ಗಡುವು, ನಿಮ್ಮ ಅಂಗಡಿಗೆ ಕನ್ನಡ ಬೋರ್ಡ್ ಹಾಕಿಲ್ವಾ? ಬೇಗ ಹಾಕಿಬಿಡಿ.. ಇಲ್ಲಂದ್ರೆ ತುಂಬಾ ಸಮಸ್ಯೆ
ಬೆಂಗಳೂರು ಫೆಬ್ರವರಿ 29: ಬೆಂಗಳೂರಿನ ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ ಅನುಷ್ಠಾನಕ್ಕೆ ಮಾರ್ಚ್ 5ರವರೆಗೆ ಕರ್ನಾಟಕ ರಕ್ಷಣಾ ವೇದಿಕೆ ಬಿಬಿಎಂಪಿಗೆ ಗಡುವು ನೀಡಿದ್ದು, ಆ ನಂತರವೂ ಕನ್ನಡ ನಾಮ ಫಲಕ ಅಳವಡಿಕೆ ಮಾಡದ ವಾಣಿಜ್ಯ ಮಳಿಗೆಗಳ ಪಟ್ಟಿ ಸಿದ್ಧಪಡಿಸಿ ಬಿಬಿಎಂಪಿಗೆ ಸಲ್ಲಿಸುವುದಕ್ಕೆ ನಿರ್ಧರಿಸಿದೆ.
ಬೆಂಗಳೂರಿನಲ್ಲಿ ಬುಧವಾರ ಕರವೇ ಅಧ್ಯಕ್ಷ ಟಿ.ಎ ನಾರಾಯಣಗೌಡ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಈ ವೇಳೆ ಮಾತನಾಡಿದ ನಾರಾಯಣಗೌಡ, ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಅಳವಡಿಕೆ ಹೋರಾಟದಿಂದ ಇದೀಗ ನಾಮಫಲಕ ಅಳವಡಿಕೆ ಆರಂಭಗೊಂಡಿದೆ. ರಾಜ್ಯ ಸರ್ಕಾರ ಸಹ ಸುಗ್ರೀವಾಜ್ಞೆ ಹೊರಡಿಸಿ ನಾಮ ಫಲಕದಲ್ಲಿ ಕಡ್ಡಾಯವಾಗಿ ಶೇ.60ರಷ್ಟು ಕನ್ನಡ ಭಾಷೆ ಬಳಕೆಗೆ ಆದೇಶಿಸಿದೆ ಎಂದರು.

ನಗರದಲ್ಲಿ 55 ಸಾವಿರಕ್ಕೂ ಅಧಿಕ ಮಳಿಗೆ ಮಾಲೀಕರಿಗೆ ಬಿಬಿಎಂಪಿಯಿಂದ ನೋಟಿಸ್ ನೀಡಲಾಗಿದೆ. ಈ ಪೈಕಿ ಸುಮಾರು 40 ಸಾವಿರಕ್ಕೂ ಅಧಿಕ ಮಳಿಗೆಗಳಲ್ಲಿ ಈಗಾಗಲೇ ಕನ್ನಡ ನಾಮಫಲಕ ಅಳವಡಿಕೆ ಮಾಡಿಕೊಂಡಿರುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತರು ಮಾಹಿತಿ ನೀಡಿದ್ದಾರೆ.
ಮಾರ್ಚ್ 1 ರಿಂದ ಕನ್ನಡ ನಾಮ ಫಲಕ ಅಳವಡಿಕೆ ಮಾಡಿಕೊಳ್ಳದ ವ್ಯಾಪಾರಿಗಳ ಉದ್ದಿಮೆ ಪರವಾನಗಿ ರದ್ದು ಪಡಿಸಿ, ಸೀಜ್ ಮಾಡುವುದಾಗಿ ತಿಳಿಸಿದ್ದಾರೆ. ಹಾಗಾಗಿ ಬಿಬಿಎಂಪಿಗೆ ಕನ್ನಡ ನಾಮ ಫಲಕ ಅನುಷ್ಠಾನಕ್ಕೆ ಮಾರ್ಚ್ 5ರವರೆಗೆ ಗಡುವು ನೀಡಲಾಗಿದೆ ಎಂದು ತಿಳಿಸಿದರು.
