ಬೆಂಗಳೂರಿಗೆ ಇನ್ನೊಂದು ವರ್ಷ ಕುಡಿಯುವ ನೀರಿನ ಸಮಸ್ಯೆಯಾಗದು: ಹೇಗೆ?
ಬೆಂಗಳೂರು, ನ.3: ಈ ಬಾರಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದು, ಜೀವನಾಡಿ ಕೆಆರ್‌ಎಸ್ (ಕೃಷ್ಟರಾಜಸಾಗರ ಜಲಾಶಯ) 11 ವರ್ಷಗಳ ಬಳಿಕ ಭರ್ತಿಯಾಗಿದೆ. ಇದು ಕೇವಲ ರೈತರಿಗೆ ಅಷ್ಟೇ ಅಲ್ಲ, ಬೆಂಗಳೂರು ವಾಸಿಗಳಿಗೂ ಜೀವಕಳೆ ತಂದಿದೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಮುಂದಾಲೋಚನೆಯಿಂದ ನಿರ್ಮಾಣವಾದ ಕೆಆರ್‌ಎಸ್ ಮಂಡ್ಯ, ಮೈಸೂರು ಭಾಗದ ರೈತರ ಜೀವನಾಡಿ ಆಗಿದೆ. ಕರ್ನಾಟಕ ಅಷ್ಟೇ ಅಲ್ಲದೆ, ತಮಿಳುನಾಡಿನ ಕೆಲ ಜಿಲ್ಲೆಗಳ ರೈತರ ಜಮೀನುಗಳನ್ನೂ ಹಸಿರು ಮಾಡುತ್ತಿದೆ.
ಜೂನ್ 1 ರಿಂದ ಸೆಪ್ಟೆಂಬರ್ 30ರ ವರೆಗಿನ ಮುಂಗಾರು ಅವಧಿಯಲ್ಲಿ ದಕ್ಷಿಣ ಒಳನಾಡಿನಲ್ಲಿ 385 ಮಿ.ಮೀ. ವಾಡಿಕೆ ಮಳೆಗೆ ಪ್ರತಿಯಾಗಿ 369 ಮಿ.ಮೀ ಮಳೆಯಾಗಿದೆ. ಅ.1ರಿಂದ ನ.2ರವರೆಗೆ 272ಮಿ.ಮೀ.ಗೆ ಪ್ರತಿಯಾಗಿ 144 ಮಿ.ಮೀ. ಮಳೆಯಾಗಿದೆ. ಕೆಆರ್‌ಎಸ್ ಸಾಮರ್ಥ್ಯ 49.45 ಅಡಿ ಟಿಎಂಸಿ ನೀರು ಹಿಡಿಯುತ್ತದೆ. ನ.2ರ ಮಾಹಿತಿ ಪ್ರಕಾರ ಜಲಾಶಯದಲ್ಲಿ 49.45 ಅಡಿ ನೀರು ಇದ್ದು ಜಲಾಶಯ ಶೇ.100ರಷ್ಟು ಭರ್ತಿಯಾಗಿದೆ. 11 ವರ್ಷಗಳ ಹಿಂದೆ ಅಂದರೆ, 2009ರ ಅ.28ರಂದು ಜಲಾಶಯ ಇದೇ ರೀತಿ ಭರ್ತಿಯಾಗಿತ್ತು. ಅದನ್ನು ಹೊರತುಪಡಿದರೆ ಈ ವರ್ಷ ಪೂರ್ಣ ಪ್ರಮಾಣದಲ್ಲಿ ತುಂಬಿದೆ.

