KPSC Re Exam 2024: ಗೆಜೆಟೆಡ್ ಪ್ರೊಬೇಷನರಿ ಪೂರ್ವಭಾವಿ ಮರು ಪರೀಕ್ಷೆ ದಿನಾಂಕ ಗೊಂದಲ, ಯಾಕೆ ?
Gazetted Probationers: ಕರ್ನಾಟಕದಲ್ಲಿ ಕೆಪಿಎಸ್‌ಪಿ ಪರೀಕ್ಷೆ ಗೊಂದಲ ಮುಂದುವರಿದಿದೆ. ಇತ್ತೀಚಿನ ದಿನಗಳಲ್ಲಿ ಕೆಪಿಎಸ್‌ಸಿ (Karnataka Public Service Commission ಕರ್ನಾಟಕ ಲೋಕ ಸೇವಾ ಆಯೋಗ)ಕ್ಕೆ ಸಂಬಂಧಿಸಿದಂತೆ ಒಂದಿಲ್ಲೊಂದು ವಿವಾದ ಅಥವಾ ಗೊಂದಲಗಳು ಮುಂದುವರಿದಿದೆ. ಇದೀಗ ಮಹತ್ವದ ಪರೀಕ್ಷೆಯ ದಿನಾಂಕದ ವಿಚಾರದಲ್ಲೂ ಗೊಂದಲ ಸೃಷ್ಟಿಯಾಗಿದ್ದು, ಈ ಬಗ್ಗೆ ಕೆಪಿಎಸ್‌ಸಿ ಸ್ಪಷ್ಟನೆ ನೀಡಬೇಕು. ವಿದ್ಯಾರ್ಥಿಗಳನ್ನು ಗೊಂದಲಕ್ಕೆ ದೂಡಬಾರದು ಎನ್ನುವ ಆಗ್ರಹ ಕೇಳಿ ಬಂದಿದೆ. ಈಚೆಗೆ ನಡೆದಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆಗೆ ಸಂಬಂಧಿಸಿದಂತೆ ಭಾರೀ ಗೊಂದಲ ಸೃಷ್ಟಿಯಾಗಿತ್ತು. ಅದನ್ನು ಸರಿಪಡಿಸುವ ಹಂತದಲ್ಲೇ ಮತ್ತೊಂದು ಸಮಸ್ಯೆ ಎದುರಾಗಿದೆ.
ಕರ್ನಾಟಕ ಲೋಕ ಸೇವಾ ಆಯೋಗದ ಕಾರ್ಯ ವೈಖರಿಯ ಬಗ್ಗೆ ಮೊದಲಿನಿಂದಲೂ ಕೆಲವೊಂದು ನಿರ್ದಿಷ್ಟ ವಿಚಾರಗಳಲ್ಲಿ ಅಸಮಾಧಾನ ಇದೆ. ಇದೀಗ ಇಲಾಖೆಯು ಮರುಪರೀಕ್ಷೆ ನಡೆಸುವ ವಿಚಾರದಲ್ಲೂ ಸ್ಪಷ್ಟ ಮಾಹಿತಿ ನೀಡದೆ ವಿದ್ಯಾರ್ಥಿಗಳನ್ನು ಗೊಂದಲಕ್ಕೆ ದೂಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಕೆಲವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಕೆಪಿಎಸ್‌ಸಿಯೂ ವಿದ್ಯಾರ್ಥಿಗಳ ಜೊತೆ ಚೆಲ್ಲಾಟವಾಡುತ್ತಿದೆ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಮರು ಪರೀಕ್ಷೆಯನ್ನು ಕರ್ನಾಟಕ ಲೋಕಸೇವಾ ಆಯೋಗವು ಡಿಸೆಂಬರ್ 29ಕ್ಕೆ ನಿಗದಿ ಮಾಡಿದೆ. ಆದರೆ, ಈ ಪರೀಕ್ಷೆ ನಿಗದಿತ ದಿನಾಂಕದಂದೇ ನಡೆಯಲಿದೆಯೇ ಎನ್ನುವ ಬಗ್ಗೆ ಗೊಂದಲ ಇದೆ. ಈ ವಿಷಯದ ಬಗ್ಗೆ ಈವರೆಗೂ ಅಭ್ಯರ್ಥಿಗಳಿಗೆ ಸ್ಪಷ್ಟತೆ ಇಲ್ಲ. ಏಕೆಂದರೆ, ಮರು ಪರೀಕ್ಷೆಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ ನೀಡಲಾಗಿದೆ. ಇಷ್ಟೆಲ್ಲಾ ಗೊಂದಲಗಳ ನಡುವೆಯೂ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಪ್ರವೇಶ ಪತ್ರ ಬಿಡುಗಡೆಗೊಂಡಿರುವ ಬಗ್ಗೆ ಮಾಹಿತಿ ಹರಿದಾಡುತ್ತಿದೆ ಎಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಕಾಂತಕುಮಾರ್ ಆರ್ ದೂರಿದ್ದಾರೆ.
