Foot Over Bridge: ಕೊನೆಗೂ ಸಾರ್ವಜನಿಕರಿಗೆ ಮುಕ್ತವಾಯಿತು ಕೆ.ಆರ್‌ಪುರಂ ಬ್ರಿಡ್ಜ್, ಜನ ಬೇಸರ
ಬೆಂಗಳೂರು, ಆಗಸ್ಟ್ 26: ರಾಜಧಾನಿ ಬೆಂಗಳೂರಿನಲ್ಲಿನ ಕೆಆರ್ ಪುರಂ ರೈಲ್ವೆ ನಿಲ್ದಾಣ ಮತ್ತು ಕೆಆರ್ ಪುರಂ ಮೆಟ್ರೋ ನಿಲ್ದಾಣ ಸಂಪರ್ಕಿಸುವ ಪಾದಾಚಾರಿಗಳಿಗೆ ಅನುಕೂಲವಾಗುವ ಫುಟ್-ಓವರ್-ಬ್ರಿಡ್ಜ್ (FOB) ಹಲವು ಗಡುವುಗಳ ನಂತರ ಅಂತಿಮವಾಗಿ ಪೂರ್ಣಗೊಂಡಿದೆ. ಇತ್ತೀಚೆಗಷ್ಟೆ ಪಾದಾಚಾರಿಗಳಿಗೆ ಸಂಚಾರಕ್ಕೆ ಮುಕ್ತಗೊಂಡಿದೆ.
ಕೆ.ಆರ್.ಪುರಂ ಹೆಚ್ಚು ಜನದಟ್ಟಣೆಯ ಪ್ರದೇಶವಾಗಿದೆ. ಇಲ್ಲಿನ ಇಂಟರ್‌ಮೋಡಲ್ ಸಂಪರ್ಕ ಸುಧಾರಿಸುವ ಹಾಗೂ ಜನರಿಗೆ ಸಂಚರಿಸಲು ಅನುಕೂಲವಾಗುವಂತೆ ಈ ಫುಟ್ ಓವರ್ ಬ್ರಿಡ್ಜ್ ಮೂಲಸೌಕರ್ಯ ಸ್ಥಾಪಿಸಲಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ರೈಲ್ವೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಹಾಗೂ ಟ್ರಾಫಿಕ್ ಪೊಲೀಸ್ ಸಹಯೋಗದೊಂದಿಗೆ ನಿರ್ಮಾಣ ಮಾಡಲಾಗಿದೆ.

