Krishna G Rao : 'ಕೆಜಿಎಫ್' ತಾತಾ ಕೃಷ್ಣ. ಜಿ ರಾವ್ (80) ನಿಧನ
ಬೆಂಗಳೂರು, ಡಿ.07: 'ಕೆಜಿಎಫ್' ಹಾಗೂ 'ಕೆಜಿಎಫ್ 2' ಸಿನಿಮಾಗಳಲ್ಲಿ ನಟಿಸಿರುವ ಕೆಜಿಎಫ್ ತಾತ ಎಂದೇ ಫೇಮಸ್ ಆಗಿದ್ದ ಹಿರಿಯ ನಟ ಕೃಷ್ಣ ಜಿ ರಾವ್ ಬುಧವಾರ ನಿಧನ ಹೊಂದಿದ್ದಾರೆ. ಅವರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕುಟುಂಬ ಸದಸ್ಯರು ಅವರನ್ನು ಬೆಂಗಳೂರಿನ ಸೀತಾ ಸರ್ಕಲ್ ಬಳಿಯ ವಿನಾಯಕ ಆಸ್ಪತ್ರೆಗೆ ದಾಖಲಿಸಿದ್ದರು. ಶ್ವಾಸಕೋಶದ ಸೋಂಕು ಉಂಟಾಗಿದ್ದರಿಂದ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಕೃಷ್ಣಾ ಜಿ ರಾವ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.
ಕಳೆದೊಂದು ವಾರದಿಂದಲೂ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ (ಡಿಸೆಂಬರ್ 07) ಕೃಷ್ಣ ಜಿ ರಾವ್ ಕೊನೆಯುಸಿರೆಳೆದಿದ್ದಾರೆ.

ಹಿರಿಯ ನಟ ಬಹಳ ಕಾಲದಿಂದಲೂ ಚಿತ್ರರಂಗದಲ್ಲಿದ್ದು, ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಅವರಿಗೆ ಹೆಸರು ತಂದುಕೊಟ್ಟದ್ದು, ಪ್ರಶಾಂತ್ ನೀಲ್ ನಿರ್ದೇಶನದ, ನಟ ಯಶ್ ನಟನೆಯ ಕೆಜಿಎಫ್ ಭಾಗ 1 ಮತ್ತು ಕೆಜಿಎಫ್ ಭಾಗ 2 ಚಿತ್ರಗಳು.
ಈ ಚಿತ್ರಗಳಿಂದ ಅವರು ಕೆಜಿಎಫ್ ತಾತ ಎಂದು ಖ್ಯಾತಿ ಪಡೆದುಕೊಂಡರು. ಅವರ ಡೈಲಾಗ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಬಳಿಕ ಅವರಿಗೆ ಹಲವು ಚಿತ್ರಗಳಲ್ಲಿ ಅವಕಾಶ ದೊರೆತಿತ್ತು. ನ್ಯಾನೋ ನಾರಾಯಣಪ್ಪ ಎಂಬ ಹಾಸ್ಯ ಚಿತ್ರದಲ್ಲಿ ಕೃಷ್ಣ ಜಿ ರಾವ್ ಪ್ರಮುಖ ಪಾತ್ರವಾಗಿ ಬಣ್ಣ ಹಚ್ಚಿದ್ದರು. ಆದರೆ ಈ ಚಿತ್ರ ಬಿಡುಗಡೆಗೂ ಮುನ್ನವೆ ಅವರು ಕೊನೆಯುಸಿರೆಳೆದಿದ್ದಾರೆ.
ಸಿನಿಮಾ ಡೈಲಾಗ್‌ಗಳ ವೈರಲ್ ವಿಡಿಯೋಗಳಿಂದ ಕೆಜಿಎಫ್ ತಾತಾ ಎಂದು ಜನರ ಮನಸ್ಸಿನಲ್ಲಿ ನೆಲೆಯಾಗಿದ್ದ ಕೃಷ್ಣ ಜಿ ರಾವ್ ನಿಧನಕ್ಕೆ ಸಿನಿ ಪ್ರೇಮಿಗಳು, ಚಿತ್ರರಂಗ ಸಂತಾಪ ಸೂಚಿಸಿದೆ.












Click it and Unblock the Notifications