ಕೆಪಿಸಿಯು ವಿದ್ಯಾರ್ಥಿಗಳಲ್ಲಿ ಮೂಡಿರುವ ಗೊಂದಲವನ್ನು ನಿವಾರಿಸಬೇಕು. ಈ ಎಲ್ಲಾ ವಿಷಯಗಳ ಬಗ್ಗೆಯೂ ಕೂಡ ಆಯೋಗವು ಪತ್ರಿಕಾ ಪ್ರಕಟಣೆಯ ಮೂಲಕ ಸ್ಪಷ್ಟನೆ ನೀಡಬೇಕು. ಲಕ್ಷಾಂತರ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಸ್ಪಷ್ಟನೆ ನೀಡಬೇಕಿದೆ ಎನ್ನುವ ಆಗ್ರಹ ಕೇಳಿ ಬಂದಿದೆ. ಈಗಾಗಲೇ ಸಾಕಷ್ಟು ಅಭ್ಯರ್ಥಿಗಳು ಗೊಂದಲಗಳಿಂದಾಗಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾರೆ. ಇನ್ನೂ ಯಾವುದೇ ರೀತಿ ವಿಳಂಬ ಧೋರಣೆ ಅನುಸರಿಸದೆ ಆಯೋಗವು ಕೋರ್ಟ್‌ನ ತಡೆಯಾಜ್ಞೆ ತೆರವುಗೊಳಿಸಲು ಏನೆಲ್ಲ ಕ್ರಮ ತೆಗೆದುಕೊಂಡಿದೆ ಎನ್ನುವುದನ್ನು ವಿವರಿಸಬೇಕು. ಅಲ್ಲದೇ ನಿಗದಿತ ದಿನಾಂಕದಂದು ಮರು ಪರೀಕ್ಷೆ ನಡೆಸಲು ಯಾವ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎನ್ನುವುದು ಸೇರಿದಂತೆ ನಿಖರ ಮಾಹಿತಿಯನ್ನು ಕೂಡಲೇ ಪತ್ರಿಕಾ ಪ್ರಕಟಣೆಯ ಮೂಲಕ ಹಂಚಿಕೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

ಸ್ಪಷ್ಟನೆ ನೀಡಿ; ಅಭ್ಯರ್ಥಿಗಳಲ್ಲಿನ ಗೊಂದಲ ದೂರ ಮಾಡಿ: 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಮರು ಪರೀಕ್ಷೆಯ ಬಗ್ಗೆ ಇರುವ ಗೊಂದಲಗಳ ಬಗ್ಗೆ ಮಾಹಿತಿ ನೀಡಬೇಕು ಹಾಗೂ ಆಯೋಗವು ಸ್ಪಷ್ಟ ಪ್ರಕಟಣೆ ಹೊರಡಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಈ ನಿಟ್ಟಿನಲ್ಲಿ ಆಯೋಗವು ಇಲ್ಲಿಯ ವರೆಗೆ ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ.












Click it and Unblock the Notifications