ಕೆಜೆಪಿ- ಬಿಜೆಪಿ ವಿಲೀನವಾಗಲಿದೆಯೇ? ಕಾದು ನೋಡಿ
ಬೆಂಗಳೂರು, ಸೆ.18: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಕೆಜೆಪಿ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಲು ನಿರ್ಧಾರ ಕೈಗೊಂಡು ಎಲ್ಲ ಗೊಂದಲಗಳಿಗೂ ತೆರೆ ಎಳೆಯಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ದೂತ ಲೆಹರ್ ಸಿಂಗ್ ಅವರನ್ನು ದೆಹಲಿಗೆ ಕಳಿಸಿರುವ ಸುದ್ದಿಯನ್ನು ಈಗಾಗಲೇ ಓದಿರುತ್ತೀರಿ..
ಬುಧವಾರ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಹಿರಿಯ ಸದಸ್ಯರ (ಕೋರ್ ಕಮಿಟಿ) ಸಭೆ ಆರಂಭಗೊಂಡಿದೆ. ಎಲ್ಲ ಮುಖಂಡರ ಅಭಿಪ್ರಾಯ ಸಂಗ್ರಹ ಕಾರ್ಯ ಜಾರಿಯಲ್ಲಿ. ಸಭೆಯಲ್ಲಿ ಒಮ್ಮತ ಪಡೆದ ಬಳಿಕ ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸಲು ತೀರ್ಮಾನ ಪ್ರಕಟಿಸಲು ಯಡಿಯೂರಪ್ಪ ನಿರ್ಧರಿಸಿದ್ದಾರೆ.
ಯಡಿಯೂರಪ್ಪ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳಿಗೂ ಬದ್ಧ ಎಂದು ಪಕ್ಷದ ಮುಖಂಡರು ಮತ್ತು ಪದಾಧಿಕಾರಿಗಳು ಒಂದು ಸಾಲಿನ ನಿರ್ಣಯ ಕೈಗೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ಬೇಕಾದ ಮಾತುಕತೆ ನಡೆಸುವಂತೆ ದೆಹಲಿಗೆ ಲೆಹರ್ ಸಿಂಗ್ ರನ್ನು ಕಳಿಸಿದ್ದಾರೆ.
ಇನ್ನೊಂದು ಸುತ್ತಿನ ಚಿಂತನ ಮಂಥನ ವ್ಯವಹಾರ ಕುದುರಿಸುವಿಕೆ ಭಾಗವಾಗಿ ಯಡಿಯೂರಪ್ಪ ದೆಹಲಿ ಯಾತ್ರೆ ಕೈಗೊಳ್ಳುವ ಸಾಧ್ಯತೆಯೂ ಇದೆ. ಎಲ್ ಕೆ ಅಡ್ವಾಣಿ, ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್ ಅವರೊಂದಿಗೆ ಚರ್ಚೆ ನಡೆಸಲು ಅವಕಾಶ ಕೋರಲಾಗಿದೆ. ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದ ಬಳಿಕ ಕೆಜೆಪಿಯಲ್ಲಿ ಮತ್ತೆ ಚಟುವಟಿಕೆಗಳು ಆರಂಭಗೊಂಡಿದೆ. ಕೆಜೆಪಿ ಹಾಗೂ ವಿಲೀನವಾಗಲಿದೆಯೇ? ಯಡಿಯೂರಪ್ಪ ಮತ್ತೆ ಬಿಜೆಪಿ ಸೇರುತ್ತಾರಾ? ಮುಂದೆ ಓದಿ

ಕೆಜೆಪಿ ಅಸ್ತಿತ್ವದ ಪ್ರಶ್ನೆ
ಕೆಜೆಪಿ ಅಸ್ತಿತ್ವ ಉಳಿಸಿ ಕೊಳ್ಳಬೇಕೆ, ಇಲ್ಲವೆ ಬಿಜೆಪಿಯಲ್ಲಿ ವಿಲೀನಗೊಳಿಸಬೇಕೆ ಎಂಬುದು ಈಗಿನ ಪ್ರಶ್ನೆ. ಯಡಿಯೂರಪ್ಪ ಅವರು ಬಿಜೆಪಿಗೆ ಮರಳುವುದು ಬಹುತೇಕ ನಿಶ್ಚಿತವಾಗಿದೆ.
ಬಿಎಸ್ ವೈ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗ ಬೇಕೆಂದು ಒಂದು ಸಾಲಿನ ನಿರ್ಣಯ ಕೈಗೊಳ್ಳಲು ಕೆಜೆಪಿ ತೀರ್ಮಾನಿಸಿದೆ
ಕೆಲ ದಿನಗಳ ಹಿಂದೆ ಯಡಿಯೂರಪ್ಪನವರು ರಹಸ್ಯವಾಗಿ ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳ ಸಭೆ ನಡೆಸಿದ್ದರು.