ವಾರ್ಡ್ ವಾರು ಪಟ್ಟಿ:
ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕರಿಗಳು ಮಾರ್ಚ್ ಆರರಿಂದ ವಾರ್ಡ್ ವಾರು ಸಮೀಕ್ಷೆ ನಡೆಸಿ ಕನ್ನಡ ನಾಮ ಫಲಕ ಅಳವಡಿಕೆ ಮಾಡಿಕೊಳ್ಳದ ಅಂಗಡಿ ಹೆಸರು ಮತ್ತು ವಿಳಾಸವನ್ನು ಪಟ್ಟಿ ಮಾಡಬೇಕು. ಈ ಪಟ್ಟಿಯನ್ನು ಬಿಬಿಎಂಪಿ ಅಧಿಕಾರಿಗಳಿಗೆ ನೀಡಿ ಕನ್ನಡ ನಾಮ ಫಲಕ ಅಳವಡಿಕೆಗೆ ಆಗ್ರಹಿಸುವ ಕೆಲಸ ಮಾಡೋಣ ಎಂದು ನಾರಾಯಣಗೌಡ ತಿಳಿಸಿದರು.
ಕಾರ್ಯಕರ್ತರಿಂದ ತೆರವು ಬೇಡ
ಸರ್ಕಾರ ಕಾನೂನು ರಚಿಸಿದೆ. ಹಾಗಾಗಿ, ವೇದಿಕೆಯ ಕಾರ್ಯಕರ್ತರು ಅನ್ಯ ಭಾಷೆಯ ನಾಮ ಫಲಕ ಕಂಡು ಬಂದರೆ ತೆರವು ಮಾಡುವುದು ಬೇಡ. ಅಧಿಕಾರಿಗಳ ಮೂಲಕ ತೆರವುಗೊಳಿಸುವ ಕೆಲಸ ಮಾಡೋಣ ಎಂದು ನಾರಾಯಣ ಗೌಡ ಹೇಳಿದರು.
ತಾತ್ಕಾಲಿಕ ಕ್ರಮ
ಕನ್ನಡ ಭಾಷೆಯ ನಾಮ ಫಲಕ ಅಳವಡಿಕೆ ನೀಡಲಾಗಿದ್ದ ಗಡುವು ಫೆಬ್ರವರಿ 28ಕ್ಕೆ ಮುಕ್ತಾಯಗೊಂಡಿರುವುದರಿಂದ ನಗರದ ವಿವಿಧ ಅಂಗಡಿ ಮಾಲೀಕರು ಅನ್ಯ ಭಾಷೆಯ ನಾಮ ಫಲಕಗಳಿಗೆ ಬಟ್ಟೆ ಸೇರಿದಂತೆ ಮೊದಲಾದವುಗಳಿಂದ ಮುಚ್ಚುವ ಕೆಲಸ ಮಾಡಿದ್ದಾರೆ. ಇನ್ನು ಕೆಲವು ಕಡೆ ಕನ್ನಡ ಬಾಎ ಬಳಸಿದ ಬಟ್ಟೆ ಬ್ಯಾನರ್‌ಗಳನ್ನು ಅನ್ಯ ಭಾಷೆಯ ಶಾಶ್ವತ ನಾಮ ಫಲಕದ ಮೇಲೆ ಅಳವಡಿಕೆ ಮಾಡಿರುವುದು ಕಂಡು ಬಂದಿದೆ. ನಾಮ ಫಲಕ ಅಳವಡಿಕೆ ಅಭಿಯಾನ ಕಾವು ಕಡಿಮೆಯಾದ ಬಳಿಕ ತಮ್ಮ ಹಳೆ ಚಾಳಿ ಮುಂದುವರೆಸುವ ತಂತ್ರ ಮಾಡಲಾಗಿದೆ.












Click it and Unblock the Notifications