ಖುಷಿಯಾದ ಬೆಂಗಳೂರು ಜಲಮಂಡಳಿ
ಕೆಆರ್‌ಎಸ್ ಭರ್ತಿಯಾದ ಕಾರಣದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಿಸಿದ್ದಾರೆ. ಮತ್ತೊಂದೆಡೆ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುವಂತಹ ಬೆಂಗಳೂರು ಜಲಮಂಡಳಿ ಅಧಿಕಾರಿಗಳೂ ಸಹ ಖುಷಿಯಾಗಿದ್ದಾರೆ. ಕಾರಣ ಕೆಆರ್ಎಸ್ ಜಲಾಶಯ ಭರ್ತಿಯಾದರೆ ಬೆಂಗಳೂರಿಗೆ ಒಂದು ವರ್ಷದ ಮಟ್ಟಿಗೆ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬುದು ಅವರ ನೆಮ್ಮದಿಗೆ ಕಾರಣ.
ಹೌದು, ಬೆಳೆಯುತ್ತಿರುವ ಬೆಂಗಳೂರಿಗೆ ಪ್ರತಿನಿತ್ಯ ಕುಡಿಯುವ ನೀರು ಒದಗಿಸುವುದು ಸವಾಲಿನ ಕೆಲಸವೇ ಸರಿ. ಕಾರಣ, ಯಾವುದೇ ಪ್ರಮುಖ ನಗರ ನದಿ ಅಥವಾ ಜಲಾಶಯಗಳಿಗೆ ಹೊಂದಿಕೊಂಡಂತೆ ಇರುತ್ತದೆ. ಆದರೆ, ಬೆಂಗಳೂರು ಮಾತ್ರ ಕೆಆರ್‌ಎಸ್ ಜಲಾಶಯದಿಂದ 100ಕಿ.ಮೀ. ದೂರದಲ್ಲಿದೆ. ಹೀಗೆ ಬೆಂಗಳೂರಿಗೆ ಪೂರೈಸುವ ಪ್ರತಿ ಹನಿ ನೀರು ಸಹ ನೂರು ಕಿ.ಮೀ. ದೂರದಿಂದಲೇ ತರಬೇಕಾದಂತಹ ಜವಾಬ್ದಾರಿ ಜಲಮಂಡಳಿ ಮೇಲಿದೆ. ಇದೇನು ಹೊಸ ಕೆಲಸವಲ್ಲ ನಿಜ. ಆದರೆ, ಅಗತ್ಯಕ್ಕೆ ತಕ್ಕಷ್ಟು ನೀರು ಜಲಾಶಯದಲ್ಲಿ ಇದ್ದಾಗ ಬೆಂಗಳೂರಿನ ಜನ ನೆಮ್ಮದಿಯಿಂದ ಜೀವಿಸಬಹುದು.

ಬೆಂಗಳೂರಿನಲ್ಲಿ ನೀರಿನ ಸಮಸ್ಯೆಗೆ ಪರಿಹಾರ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಒಟ್ಟು 800 ಕಿ.ಮೀ. ವ್ಯಾಪ್ತಿ ಹೊಂದಿದೆ. ಇದರಲ್ಲಿ 8 ನಗರ ಸ್ಥಳೀಯ ಸಂಸ್ಥೆಗಳು, 7 ಮುನ್ಸಿಪಲ್ ಕಾರ್ಪೊರೇಷನ್, 1 ಪಟ್ಟಣ ಪಂಚಾಯಿತಿ ಹಾಗೂ 110 ಗ್ರಾಮಗಳು ಸೇರಿವೆ. ಇಷ್ಟಕ್ಕೂ ದಿನ ಬಿಟ್ಟು ದಿನ ಯಾವುದೇ ಕೊರತೆ ಇಲ್ಲದಂತೆ ಬೆಂಗಳೂರು ಜಲಮಂಡಳಿ ಸದ್ಯ ನೀರು ಪೂರೈಕೆ ಮಾಡುತ್ತಿದೆ.
