲಾವಣೆಗೆ ಆಗಿ ಬಂದ ಟಿಕೆಟ್ ಗೆ ಕೊಟ್ಟಿ ಹಣ ವ್ಯರ್ಥವಾಗುತ್ತಿದೆ. ರೈಲು ಹೊರುಡುವ ಧಾವಂತದಲ್ಲಿ ಇದೆಲ್ಲ ನೋಡದಿದ್ದರೆ ಪ್ರಯಾಣದ ವೇಳೆ ಸಮಸ್ಯೆಯಾಗುತ್ತದೆ. ಇದನ್ನು ಬಿಸಾಡಿ ಕೌಂಟರ್‌ನಲ್ಲಿ ಮತ್ತೆ ಟಿಕೆಟ್ ಪಡೆಯಬೇಕಾಗುತ್ತದೆ. ಇದರಿಂದ ನಮಗೆ ನಷ್ಟವಾಗಿದ್ದು, ದೂರು ಕೊಡುತ್ತೇನೆ ಎಂದು ಅವರು ಆಕ್ರೋಶ ಹೊರ ಹಾಕಿದರು.
ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣದದಿಂದ ನಿತ್ಯ ರಾತ್ರಿ ಸಾವಿರಾರು ಪ್ರಯಾಣಿಕರು ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದ ಕಡೆಗೆ ತೆರಳುತ್ತಾರೆ. ಅವರಿಗೆ ಈ ಕೆಟ್ಟು ಹೋದ ಟಿಕೆಟ್ ವಿತರಣಾ ಯಂತ್ರಗಳಿಂದ ತೊಂದರೆ ಆಗುತ್ತಿದ್ದು, ಶೀಘ್ರವೇ ಇವುಗಳನ್ನು ಸರಿಪಡಿಸಬೇಕು. ತಪ್ಪು ಆಯ್ಕೆ ಆಗದಂತೆ ಸರ್ವರ್ ಸರಿಪಡಿಸಬೇಕು. ಅಲ್ಲದೇ ಪೀಕ್ ಸಮಯದಲ್ಲಿ ಕೇವಲ ಎರಡು ಯಂತ್ರಗಳಿಗೆ ಮಾತ್ರವಲ್ಲದೇ ಬೇರೆ ಯಂತ್ರಗಳಿಗೂ ಟಿಕೆಟ್ ವಿತರಣೆಗೆ ಸಿಬ್ಬಂದಿ ಕೂರಿಸಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
'ಸ್ವಯಂ ಚಾಲಿತ ಟಿಕೆಟ್ ವಿತರಣಾ ಯಂತ್ರ' ವಿಶೇಷತೆ
ರೈಲ್ವೆ ಇಲಾಖೆಯು ಪ್ರಯಾಣಿಕರ ಅನುಕೂಲಕ್ಕಾಗಿ ಈ ಯಂತ್ರ ಸ್ಥಾಪಿಸಿದೆ. ಓದು ಬರಹ ಬಲ್ಲ ಪ್ರಯಾಣಿಕರು ತಾವೇ ಬಸ್ ವೇಳಾಪಟ್ಟಿ ಪರಿಶೀಲಿಸಿ, ಸಮಯ ನೋಡಿಕೊಂಡು ಟಚ್ ಸ್ಕ್ರೀನ್ ಸಹಾಯದ ಮೂಲಕ ಬೆಂಗಳೂರಿನಿಂದ ಗಮ್ಯಸ್ಥಳಕ್ಕೆ ತಾವೇ ಸ್ವಯಂ ಪ್ರೇರಿತವಾಗಿ ಟಿಕೆಟ್ ಪಡೆಯಬಹುದು.
ಕ್ಯೂಆರ್ ಕೋಡ್ ಮೂಲಕ ನೀವು ಹಣ ಪಾವತಿಸುತ್ತಿದ್ದಂತೆ ನಿಮ್ ಟಿಕೆಟ್ ಅನ್ನು ಯಂತ್ರ ವಿತರಿಸುತ್ತದೆ. ಇದರಿಂದ ಪ್ರಯಾಣಿಕರು ಟಿಕೆಟ್ ಕೌಂಟರ್ ಮುಂದೆ ಸಾಲಿನಲ್ಲಿ ನಿಲ್ಲವುದು ತಪ್ಪುತ್ತದೆ. ಸಮಯವು ಉಳಿತಾಯವಾಗುತ್ತದೆ. ಚಿಲ್ಲರೆ ಸಮಸ್ಯೆ ಇರುವುದಿಲ್ಲ. ಹೀಗೆಲ್ಲ ಇದ್ದರೂ ಕೆಟ್ಟು ಹೋದ ಯಂತ್ರ ಮತ್ತು ಸರ್ವರ್ ಸಮಸ್ಯೆಯಿಂದಾಗಿ ಜನರು ಯಂತ್ರಗಳ ಮುಂದೆ ಗುಂಪುಗೂಡಿ ನಿಲ್ಲಬೇಕಾದ ಸ್ಥಿತಿ ಇದೆ.
