Vidyarthi Bhavan: ವಿದ್ಯಾರ್ಥಿ ಭವನದ ದೋಸೆ ಸವಿಯಲು ಹೊಸ ನಿಯಮ
ಬೆಂಗಳೂರು, ಮಾರ್ಚ್ 02: ಉದ್ಯಾನ ನಗರಿ ಬೆಂಗಳೂರಿನಲ್ಲಿ ವಿದ್ಯಾರ್ಥಿ ಭವನ ಯಾರಿಗೆ ತಿಳಿದಿಲ್ಲ. ಗಾಂಧಿ ಬಜಾರ್ ವಿದ್ಯಾರ್ಥಿ ಭವನ ಎಂದಾಕ್ಷಣ ಗರಿ ಗರಿ ದೋಸೆ, ಫಿಲ್ಟರ್ ಕಾಫಿ ಕಣ್ ಮುಂದೆ ಬಂದು ಬಾಯಲ್ಲಿ ನೀರು ಬರುತ್ತದೆ. ಬಸವನಗುಡಿ, ಗಾಂಧಿ ಬಜಾರ್ ಕಡೆ ಹೋದವರು ವಿದ್ಯಾರ್ಥಿ ಭವನದ ದೋಸೆ ಸವಿಯಲು ಬಯಸುತ್ತಾರೆ. ನಟರು, ರಾಜಕಾರಣಿಗಳು ಸೇರಿ ದೇಶದ ವಿದೇಶದ ಅನೇಕ ಜನರು ಇಲ್ಲಿಗೆ ಭೇಟಿ ನೀಡಿದ್ದಾರೆ, ನೀಡುತ್ತಿದ್ದಾರೆ.
ವಿದ್ಯಾರ್ಥಿ ಭವನ ಆರಂಭವಾಗಿದ್ದು 1943ರಲ್ಲಿ ಇಂದಿಗೂ ಇಲ್ಲಿನ ದೋಸೆ, ಫಿಲ್ಟರ್ ಕಾಫಿ ಸೇರಿ ವಿವಿಧ ಖಾದ್ಯಗಳಿಗೆ ಅಪಾರವಾದ ಅಭಿಮಾನಿಗಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ವಿದ್ಯಾರ್ಥಿ ಭವನದ ದೋಸೆಯ ಚಿತ್ರ ಸದಾ ವೈರಲ್ ಆಗುತ್ತಿರುತ್ತದೆ. ಆದರೆ ಸಡನ್ ಆಗಿ ವಿದ್ಯಾರ್ಥಿ ಭವನಕ್ಕೆ ಹೋದರೆ ತಕ್ಷಣ ದೋಸೆ ಸಿಗುವುದಿಲ್ಲ. ಕಾಯುವುದು ಅನಿವಾರ್ಯ.

ಟೇಬಲ್ ಬುಕ್ ಮಾಡಿ: ಈಗ ವಿದ್ಯಾರ್ಥಿ ಭವನ ಜನರ ಕಾಯುವ ಅವಧಿ ಕಡಿಮೆ ಮಾಡಲು ಹೊಸ ನಿಯಮ ಜಾರಿಗೊಳಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ನೀಡಿದೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ಆರಂಭವಾಗಿವೆ.
ವಿದ್ಯಾರ್ಥಿ ಭವನ ತನ್ನ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಮಾಹಿತಿಯೊಂದನ್ನು ನೀಡಿದ್ದು ಹೋಟೆಲ್‌ನಲ್ಲಿ ಶೇ 50ರಷ್ಟು ಸೀಟುಗಳನ್ನು ಕಾಯ್ದಿರಿಸುವ ನಿಯಮ ಜಾರಿಗೊಳಿಸಲಾಗಿದೆ ಎಂದು ಹೇಳಿದೆ. ನೇರವಾಗಿ ಹೋಟೆಲ್‌ಗೆ ಆಗಮಿಸುವ ಜನರಿಗಾಗಿ ಇನ್ನು 50ರಷ್ಟು ಸೀಟುಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದೆ.
ಹೊಸ ನಿಯಮದ ಪ್ರಕಾರ ನೀವು ಇಂದು ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡುವ ಆಲೋಚನೆಯಲ್ಲಿದ್ದರೆ 080-26677588 ಸಂಖ್ಯೆಗೆ ಕರೆ ಮಾಡಿ ಮುಂಚಿತವಾಗಿ ಟೇಬಲ್ ಬುಕ್ ಮಾಡಬೇಕು. ಇದರಿಂದಾಗಿ ನೀವು ಹೋಟೆಲ್‌ಗೆ ಆಗಮಿಸಿ ಕ್ಯೂ ನಿಲ್ಲುವುದು ತಪ್ಪಲಿದೆ. ನೀವು ಕರೆ ಮಾಡಿ ಟೇಬಲ್ ಬುಕ್ ಮಾಡಿದಾಗ ನಿಮಗೆ ಟೋಕನ್ ನಂಬರ್ ನೀಡಲಾಗುತ್ತದೆ. ವಿದ್ಯಾರ್ಥಿ ಭವನಕ್ಕೆ ಆಗಮಿಸಿದ ತಕ್ಷಣ ನೀವು ಟೋಕನ್ ಪಡೆಯಬಹುದು.