ಮೆಟ್ರೋ ನೀಲಿ ಹಾಗೂ ನೇರಳೆ ಮಾರ್ಗಕ್ಕೆ ಸಂಪರ್ಕ
ರೈಲು ನಿಲ್ದಾಣದಿಂದ ನಮ್ಮ ಮೆಟ್ರೋ ನೀಲಿ ಹಾಗೂ ಮೆಟ್ರೋ ನೇರಳೆ ಮಾರ್ಗಗಳನ್ನು ಸಂಪರ್ಕಿಸಲು ಪ್ರಯಾಣಿಕರಿಗೆ ನೆರವಾಗುತ್ತದೆ. ಜನರು ಈ ರೈಲು ನಿಲ್ದಾಣಗಳ ಮಧ್ಯೆ ಓಡಾಡಬಹುದಾಗಿದೆ. ಇನ್ನು ಮುಂದೆ ರಸ್ತೆ ದಾಟುವ, ಧಾವಂತ, ಭಯ, ಕಿರಿ ಕಿರಿ ಜನರಿಗೆ ತಪ್ಪಲಿದೆ. ಪಾದಾಚಾರಿಗಳ ಸಂಚಾರ ಈ ಎಫ್‌ಓಬಿಯಿಂದ ಸರಳವಾಗಿದೆ.
ಕೆಲವು ವರ್ಷಗಳವರೆಗೆ ಸರಿಯಾದ ಪಾದಚಾರಿ ಮಾರ್ಗವಿಲ್ಲದೇ ಜನರು ಪದಾಡುತ್ತಿದ್ದರು. ಪ್ರಯಾಣಿಕರು ರೈಲು ನಿಲ್ದಾಣದಿಂದ ಮೆಟ್ರೋಗೆ ಬರಲು ತೊಂದರೆ ಆಗಿತ್ತು. ರಸ್ತೆ ದಾಟುವವರಿಗೂ ಸಮಸ್ಯೆ ಆಗಿತ್ತು. ಇದೀಗ ಆ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.
ಎಫ್‌ಓಬಿಯಲ್ಲಿ ಕೆಲಸ ಬಾಕಿ, ಜನ ಬೇಸರ
ವಿಪರ್ಯಾಸವೆಂದರೆ ಕೆಲವು ಗಡುವುಗಳ ಮೀರಿದ ನಂತರ ಈ ಬ್ರಿಡ್ಜ್ ಪೂರ್ಣಗೊಂಡಿದೆ. ಆದರೆ ಒಂದಷ್ಟು ಕೆಲಸಗಳು ಬಾಕಿ ಉಳಿದುಕೊಂಡಿವೆ. ವೃದ್ಧರು ಹಾಗೂ ಅಂಗವಿಕಲ ಪ್ರಯಾಣಿಕರಿಗೆ ಅಗತ್ಯವಾದ ಲಿಫ್ಟ್‌ಗಳು ಆರಂಭವಾಗಿಲ್ಲ. ಅಳವಡಿಕೆ ಕಾರ್ಯ ಬಾಕಿ ಉಳಿದಿದೆ. ಇನ್ನೂ ಬ್ರಿಡ್ಜ್ ಅನುಸರಿಸುವ ಬರುವವರಿಗೆ ಯಾವ ಮಾರ್ಗವಾಗಿ ಪ್ರಯಾಣಿಸಬೇಕು ಎಂಬ ಸೂಚನಾ ಫಲಕ ಸಹ ಹಾಕಿಲ್ಲ.

ಇದೆಲ್ಲ ಕಾರಣದಿಂದ ಎಫ್‌ಓಬಿ ಸಾರ್ವಜನಿಕರಿಗೆ ಮುಕ್ತಗೊಂಡರು ಸಹಿತ ಜನರಿಂದ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿವೆ. ರೈಲು ಪ್ರಯಾಣಿಕರಿಗೆ ಮೆಟ್ರೋ ನಿಲ್ದಾಣದಿಂದ ಬರುವವರಿಗೆ ಈ ಬ್ರಿಡ್ಜ್ ಹೆಚ್ಚು ಸಹಕಾರಿಯಾಗಿದೆ. ಅದರಲ್ಲೂ ಬೆಳಗ್ಗೆ ಮತ್ತು ಸಂಜೆ ಪೀಕ್ ಹವರ್ ನಲ್ಲಿ ರಸ್ತೆ ದಾಟುವುದು ದುಃಸ್ವಪ್ನವಾಗಿತ್ತು. ಸದ್ಯ ಲಿಫ್ಟ್ ಇಲ್ಲದಿರುವುದು ನಿರಾಶಾದಾಯಕ ಆಗಿದೆ.
ಕೆ.ಆರ್.ಪುರಂ ರೈಲು ನಿಲ್ದಾಣ, ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕಿಸಲು ಈ ಎಫ್‌ಓಬಿ ಉತ್ತಮ ಯೋಝನೆಯಾಗಿದೆ. ಜನರಿಗೆ ಸುರಕ್ಷಿತ ರಸ್ತೆ ದಾಟುವಿಕೆಯನ್ನು ಖಚಿತಪಡಿಸುತ್ತದೆ. ಆದಷ್ಟು ಬೇಗ ಲಿಫ್ಟ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಳಿಸಬೇಕು, ಸೂಚನಾ ಫಲಕ ಅಳವಡಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.












Click it and Unblock the Notifications