ಯಂತ್ರದಿಂದ ಸ್ವಯಂ ಟಿಕೆಟ್ ಪಡೆಯುವು ಹೇಗೆ?
* ಯಂತ್ರವು ಟಚ್ ಸ್ಕ್ರೀನ್ ಆಗಿದ್ದು, ಅಲ್ಲಿ ಕಾಣುವ ಆಯ್ಕೆಗಳಲ್ಲಿ ನೀವು ನಿಮ್ಮ ಗಮ್ಯ ಸ್ಥಾನವನ್ನು ಆಯ್ಕೆ ಮಾಡಿಕೊಳ್ಳಬೇಕು.
* ಬಳಿಕ ಮಾರ್ಗ ನಕ್ಷೆ ಪರಿಶೀಲಿಸಬೇಕು
* ವೇಗದ ಬುಕ್ಕಿಂಗ್ ಕೇಂದ್ರಗಳು ಆಯ್ಕೆ ಮಾಡಿಕೊಳ್ಳಬೇಕು.
* ಎಲ್ಲ ಇತರ ನಿಲ್ದಾಣಗಳ ಮೇಲೆ ಕ್ಲಿಕ್ ಮಾಡಬೇಕು.
* ಬಳಿಕ ನಿಮ್ಮ ಗಮ್ಯಸ್ಥಾನದ ನಿಲ್ದಾಣದ ಹೆಸರು ನಮೂದಿಸಬೇಕು.
* ನಿಮ್ಮ ಗಮ್ಯಸ್ಥಾನ ನಮೂದಿಸಿ ಮುಂದಿನ ಮೂರು ಗಂಟೆಗಳವರೆಗಿನ ರೈಲುಗಳ ಲಭ್ಯತೆಯನ್ನು ಪರಿಶೀಲಿಸಿ.
* ನಿಮ್ಮ ಗಮ್ಯಸ್ಥಾನಕ್ಕೆ ವಯಾ ಮಾರ್ಗ ಆಯ್ಕೆ ಮಾಡಿ.
* ನಂತರ ನಿಮ್ಮ ಪ್ರಯಾಣದ ವಿವರಗಳನ್ನು ಆಯ್ಕೆ ಮಾಡಿ.
* ಪಾವತಿ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ
* ಬಳಿಕ ಸ್ಕ್ರೀನ್‌ನಲ್ಲಿ ನಿಮ್ಮ ಪ್ರಯಾಣದ ವಿವರ ಪೂರ್ತಿಯಾಗಿ ವಿಕ್ಷಿಸಿ
* ನಂತರ ಮುಂದುವರಿದು ಟಿಜಿಟಲ್ ಪಾವತಿ ಆಯ್ಕೆ ಮಾಡಿ, ನಿಮ್ಮ ಯಾವುದೇ ಯುಪಿಐ ಅಪ್ಲಿಕೇಷನ್ ಬಳಿಸಿ ಹಣ ಪಾವತಿಸಿ.
* ಇದೆಲ್ಲವು ಯಶಸ್ವಿಯಾದ ಬಳಿಕವೇ ಬಾಕ್ಸ್‌ನಲ್ಲಿ ನಿಮ್ಮ ಟಿಕೆಟ್ ಅನ್ನು ಪಡೆಯಿರಿ.
ಒಂದು ವೇಳೆ ಟಿಕೆಟ್ ಪಡೆಯುವುಲ್ಲಿ ವಿಫಲವಾದರೆ, ಇಲ್ಲವೇ ಯಂತ್ರದಲ್ಲಿ ಲೋಪದೋಷ ಕಂಡು ಬಂದರೆ ನೀವು ಟಿಕೆಟ್ ಕೌಂಟರ್‌ನಲ್ಲಿ ಟಿಕೆಟ್ ಪಡೆಯಬಹುದಾಗಿದೆ.












Click it and Unblock the Notifications