ವಿದ್ಯಾರ್ಥಿ ಭವನ ಶೇ 50ರಷ್ಟು ಸೀಟನ್ನು ಮುಂಚಿತವಾಗಿ ಬುಕ್ ಮಾಡಿದವರಿಗೆ ಮೀಸಲಿಟ್ಟುದ್ದು, ಟೋಕನ್ ಪಡೆದ ನೀವು ಕಾಯ್ದಿರಿಸಿದ ಟೇಬಲ್‌ನಲ್ಲಿ ಕುಳಿತು ಇಷ್ಟದ ಖಾದ್ಯ ಸವಿಯಬಹುದು.
ನೇರವಾಗಿ ಹೋಟೆಲ್‌ಗೆ ಬರುವ ಜನರಿಗಾಗಿಯೇ ಉಳಿದ ಶೇ 50ರಷ್ಟು ಸೀಟು ಮೀಸಲಿಟ್ಟಿದ್ದೇವೆ. ನೇರವಾಗಿ ಬರುವವರಿಗೆ ಸದಾ ಸ್ವಾಗತ. ಆದರೆ ನೀವು ಬಂದ ತಕ್ಷಣ ಟೇಬಲ್ ಸಿಗುವುದಿಲ್ಲ. ಕಾಯಬೇಕಿದೆ, ಅದರಲ್ಲೂ ವೀಕೆಂಡ್ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಕಾಯಬೇಕಾಗಬಹುದು.
ನೀವು ವಿದ್ಯಾರ್ಥಿ ಭವನಕ್ಕೆ ಬರುವ ಆಲೋಚನೆ ಇದ್ದರೆ ಮೊದಲೇ ಕರೆ ಮಾಡಿ ಟೇಬಲ್ ಬುಕ್ ಮಾಡಿ ಎಂದು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಮಾಹಿತಿ ನೀಡಲಾಗಿದೆ.
ಗಾಂಧಿ ಬಜಾರ್‌ಗೆ ಕುಟುಂಬದ ಜೊತೆ ಶಾಪಿಂಗ್‌ಗೆ ಹೋಗಿ ಹಲವು ಬಾರಿ ವಿದ್ಯಾರ್ಥಿ ಭವನದ ಮುಂದೆ ಕಾದಿದ್ದೇವೆ. ಈಗ ಟೇಬಲ್ ಬುಕ್ಕಿಂಗ್ ವ್ಯವಸ್ಥೆ ಮಾಡಿರುವುದು ಉತ್ತಮ ಎಂದು ಹಲವಾರು ಜನರು ಅಭಿಪ್ರಾಯಪಟ್ಟಿದ್ದಾರೆ.
ಜನರು ಬುಕ್ ಮಾಡಿದ ಸಮಯಕ್ಕೆ ಬರಲು ಸಾಧ್ಯವಾಗದಿದ್ದರೆ ಟೇಬಲ್ ಖಾಲಿ ಉಳಿದಿರುತ್ತದೆ. ಅದನ್ನು ವಿದ್ಯಾರ್ಥಿ ಭವನದ ಹೊರಗೆ ನೇರವಾಗಿ ಬಂದು ಕಾದು ನಿಂತವರಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಹ ಜನರು ಸಲಹೆಯನ್ನು ನೀಡಿದ್ದಾರೆ.
ಒಟ್ಟಿನಲ್ಲಿ ವಿದ್ಯಾರ್ಥಿ ಭವನದ ಟೇಬಲ್ ಬುಕ್ ಮಾಡುವ ಹೊಸ ನಿಯಮದ ಕುರಿತು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ನೀವು ಮನೆಯಲ್ಲಿ ಏಕೆ ಚರ್ಚೆ ಮಾಡುತ್ತೀರಿ. ವಿದ್ಯಾರ್ಥಿ ಭವನಕ್ಕೆ ಕರೆ ಮಾಡಿ ಅಲ್ಲಿಯೇ ಬಿಸಿ ಬಿಸಿ ದೋಸೆ ಮುರಿಯುತ್ತಾ ಚರ್ಚೆ ಮಾಡಿ, ಹೊರಡಿ ಬೇಗ.












Click it and Unblock the Notifications