New Highway: ಕರ್ನಾಟಕದ ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆ ಕಾಮಗಾರಿ, ಅಪ್ಡೇಟ್ಸ್
ನವದೆಹಲಿ, ಆಗಸ್ಟ್ 06: ಕರ್ನಾಟಕ ರಾಜ್ಯದಲ್ಲಿ ಅನೇಕ ಸಾರಿಗೆ ಯೋಜನೆಗಳು ಜಾರಿಯಾಗುತ್ತಿವೆ. ಈ ಪೈಕಿ ರೈಲ್ವೆ, ಮೇಲ್ಸೇತುವೆ, ಟನಲ್ ರಸ್ತೆ, ಪ್ರಮುಖ ಮಾರ್ಗಗಳ ಹೆದ್ದಾರಿ ಯೋಜನೆಗಳು ಒಳಗೊಂಡಿವೆ. ಇದೀಗ ಉತ್ತರ ಕರ್ನಾಟಕದ ಗದಗ-ಬಂಕಾಪುರ ಹೆದ್ದಾರಿಗೆ ಅನುಮತಿ ಮನವಿ ಬೆನ್ನಲ್ಲೆ ಮತ್ತೊಂದು ಹೊಸ ಹೆದ್ದಾರಿ ಬಗ್ಗೆ ಮಹತ್ವದ ಮಾಹಿತಿ ಹೊರ ಬಿದ್ದಿದೆ.
ಹೌದು, ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಹಾಗೂ ಬಾಗಲಕೋಟೆ ಜಿಲ್ಲೆಯ ಇಳಕಲ್ (Karwar-Ilakal National Highway Project) ರಾಷ್ಟ್ರೀಯ ಹೆದ್ದಾರಿ ಶೀಘ್ರ ಕಾಮಗಾರಿ ಆರಂಭಿಸುವಂತೆ ಕರ್ನಾಟಕ ಮಾಜಿ ಮುಖ್ಯಮಂತ್ರಿ ಹಾಲಿ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದಾರೆ. ಈ ಮೂಲಕ ಬರೋಬ್ಬರಿ 318 ಕಿಲೋ ಮೀಟರ್ ದೂರದ ಹೆದ್ದಾರಿ ಯೋಜನೆ ಬಗ್ಗೆ ಅಪ್ಡೇಟ್ ನೀಡಿದ್ದಾರೆ.

ಇಂದು ಬುಧವಾರ ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಅವರು ಮಾತನಾಡಿದರು. ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಾರವಾರ-ಇಳಕಲ್ ರಾಷ್ಟ್ರೀಯ ಹೆದ್ದಾರಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಬೇಕು. ಶೀಘ್ರವೇ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರು ಮಾಡಬೇಕು. ಹೆದ್ದಾರಿ ಕಾಮಗಾರಿ ಪ್ರಾರಂಭಿಸುವಂತೆ ಅವರು ಕೋರಿದರು.
ಕಾರವಾರ, ಕೈಗಾ, ಮುಂಡಗೋಡ, ಸವಣೂರು, ಗದಗ, ಗಜೇಂದ್ರಗಡ ಮಾರ್ಗವಾಗಿ ಇಳಕಲ್ ತಲುಪುವ ಸುಮಾರು 318 ಕಿ.ಮೀ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ ತಾತ್ವಿಕ ಒಪ್ಪಿಗೆ ದೊರೆತಿದೆ. ಈ ಯೋಜನೆಯ ಡಿಪಿಆರ್ ಸಲ್ಲಿಕೆಯಾಗಿದೆ ಹಾಗೂ ಭೂ ಸ್ವಾಧೀನ ಪಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅವರು ವಿವರಿಸಿದರು.

ಈ ರಸ್ತೆಯು ಸದ್ಯದ ಸ್ಥಿತಿ ಹೇಗಿದೆ?
ಸದರಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಿರುವುದರಿಂದ ರಾಜ್ಯ ಸರ್ಕಾರದ ಸರಿಯಾದ ನಿರ್ವಹಣೆ ಇಲ್ಲದ ಕಾರಣ ವಾಹನ ಸಂಚರಿಸಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಇನ್ನೊಂದೆಡೆ ಯೋಜನೆಗೆ ಅಧಿಕೃತ ಅನುಮತಿ ನೀಡದೇ ಇರುವುದರಿಂದ ರಾಷ್ಟ್ರೀಯ ಹೆದ್ದಾರಿ ಪಾಧಿಕಾರದವರೂ ಯಾವುದೇ ಕೆಲಸ ಮಾಡುತ್ತಿಲ್ಲ. ಹೀಗಾಗಿ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ತಕ್ಷಣವೇ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿ ಕಾಮಗಾರಿ ಆರಂಭಿಸುವಂತೆ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಇನ್ನೂ ಈ ರಸ್ತೆಗೆ ಹೊಂದಿಕೊಂಡು ಸಂಚರಿಸಲು ಸಾಧ್ಯವಾಗದಿರುವಂತಹ ಇತರ ಸಿಆರ್‌ಎಫ್ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ತಮ್ಮ ಅನುಭವದ ಆಧಾರದಲ್ಲಿ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುಬೇಕೆಂದರು. ಮನವಿ ಆಲಿಸಿದ ನಿತಿನ್ ಗಡ್ಕರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಬೊಮ್ಮಾಯಿ ಅವರು ತಿಳಿಸಿದ್ದಾರೆ.












Click it and Unblock the Notifications