ಕೆಎಸ್ಆರ್ ರೈಲು ನಿಲ್ದಾಣದಲ್ಲಿ ಚನ್ನಪಟ್ಟಣ ಗೊಂಬೆಗಳ ಕಲರವ
ಬೆಂಗಳೂರು, ಮಾರ್ಚ್ 25; ಬೆಂಗಳೂರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ರೈಲು ನಿಲ್ದಾಣದಲ್ಲಿ ಇನ್ನು ಚನ್ನಪಟ್ಟಣದ ಗೊಂಬೆಗಳ ಕಲರವ ಇರಲಿದೆ. ವಿಶ್ವವಿಖ್ಯಾತ ಚನ್ನಪಟ್ಟಣದ ಗೊಂಬೆಗಳನ್ನು ಮಾರಾಟ ಮಾಡುವ ಮಳಿಗೆ ರೈಲು ನಿಲ್ದಾಣದಲ್ಲಿ ಆರಂಭವಾಗಿದೆ.
ಶುಕ್ರವಾರ ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಚನ್ನಪಟ್ಟಣದ ಗೊಂಬೆಗಳನ್ನು ಮಾರಾಟ ಮಾಡುವ ಮಳಿಗೆಗೆ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ರೈಲು ನಿಲ್ದಾಣದಲ್ಲಿ ಚನ್ನಪಟ್ಟಣದ ಗೊಂಬೆಗಳನ್ನು ಮಾರಾಟ ಮಾಡಲು ಮಳಿಗೆ ತೆರೆಯಲಾಗಿದೆ.
2022-23ರ ಕೇಂದ್ರ ಬಜೆಟ್‌ನಲ್ಲಿ 'ಒಂದು ನಿಲ್ದಾಣ ಒಂದು ಉತ್ಪನ್ನ' ಎಂಬ ಯೋಜನೆ ಘೋಷಣೆ ಮಾಡಲಾಗಿತ್ತು. ಈ ಘೋಷಣೆಯ ಭಾಗವಾಗಿ ಆರಂಭಿಸಲಾದ ಮಳಿಗೆಯನ್ನು ಬೆಂಗಳೂರು ರೈಲು ವಿಭಾಗದ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ಉದ್ಘಾಟಿಸಿದರು.

ಪ್ರಧಾನಿ ನರೇಂದ್ರ ಮೋದಿ ಆತ್ಮ ನಿರ್ಬರ ಭಾರತ ಅಭಿಯಾನದಡಿ ರೈಲು ನಿಲ್ದಾಣಗಳಲ್ಲಿ ಸ್ಥಳೀಯ ಉತ್ಪನ್ನಗಳನ್ನು ಮಾರಾಟ ಮಾಡಲು ಭಾರತೀಯ ರೈಲ್ವೆ ಮುಂದಾಗಿದೆ. ಆದ್ದರಿಂದ ಪ್ರಾಯೋಗಿಕವಾಗಿ ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಮಳಿಗೆ ಆರಂಭಿಸಲಾಗಿದೆ.
ಸ್ಥಳೀಯ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಕುಶಲ ಕರ್ಮಿಗಳನ್ನು ಪ್ರೋತ್ಸಾಹಿಸುವುದು ಈ ಯೋಜನೆಯ ಉದ್ದೇಶವಾಗಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದ ಗೊಂಬೆಗಳು ವಿಶ್ವ ಮಾನ್ಯತೆ ಪಡೆದಿದ್ದು, ಜಿಐ ಟ್ಯಾಗ್‌ಗಳನ್ನು ಸಹ ಹೊಂದಿವೆ.
ಈ ಯೋಜನೆ ಯಶಸ್ವಿಯಾದರೆ ಕರ್ನಾಟಕ ಮತ್ತು ಗೋವಾ ಗಡಿ ಭಾಗದಲ್ಲಿ ಬರುವ ರೈಲು ನಿಲ್ದಾಣದಲ್ಲಿ ಇದೇ ಮಾದರಿಯ ಮಳಿಗೆ ತೆರೆಯಲು ನೈಋತ್ಯ ರೈಲ್ವೆ ಚಿಂತನೆ ನಡೆಸಿದೆ. ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದ ಮಳಿಗೆಯನ್ನು ಚನ್ನಪಟ್ಟಣದ ವಿ. ಪ್ರಕಾಶ್ ಎಂಬುವವರು ನೋಡಿಕೊಳ್ಳಲಿದ್ದಾರೆ.
ಚನ್ನಪಟ್ಟಣ ರಾಮನಗರ ಜಿಲ್ಲೆಯ ತಾಲ್ಲೂಕು ಕೇಂದ್ರ. ಕೈಯಿಂದ ಮಾಡಿದ ಮೆರುಗೆಣ್ಣೆ ಮರದ ಆಟಿಕೆಗಳಿಗೆ ಹೆಸರುವಾಸಿಯಾಗಿದೆ. ಆದ್ದರಿಂದ ಚನ್ನಪಟ್ಟಣವನ್ನು ಗೊಂಬೆಗಳ ನಾಡು ಎಂದು ಕರೆಯುತ್ತಾರೆ. ಚನ್ನಪಟ್ಟಣದಲ್ಲಿ ಮರದ ಗೊಂಬೆಗಳ ಉಗಮವು ಮೈಸೂರಿನ ಆಡಳಿತಗಾರ ಟಿಪ್ಪು ಸುಲ್ತಾನನ ಕಾಲಕ್ಕೆ ಸೇರಿದ್ದು. ಮರದ ಆಟಿಕೆಗಳ ದೊಡ್ಡ ಅಭಿಮಾನಿಯಾಗಿದ್ದ ಅವರು ಪರ್ಷಿಯಾದ ಕುಶಲಕರ್ಮಿಗಳನ್ನು ಆಹ್ವಾನಿಸಿ ಮತ್ತು ಮರದ ಆಟಿಕೆಗಳನ್ನು ತಯಾರಿಸುವ ಪ್ರಕ್ರಿಯೆ ಆರಂಭಿಸಿದರು. ಸ್ಥಳೀಯ ಕಲಾವಿದರಿಗೆ ತರಬೇತಿಯನ್ನು ಸಹ ಕೊಡಿಸಿದರು.












Click it and Unblock the Notifications