ಮಳೆ ಕೊರತೆಯಾದ ವರ್ಷಗಳಲ್ಲಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆ. ದಿನಬಿಟ್ಟು ದಿನ ಪೂರೈಕೆಯಾಗಬೇಕಾದ ನೀರು ಮೂರ್ನಾಲ್ಕು ದಿನಗಳಿಗೊಮ್ಮೆ ಪೂರೈಕೆಯಾದ ಉದಾಹರಣೆ ಇದೆ. ಅದರಲ್ಲೂ ಹೊರವಲಯದ ಪ್ರದೇಶಗಳಲ್ಲಿ ನೀರಿನ ಅಭಾವ ತೀವ್ರವಾಗಿ ಕಾಡುತ್ತದೆ. ನೀರಿನ ಟ್ಯಾಂಕರ್‌ಗಳು ಜನರ ಸುಲಿಗೆ ಮಾಡುತ್ತವೆ. ಆದರೆ, ಒಂದು ಬಾರಿ ಕೆಆರ್‌ಎಸ್‌ನಲ್ಲಿ ಅಗತ್ಯದಷ್ಟು ನೀರು ತುಂಬಿದರೆ ಬೆಂಗಳೂರಿಗೆ ಇಂತಹ ಯಾವುದೇ ಸಮಸ್ಯೆ ಕಾಡುವುದಿಲ್ಲ ಎಂಬುದು ಅಶಾಭಾವ.

ಬೆಂಗಳೂರಿಗೆ ಬೇಕು 19 ಟಿಎಂಸಿ ನೀರು
ಬೆಂಗಳೂರು ಜನಸಂಖ್ಯೆ ಸದ್ಯ 1.2 ಕೋಟಿ ಇದೆ ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ 10 ಲಕ್ಷದಿಂದ 15ಲಕ್ಷದಷ್ಟು ಜನರು ಬಂದು ಹೋಗುವವರು (ಫ್ಲೋಟಿಂಗ್ ಪಾಪುಲೇಷನ್) ಇರುತ್ತಾರೆ. ಕುಡಿಯಲು, ಸ್ನಾನ, ಶೌಚ ಮತ್ತು ಬಟ್ಟೆಗಳ ಶುಚಿಗೆ ಸೇರಿ ಪ್ರತಿ ವ್ಯಕ್ತಿಗೆ ಒಂದು ದಿನಕ್ಕೆ 100 ಲೀಟರ್ ನೀರಿನ ಅಗತ್ಯವಿದೆ ಎಂದು ಪರಿಗಣಿಸಿ ಅಷ್ಟು ಪ್ರಮಾಣದಲ್ಲಿ ಬೆಂಗಳೂರು ಜಲಮಂಡಳಿ ಕೆಆರ್‌ಎಸ್ ಜಲಾಶಯದಿಂದ ಬೆಂಗಳೂರು ನಗರಕ್ಕೆ ನೀರು ತರುತ್ತಿದೆ.
ಅಂದರೆ, 1.2 ಕೋಟಿ ಜನಸಂಖ್ಯೆಗೆ ಅನುಗುಣವಾಗಿ ಪ್ರತಿನಿತ್ಯ 1200 ದಶಲಕ್ಷ (ಎಂಎಲ್‌ಡಿ- ಮಿಲಿಯನ್ ಲೀಟರ್ ಪರ್ ಡೇ) ನೀರು ಬೆಂಗಳೂರಿಗೆ ಅಗತ್ಯವಿದೆ. ಸದ್ಯ ಬೆಂಗಳೂರು ಜಲಮಂಡಳಿ 1420ರಿಂದ 1450 ಎಂಎಲ್‌ಡಿ ನೀರು ನಗರಕ್ಕೆ ತರುತ್ತಿದೆ. ಇದನ್ನು ವಾರ್ಷಿಕವಾಗಿ ಅಂದಾಜಿಸಿದಾಗ 19 ಟಿಎಂಸಿ ನೀರು ಬೆಂಗಳೂರಿಗಾಗಿಯೇ ಬೇಕಾಗುತ್ತದೆ. ಕಳೆದ ಕೆಲವು ವರ್ಷಗಳ ಸರಾಸರಿ ನೋಡಿದಾಗ 18ರಿಂದ 18.5 ಟಿಎಂಸಿ ನೀರು ಬೆಂಗಳೂರಿಗೆ ಬಳಕೆಯಾಗಿದೆ ಎಂದು ಜಲಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೂರು ಹಂತಗಳಲ್ಲಿ ಪಂಪಿಂಗ್
