ಬಿಟ್ ಕಾಯಿನ್ ಹಗರಣದ ಅಂಕಿ-ಅಂಶಗಳನ್ನು ನೋಡಿದರೆ ನಾನೇ ಮೂರ್ಛೆ ಬೀಳುತ್ತೇನೆ: ಡಿಕೆಶಿ
ಬೆಂಗಳೂರು, ನವೆಂಬರ್ 10: "ಬಿಟ್ ಕಾಯಿನ್ ಹಗರಣದ ಪ್ರಮಾಣ ಲೆಕ್ಕ ಹಾಕಲು ನನಗೆ ಸಾಧ್ಯವಾಗುತ್ತಿಲ್ಲ. ಅದರ ಅಂಕಿ-ಅಂಶಗಳನ್ನು ನೋಡಿದರೆ ನಾನೇ ಮೂರ್ಛೆ ಬೀಳಬಹುದು ಎಂದು ಸುಮ್ಮನಿದ್ದೇನೆ," ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬಿಟ್ ಕಾಯಿನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಲೆದಂಡವಾಗುತ್ತದೆ ಎಂಬ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, "ಬಿಟ್ ಕಾಯಿನ್ ಹಗರಣದಲ್ಲಿ ಪಕ್ಷದ ನಿರ್ಧಾರವನ್ನು ನಾನು ಈಗಾಗಲೇ ಹೇಳಿದ್ದೇನೆ,'' ಎಂದರು.
ಹಗರಣದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯವರ ಮಗ ಭರತ್ ಬೊಮ್ಮಾಯಿ ಹೆಸರು ಕೇಳಿ ಬರುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಯಾರ ಮಕ್ಕಳ ಹೆಸರು ಕೇಳಿ ಬರುತ್ತದೆಯೋ ಬರಲಿ. ನಾನು ದಾಖಲೆ ಇಲ್ಲದೇ ಬೇರೆಯವರಂತೆ ಬೇಕಾಬಿಟ್ಟಿ ಮಾತನಾಡಲು ಸಾಧ್ಯವಿಲ್ಲ," ಎಂದು ಹೇಳಿದರು.
ಈ ಹಗರಣದಿಂದ ಬೊಮ್ಮಾಯಿ ಅವರ ಸರ್ಕಾರಕ್ಕೆ ಕಂಟಕ ಎದುರಾಗುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ನಾನು ಯಾಕೆ ಬೇರೆಯವರ ಮೇಲೆ ಅನಗತ್ಯವಾಗಿ ಆರೋಪ ಮಾಡಲಿ. ತನಿಖೆಯಾಗಿ ಮಾಹಿತಿ ಹೊರಬರಲಿ. ಗೃಹ ಸಚಿವರೇನು ನಮ್ಮ ನಾಯಕರಾ?," ಎಂದು ಮರುಪ್ರಶ್ನಿಸಿದರು.
ಬಿಜೆಪಿಯ ಸಿ.ಟಿ. ರವಿ ಹೇಳಿಕೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, "ನಾನು ಅಧಿಕಾರದಲ್ಲಿಲ್ಲ. ಅಧಿಕಾರದಲ್ಲಿದ್ದಿದ್ದರೆ ಇಷ್ಟು ಹೊತ್ತಿಗೆ ಎಲ್ಲ ಮಾಹಿತಿ ಬಹಿರಂಗಪಡಿಸುತ್ತಿದ್ದೆ. ಕಾಂಗ್ರೆಸ್ ನಾಯಕರ ಮಗನ ವಿಚಾರ ಮಾತನಾಡುವುದಾದರೆ, ಆತ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಆತನನ್ನು ಬಂಧಿಸಲಿ. ಯಾವ ಆಧಾರದ ಮೇಲೆ ಕಾಂಗ್ರೆಸ್ ನಾಯಕರ ಮಕ್ಕಳ ಹೆಸರು ತರುತ್ತಿದ್ದಾರೆ. ತಪ್ಪು ಮಾಡಿದವರನ್ನು ಸುಮ್ಮನೆ ಬಿಡುವುದೇಕೆ? ಈ ಪ್ರಕರಣದಲ್ಲಿ ಯಾರ ಯಾರ ಹೆಸರೆಲ್ಲಾ ಕೇಳಿ ಬಂದಿದೆ? ಪ್ರಧಾನಿಗೆ ಪತ್ರ ಬರೆದಿದ್ದು ಯಾರು ಎಂದು ಗೃಹ ಮಂತ್ರಿಗೆ ಗೊತ್ತಿದೆಯಲ್ಲ, ಅವರು ಆರೋಪಿಗಳನ್ನು ರಕ್ಷಣೆ ಮಾಡುತ್ತಿರುವುದೇಕೆ? ಈ ಎಲ್ಲ ಮಾಹಿತಿಗಳನ್ನು ಜನರ ಮುಂದೆ ಬಹಿರಂಗ ಪಡಿಸಲಿ."