ಔಪಚಾರಿಕ ಘೋಷಣೆ ಬಾಕಿ
ಕೆಜೆಪಿ ಕೋರ್ ಕಮಿಟಿ ಮತ್ತು ಜಿಲ್ಲಾ ಮುಖಂಡರ ಸಭೆ ನಡೆಸಲಾಗುತ್ತಿದ್ದು, ಸಭೆಯಲ್ಲಿ ಪಕ್ಷದ ಮುಖಂಡರಾದ ಶೋಭಾ ಕರಂದ್ಲಾಜೆ, ಎಂ.ಡಿ.ಲಕ್ಷ್ಮಿನಾರಾಯಣ, ವಿ.ಧನಂಜಯಕುಮಾರ್, ಶ್ರೀನಿವಾಸ್, ರಾಜೇಂದ್ರ ಗೋಖಲೆ ಮತ್ತಿತರರು ಪಾಲ್ಗೊಂಡಿದ್ದಾರೆ.
ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸಲು ಎಲ್ಲ ಸಿದ್ಧತೆ ನಡೆದಿದೆ. ಇನ್ನು ಕೇವಲ ಔಪಚಾರಿಕ ಘೋಷಣೆ ಮಾತ್ರ ಬಾಕಿ ಇದ್ದು, ರಾಷ್ಟ್ರಮಟ್ಟದ ನಾಯಕರ ಜತೆ ಚರ್ಚಿಸಿದ ಬಳಿಕ ಅಧಿಕೃತವಾಗಿ ಘೋಷಣೆ ಮಾಡಲು ತೀರ್ಮಾನಿಸಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿರುವ ನರೇಂದ್ರಮೋದಿ ಜತೆ ಯಡಿಯೂರಪ್ಪ ಮಾತುಕತೆ ನಡೆಸಬೇಕೆಂಬ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಮತ ವಿಭಜನೆ ಕಾರಣ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ ವಿಭಜನೆಯಾಗುವುದನ್ನು ತಡೆಗಟ್ಟಲು ಆರ್ ಎಸ್ ಎಸ್ ನಾಯಕರ ಸೂಚನೆ ಮೇರೆಗೆ ಬಿಜೆಪಿ ಕೆಜೆಪಿಯನ್ನು ವಿಲೀನಗೊಳಿಸಲು ಎಲ್ಲರಿಗೂ ಮುಂದಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ ಶೇ 41.6 ರಷ್ಟು ಶೇಕಡಾವರು ಮತಗಳು ಬಿಜೆಪಿ ಪಾಲಾಗಿತ್ತು. ಬಿಜೆಪಿ 19 ಸೀಟು ಗೆದ್ದಿತ್ತು. ಕಾಂಗ್ರೆಸ್ 37.6 ರಷ್ಟು ಮತ ಪಡೆದರೂ 6 ಸೀಟು, ಜೆಡಿಎಸ್ 13.6 ಶೇಕಡಾವಾರು ಮತ ಪಡೆದಿತ್ತು.
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಶೇ 36.6 ರಷ್ಟು ಮತ ಗಳಿಸಿದರೆ, ಬಿಜೆಪಿ -ಕೆಜೆಪಿ ಸೇರಿಸಿ ಶೇ 29.8 ರಷ್ಟು ಬಂದಿತ್ತು. ಜೆಡಿಎಸ್ ಶೇ 20.1 ಮತ ಗಳಿಸಿತ್ತು.ಹೀಗಾಗಿ ಮತ ವಿಭಜನೆ ತಡೆಗಟ್ಟಲು ಯತ್ನ ನಡೆದಿದೆ.

ಎಲ್ಲರೂ ಒಂದಾಗುತ್ತಾರೆ
ಯಡಿಯೂರಪ್ಪ ಬಳಿಕ ಬಿಎಸ್ ಆರ್ ಕಾಂಗ್ರೆಸ್ ನ ಶ್ರೀರಾಮುಲುಗೂ ಗಾಳ ಹಾಕಲು ಮುಂದಾಗಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಳ್ಳಾರಿಗೆ ತೆರಳಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮನೆಯಲ್ಲಿ ಚರ್ಚೆ ನಡೆಸಿ ಬಂದಿದ್ದಾರೆ.
ರೆಡ್ಡಿ ಸಹೋದ ರರನ್ನು ಸಂಪುಟದಿಂದ ಕೈಬಿಟ್ಟಿದ್ದರೆ ಪಕ್ಷ ಅಂದೇ ಒಡೆಯುತ್ತಿತ್ತು. ಅದಕ್ಕಾಗಿ ನಾನು ಸುಮ್ಮನಾದೆ ಎಂಬ ಯಡಿಯೂರಪ್ಪ ಅವರ ಲೇಟೆಸ್ಟ್ ಹೇಳಿಕೆ ಗಮನಿಸಿದರೆ, ಈಶ್ವರಪ್ಪ ಇರಲಿ, ಅನಂತಕುಮಾರ್ ಜತೆ ಸಖ್ಯಕ್ಕೂ ಯಡಿಯೂರಪ್ಪ ರೆಡಿ ಎನ್ನುವಂತಿದೆ.
ಪಕ್ಷದಲ್ಲಿನ ಆಂತರಿಕ ಗೊಂದಲಗಳೇ ನನ್ನನ್ನು ಬಲಿಪಶು ಮಾಡಿತು. ನನ್ನ ಮೇಲಿರುವ ಆರೋಪಗಳ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಎಲ್ಲಾ ಆರೋಪಗಳಿಂದ ಮುಕ್ತಿ ಪಡೆದು ಕ್ಲೀನ್‌ಚಿಟ್ ದೊರೆಯುವ ನಂಬಿಕೆ ನನಗಿದೆ ಎಂದಿದ್ದಾರೆ.












Click it and Unblock the Notifications