ಮೊದಲೇ ಹೇಳಿದಂತೆ ಬೆಂಗಳೂರಿಗೆ ಬರುವ ನೀರನ್ನು ಕೆಆರ್‌ಎಸ್ ಜಲಾಶಯದಿಂದ ಪಂಪಿಂಗ್ ಮೂಲಕ ತರಲಾಗುತ್ತದೆ. ಹಾರೋಹಳ್ಳಿ, ಟಿ.ಕೆ. ಹಳ್ಳಿ ಮತ್ತು ತಾತಗುಣಿಯಲ್ಲಿ ಪಂಪಿಂಗ್ ಘಟಕಗಳಿದ್ದು, ಹೀಗೆ ಮೂರು ಹಂತದಲ್ಲಿ ಪಂಪ್ ಮಾಡಿ 100ಕಿ.ಮೀ. ದೂರದಿಂದ ನೀರು ತರಲಾಗುತ್ತದೆ. ಇದೇ ಮಾರ್ಗ ಮಧ್ಯಮಧ್ಯದಲ್ಲಿ ನೀರಿನ ಶುದ್ಧೀಕರಣ ಸಹ ಮಾಡಲಾಗುತ್ತದೆ.

ನೀರು ಪೂರೈಕೆಯಲ್ಲಿತೊಂದರೆಯಾಗದು
"ಕೆಆರ್‌ಎಸ್ ತುಂಬಿರುವುದು ನಮಗೆ ಸಂತಸ ತಂದಿದೆ. ಮುಂದಿನ ಒಂದು ವರ್ಷಕ್ಕೆ ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಆಗುವುದಿಲ್ಲ ಎಂಬ ಭರವಸೆಯನ್ನು ನಾವು ನೀಡುತ್ತೇವೆ. ಬೆಂಗಳೂರಿನ ಒಟ್ಟಾರೆ ಸುಮಾರು ಒಂದೂವರೆ ಕೋಟಿ ಜನರಿಗೆ ನೀರು ಪೂರೈಸುವುದು ನಮ್ಮ ಜವಾಬ್ದಾರಿ" ಎಂದು ಬೆಂಗಳೂರು ಜಲಮಂಡಳಿ (ಕಾವೇರಿ ವಿಭಾಗ) ಮುಖ್ಯ ಎಂಜಿನಿಯರ್ ಎಸ್.ವಿ. ರಮೇಶ್ 'ಒನ್ ಇಂಡಿಯಾ ಕನ್ನಡ'ಕ್ಕೆ ತಿಳಿಸಿದರು.
ಬೆಂಗಳೂರಿಗೆ ವಾರ್ಷಿಕವಾಗಿ 19 ಟಿಎಂಸಿ ನೀರಿನ ಅಗತ್ಯ ಇದೆ. ಬೆಂಗಳೂರಿಗೆ ಹಂಚಿಕೆಯಾಗಿರುವ ಕಾವೇರಿ ನೀರಿನ ಕೋಟಾದಡಿ ಅಷ್ಟೂ ನೀರು ಪಡೆಯುವುದಕ್ಕೆ ಯಾವುದೇ ತೊಂದರೆ ಇಲ್ಲ. ಇದಲ್ಲದೆ ಇನ್ನೂ ಹೆಚ್ಚುವರಿಯಾಗಿ 10 ಟಿಎಂಸಿ ನೀರನ್ನು ಬೆಂಗಳೂರು ಕೋಟಾಕ್ಕೆ ನೀಡಲಾಗಿದೆ. ಕಾವೇರಿ 5ನೇ ಹಂತದ ಯೋಜನೆಯ ಮೂಲಕ ಆ ನೀರನ್ನೂ ತಂದು ಬೆಂಗಳೂರಿನ ಹೊರವಲಯದ ಪ್ರದೇಶಗಳಿಗೆ ಸರಬರಾಜು ಮಾಡಲಾಗುವುದು. ಈ ಸಂಬಂಧ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ ಎಂದು ರಮೇಶ್ ವಿವರಿಸಿದರು.