"ನಮಗೆ ಈಗ ಬಂದಿರುವುದು ಪೊಲೀಸ್ ಇಲಾಖೆ ಹಾಗೂ ಬಿಜೆಪಿ ನಾಯಕರು, ಅಧಿಕಾರಿಗಳು ಕೊಟ್ಟಿರುವ ಹಿಂಬಾಗಿಲಿನ ಮಾಹಿತಿ. ಹೀಗಾಗಿ ಅಧಿಕಾರದಲ್ಲಿರುವ ಬಿಜೆಪಿ ನ್ಯಾಯಾಲಯಕ್ಕೆ ದಾಖಲೆ ನೀಡಲಿ, ಜನರ ಮುಂದೆ ಬಹಿರಂಗಪಡಿಸಲಿ," ಎಂದರು.
"ಪ್ರಕರಣದ ತನಿಖೆಯಾಗಿದೆ. ಇದನ್ನು ಇಡಿಗೆ ಹಸ್ತಾತರಿಸಲಾಗಿದೆ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಅವರು ನಡೆಸಿರುವ ತನಿಖೆ ಏನು? ಸಿಕ್ಕಿರುವ ಮಾಹಿತಿ ಏನು? ಏನೆಲ್ಲಾ ಸೀಜ್ ಮಾಡಿದ್ದಾರೆ? ಸೀಜ್ ಮಾಡಿಕೊಂಡ ಬಿಟ್ ಕಾಯಿನ್ ಯಾರ ವಾಲೆಟ್‌ನಲ್ಲಿದೆ? ಹಗರಣದಲ್ಲಿ ಯಾರ ಹೆಸರು ಕೇಳಿಬಂದಿದೆ? ಇ.ಡಿ ತನಿಖೆ ಸಂಬಂಧ ಪ್ರಧಾನಿಗಳಿಗೆ ಪತ್ರ ಬರೆದಿದ್ದು ಯಾರು? ಪೊಲೀಸ್ ಅಧಿಕಾರಿಗಳ ಹೇಳಿಕೆಗಳೇನು? ಎಷ್ಟು ಎಫ್ಐಆರ್ ದಾಖಲಾಗಿದೆ? ಎಂದು ಸರ್ಕಾರ ಮೊದಲು ಮಾಹಿತಿ ನೀಡಲಿ," ಎಂದು ಒತ್ತಾಯಿಸಿದರು.
"ಯಾವುದೋ ಗಲಾಟೆಯಲ್ಲಿ ಕಾಂಗ್ರೆಸ್ ನಾಯಕರ ಜತೆ ಆತ ಗುರುತಿಸಿಕೊಂಡಿದ್ದ ಎಂದು ಹೇಳುತ್ತಾರೆ? ಆ ಪ್ರಕರಣದಲ್ಲಿ ಏನಾಗಿತ್ತು? ಈಗ ಏನಾಗಿದೆ? ಎಂದು ಸರಕಾರವೇ ಹೇಳಬೇಕು. ಮಾಧ್ಯಮಗಳಲ್ಲಿ ಯಾರ ಹೆಸರು ಹೇಳದೆಯೇ ಅನೇಕ ವಿಚಾರಗಳನ್ನು ವರದಿ ಮಾಡಲಾಗುತ್ತಿದೆ. ಹೀಗಾಗಿ ನಾನು ಬೇರೆ ನಾಯಕರ ವೈಯಕ್ತಿಕ ಅಭಿಪ್ರಾಯದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ," ಎಂದು ತಿಳಿಸಿದರು.
"ಈ ವಿಚಾರವಾಗಿ ನಾನು, ನಮ್ಮ ನಾಯಕರು ಮಾಹಿತಿ ಕಲೆಹಾಕುತ್ತಿದ್ದೇವೆ. ಮೊದಲು ಸರ್ಕಾರ ತನ್ನ ಬಳಿ ಇರುವ ಮಾಹಿತಿಯನ್ನು ನೀಡಲಿ. ನಾವು ವಿರೋಧ ಪಕ್ಷವಾಗಿ ನಮ್ಮ ಮಾಹಿತಿಯನ್ನು ಜನರ ಮುಂದೆ ಇಡುತ್ತೇವೆ. ನ್ಯಾಯಾಲಯಕ್ಕೆ ಮಾಹಿತಿ, ದಾಖಲೆ ಒದಗಿಸಬೇಕಾದ ಜವಾಬ್ದಾರಿ ಸರ್ಕಾರದ್ದು," ಎಂದರು.
