Student Election: 2026ರಲ್ಲೇ ವಿದ್ಯಾರ್ಥಿ ಚುನಾವಣೆ: ಸರ್ಕಾರದಿಂದ ಗ್ರೀನ್ ಸಿಗ್ನಲ್, ಆದ್ರೆ ಒಂದು ಟ್ವಿಸ್ಟ್
ಬೆಂಗಳೂರು: ಗುಂಪುಗಾರಿಕೆ, ಗಲಾಟೆಯಂಹ ಕಾರಣಗಳಿಗೆ ರಾಜ್ಯದಲ್ಲಿ ರದ್ದುಗೊಳಿಸಿದ್ದ ಕಾಲೇಜು, ವಿಶ್ವವಿದ್ಯಾಲಯ ವಿದ್ಯಾರ್ಥಿ ಚುನಾವಣೆಯನ್ನು ರಾಜ್ಯ ಸರ್ಕಾರ ಈ ಮೊದಲೇ ನಿರ್ಧರಿಸಿದಂತೆ 2026ರಲ್ಲೇ ನಡೆಸಲು ಬುಧವಾರ ಸಂಪುಟದಲ್ಲಿ ನಿರ್ಧರಿಸಲಾಗಿದೆ. ವಿದ್ಯಾರ್ಥಿ ಚುನಾವಣೆ ಹೇಗೆ ನಡೆಯಬೇಕು, ವಿದ್ಯಾರ್ಥಿ ಸಂಘದಲ್ಲಿ ಯಾರೆಲ್ಲ ಇರಬೇಕು, ಮಹಿಳೆಯರಿಗೆ ಯಾವೆಲ್ಲ ಸ್ಥಾನಗಳು ಇರಬೇಕು ಎಂಬುದರ ಕುರಿತು ಕಂದಾಯ ಸಚಿವರೂ ಆದ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ಮಹತ್ವದ ಮಾಹಿತಿ ನೀಡಿದ್ದಾರೆ.
ಸಚಿವ ಸಂಪುಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ನಾಯಕತ್ವ, ಹೊಣೆಗಾರಿಕೆ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ಬೆಳೆಸಲು ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಇದೇ ವರ್ಷವೇ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಅವಕಾಶ ನೀಡಿದೆ. ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದ್ದು, ಅಗತ್ಯ ಸೂಚನೆ ನೀಡಲಾಗಿದೆ ಎಂದಿದ್ದಾರೆ.

ವಿದ್ಯಾರ್ಥಿಗಳ ಚುನಾವಣೆ ಕಡ್ಡಾಯವೇ?
ಯಾವೊಂದು ಕಾಲೇಜು, ವಿಶ್ವವಿದ್ಯಾಲಯಗಳಿಗೆ ಈ ಚುನಾವಣೆ ಕಡ್ಡಾಯವಿಲ್ಲ ಅಂತಲೂ ಸರ್ಕಾರ ಟ್ವಿಸ್ಟ್ ನೀಡಿದೆ. ಆಯಾ ಕಾಲೇಜು, ವಿವಿಗಳ ವಿದ್ಯಾರ್ಥಿಗಳಿಗೆ ಚುನಾವಣೆ ಬೇಕು ಎಂದರೆ ಮಾತ್ರವೇ ಚುನಾವಣೆಗೆ ಹೋಗಬಹುದು. ಚುನಾವಣೆ ಬೇಡವೇ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಆಯಾ ವಿದ್ಯಾರ್ಥಿಗಳಿಗೆ ಬಿಡಲಾಗಿದೆ. ಒಂದು ವೇಳೆ ಚುನಾವಣೆಗೆ ವಿವಿ, ಕಾಲೇಜು ಹೋದರೆ ಅದರಲ್ಲಿ ಇತರ ಯಾವ ಸಂಘಟನೆಗಳು, ರಾಜಕೀಯ ಪಕ್ಷಗಳು/ಸದಸ್ಯರಿಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.
ವಿದ್ಯಾರ್ಥಿಗಳ ಸಂಘ ರಚನೆ ಹೇಗಿರಲಿದೆ?
ಇನ್ನೂ ವಿದ್ಯಾರ್ಥಿ ಸಂಘಗಳ ಚುನಾವಣೆಯಲ್ಲಿ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿಗಳಲ್ಲಿ ಪುರುಷ ವಿದ್ಯಾರ್ಥಿಗಳೇ ಇರಲಿದ್ದಾರೆ. ಉಳಿದಂತೆ ವಿವಿಧ ಪದಾಧಿಕಾರಿ ಸ್ಥಾನಗಳಿಗೆ ಮಹಿಳಾ ಮೀಸಲು ನೀಡಲು ಸೂಚಿಸಲಾಗಿದೆ. ಒಂದು ಕಾಲೇಜಿನಲ್ಲೂ ವಿದ್ಯಾರ್ಥಿ ಸಂಘಕ್ಕೆ ಒಬ್ಬ ಅಧ್ಯಕ್ಷ, ಎರಡು ಉಪಾಧ್ಯಕ್ಷ ಸ್ಥಾನ ಇರಬೇಕಿದ್ದು, ಅದರಲ್ಲಿ ಒಂದು ಮಹಿಳೆ ಉಪಾಧ್ಯಕ್ಷ ಸ್ಥಾನ ಮೀಸಲಿಡಬೇಕು. ಒಬ್ಬರು ಪ್ರಧಾನ ಕಾರ್ಯದರ್ಶಿ, ಎರಡು ಜಂಟಿ ಪ್ರಧಾನ ಕಾರ್ಯದರ್ಶಿ (ಒಂದು ಮಹಿಳಾ ಮೀಸಲು) ಹಾಗೂ ಆರು ಜನ ಕಾರ್ಯಾಕಾರಿ ಸಮಿತಿ ಸದಸ್ಯ ಅದರಲ್ಲಿ 2 ಸ್ಥಾನದಲ್ಲಿ ಮಹಿಳೆಯರು ಇರುವಂತೆ ಈ ಎಲ್ಲ ಸ್ಥಾನಗಳಿಗೆ ನಡೆಸಲು ಸಂಪುಟದಲ್ಲಿ ನಿರ್ಧರಿಸಲಾಗಿದೆ ಎಂದು ಅವರು ವಿವರಿಸಿದರು.
ರಾಜ್ಯ ಸರ್ಕಾರ ವಿದ್ಯಾರ್ಥಿ ಚುನಾವಣೆಯನ್ನು ಕಡ್ಡಾಯಗೊಳಿಸಿಲ್ಲ. ಕಾಲೇಜು, ವಿವಿ ವಿದ್ಯಾರ್ಥಿಗಳು ತಮಗೆ ಚುನಾವಣೆ ಬೇಡ ಎಂದು ನಿರ್ಭೀತಿಯಿಂದ ಹೇಳಬಹುದು, ನಿರ್ಧರಿಸುವ ಅಧಿಕಾರ ಅವರಿಗೆ ನೀಡಲಾಗಿದೆ. ಈ ಕುರಿತು ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರ ಸಚಿವ ಸಂಪುಟ ಉಪ ಸಮಿತಿ ಎಲ್ಲ ಭಾಗೀದಾರರ ಸಲಹೆ, ಅಭಿಪ್ರಾಯ ಪಡೆದು ವಿದ್ಯಾರ್ಥಿ ಚುನಾವಣೆ ಕುರಿತು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಯಿತು.
ಅದರ ಆಧಾರದ ಮೇಲೆ ಸಂಪುಟವು ಇದೆ ವರ್ಷದಿಂದಲೇ ವಿದ್ಯಾರ್ಥಿ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಈ ಮೊದಲೇ ಬಜೆಟ್ ಘೋಷಣೆ ಮಾಡಲಾಗಿತ್ತು. ಅದರಂತೆ ಇದೀಗ ಸಂಪುಟದಲ್ಲಿ ಎಲ್ಲ ಕಾಲೇಜು, ವಿವಿಗಳಲ್ಲಿ ಚುನಾವಣೆಗೆ ನಿರ್ಧರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಭಾರತ್ ಜೋಡೋ ಸಂಘಕ್ಕೆ ಮಾಸಾಂತ್ಯಕ್ಕೆ ಚಾಲನೆ
ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷೆಯ 'ಭಾರತ್ ಜೋಡೋ ಯುವ ಸಂಘ' ಸ್ಥಾಪಿಸಲು ನಿರ್ಧರಿಸಲಾಗಿದೆ. ರಾಜ್ಯಾದ್ಯಂತ ಪ್ರತಿ ಪಂಚಾಯತ್ ಹಾಗೂ ವಾರ್ಡ್ ಮಟ್ಟದಲ್ಲಿ ತಲಾ ಒಂದೊಂದು ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪನೆಗೆ ನಿರ್ಧರಿಸಿ ಚಾಲನೆ ನೀಡಲಾಗಿತ್ತು. ಆದರೆ ತಾಂತ್ರಿಕ ಲೋಪಗಳಿಂದಾಗಿ ಅದು ನಿಂತುಹೋಗಿತ್ತು. ಅಲ್ಲಿಯವರೆಗೆ 7 ಲಕ್ಷಕ್ಕೂ ಹೆಚ್ಚು ಸಂಘಗಳ ನೋಂದಣಿ ಆಗಿವೆ.
ಇದೀಗ ಮತ್ತೆ ಸದಸ್ಯತ್ವ ನೋಂದಣಿಗೆ ಮತ್ತೆ ಚಾಲನೆ ನೀಡಲಾಗಿದೆ. ಎಲ್ಲ ಜಿಲ್ಲಾಧಿಕಾರಿಗಳಿಂದ ಸದಸ್ಯತ್ವ ನೋಂದಣಿ ಅರ್ಜಿಗಳು ಅಪ್ ಲೋಡ್ ಆದ ಬಳಿಕ ಈ ತಿಂಗಳ ಅಂತ್ಯಕ್ಕೆ ಯೋಜನೆಗೆ ಚಾಲನೆ ನೀಡಲಿದ್ದೇವೆ ಎಂದು ಡಿಸಿಎಂ ಪರಮೇಶ್ವರ್ ಹೇಳಿದರು.


Click it and Unblock the Notifications