ಮುಖ್ಯಮಂತ್ರಿಗಳ ದೆಹಲಿ ಭೇಟಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಮುಖ್ಯಮಂತ್ರಿಗಳು ಎಂದ ಮೇಲೆ ರಾಜಕೀಯ, ಸರ್ಕಾರದ ಅಧಿಕೃತ ವಿಚಾರಗಳಿರುತ್ತವೆ. ನಾನು ಮಾಧ್ಯಮಗಳಲ್ಲಿ ನೋಡಿದ ಪ್ರಕಾರ ಮುಖ್ಯಮಂತ್ರಿಗಳು ತಾವು ಪ್ರಧಾನಿ ಹಾಗೂ ಬಿಜೆಪಿ ಅಧ್ಯಕ್ಷ ನಡ್ಡಾ ಭೇಟಿಗೆ ಸಮಯಾವಕಾಶ ಕೇಳಿರುವುದಾಗಿ ಹೇಳಿಕೆ ನೀಡಿದ್ದಾರೆ. ಅವರು ಯಾಕೆ ಹೋಗಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅವರ ಅಧಿಕೃತ, ವೈಯಕ್ತಿಕ ಪ್ರವಾಸದ ಬಗ್ಗೆ ನಾನು ಮಾತನಾಡುವುದಿಲ್ಲ. ಆ ರೀತಿ ಏನಾದರೂ ಮಾಹಿತಿ ಬಂದರೆ ನಾನು ಮಾತನಾಡುತ್ತೇನೆ," ಎಂದರು.
ಪ್ರಧಾನಿ ಕಾರ್ಯಾಲಯ ಬಿಟ್ ಕಾಯಿನ್ ಹಗರಣ ಸಂಬಂಧ ಮಾಹಿತಿ ಪಡೆದಿದೆಯಂತೆ ಎಂಬ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅವರು, "ಬಿಟ್ ಕಾಯಿನ್ ಸಂಬಂಧ ದಾಖಲಾಗಿರುವ ಪ್ರಕರಣ ಸಾರ್ವಜನಿಕ ದಾಖಲೆಯಾಗಿದೆ. ಬಿಟ್ ಕಾಯಿನ್ ಹೆಸರಲ್ಲೇ ಎಫ್ಐಆರ್ ದಾಖಲಾಗಿದೆ. ಕೆಲವರು ನಮ್ಮ ತಂದೆಯವರನ್ನು ಕರೆದುಕೊಂಡು ಹೋಗಿ ಕೂರಿಸಿದ್ದಾರೆ ಎಂದು ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದಾರೆ. ನ್ಯಾಯಾಲಯ ಮೆಡಿಕಲ್ ರಿಪೋರ್ಟ್ ನೀಡಿ ಎಂದು ಹೇಳಿದ್ದರೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡುವುದಿಲ್ಲ ಎಂದು ಹೇಳುತ್ತಾರೆ. ಮೊನ್ನೆ ಒಬ್ಬ ಹುಡುಗನನ್ನು ಕರೆದುಕೊಂಡು ಹೋಗಿ ಒಂದು ತಾಸಿನಲ್ಲೇ ಬಂಧಿಸಿದ್ದಾರೆ," ಎಂದರು.
ಕಾಂಗ್ರೆಸ್ ದಲಿತ ಸಿಎಂ ಹೆಸರು ಘೋಷಿಸಲಿ ಎಂಬ ಬಿಜೆಪಿ ಟ್ವೀಟ್ ವಿಚಾರವಾಗಿ ಕೇಳಿದ ಪ್ರಶ್ನೆಗೆ, 'ಬಿಜೆಪಿ ಅವರು ಮೊದಲು ತಮ್ಮ ಪಕ್ಷದ ವಿಚಾರವಾಗಿ ನಿರ್ಧಾರ ಕೈಗೊಳ್ಳಲಿ. ನಮ್ಮ ಪಕ್ಷದ ವಿಚಾರ ಅವರಿಗೇಕೆ?' ಎಂದು ಪ್ರಶ್ನಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, "ನ.14ರಂದು ಪಕ್ಷದ ಸದಸ್ಯತ್ವ ಅಭಿಯಾನದ ಉದ್ಘಾಟನೆ ಕಾರ್ಯಕ್ರಮವಿದೆ. ಆ ನಂತರ ಸಭೆ ಕರೆದಿದ್ದೇನೆ. ರಾಜ್ಯಮಟ್ಟದ ನಾಯಕರು, ಪರಾಜಿತ ಅಭ್ಯರ್ಥಿಗಳನ್ನು ಕರೆದಿದ್ದು, ಅರ್ಜಿ ಹಾಕಿರುವವರ ಪಟ್ಟಿಯನ್ನು ಇಟ್ಟುಕೊಂಡು ಚರ್ಚೆ ಮಾಡಿ, ಅಭಿಪ್ರಾಯ ಸಂಗ್ರಹಿಸುತ್ತೇವೆ,'' ಎಂದರು.