Karnataka Rain: ರಾಜ್ಯದ ಎಲ್ಲ ಜಿಲ್ಲೆಗಳಿಗೆ ಏಪ್ರಿಲ್ 21ರಿಂದ 3 ದಿನ ವ್ಯಾಪಕ ಮಳೆ: ಐಎಂಡಿ ವರದಿ
ಬೆಂಗಳೂರು, ಏಪ್ರಿಲ್ 18: ಕರ್ನಾಟಕ ರಾಜ್ಯಾದ್ಯಂತ ಮಳೆ ಕಡಿಮೆಯಾಗಿ ಬಿಸಿಲಿನ ಹವೆಯ ವಾತಾವರಣ ಮುಂದುವರಿದಿದೆ. ಇದಕ್ಕೆ ಬ್ರೇಕ್ ಬೀಳಲಿದ್ದು, ಮಳೆರಾಯ ಮತ್ತೆ ಧರೆಗೆ ತಂಪೆರೆಯಲು ಸಜ್ಜಾಗಿದ್ದಾರೆ. ಇದೇ ಏಪ್ರಿಲ್ 21ರಿಂದ 03 ದಿನಗಳ ಕಾಲ ಜೋರು ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ಮೂರು ಭಾಗಗಳ ಪೈಕಿ ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಗುಡುಗು ಮಿಂಚು ಸಹಿತ ವ್ಯಾಪಕವಾಗಿ ಮಳೆ ಬೀಳುವ ನಿರೀಕ್ಷೆ ಇದೆ. ಮಲೆನಾಡಿನ ಜಿಲ್ಲೆಗಳನ್ನು ಒಳಗೊಂಡಿರುವ ಈ ಭಾಗದ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಆಲಿಕಲ್ಲು ಮಳೆ ಬೀಳಬಹುದು ಎಂದು ಅಂದಾಜಿಸಲಾಗಿದೆ.

ಎರಡು ದಿನದ ಹಿಂದಷ್ಟೇ ಸಮುದ್ರ ಮಟ್ಟದಲ್ಲಿ ಗಾಳಿಯಲ್ಲಿ ಹಠಾತ್ ಬದಲಾವಣೆ ಆಗಿತ್ತು. ಹೀಗಾಗಿ ಛತ್ತೀಸ್‌ಗಢ ಭಾಗದಲ್ಲಿ ಸಮುದ್ರದ ಮೇಲ್ಮೈನಲ್ಲಿ ಸೃಷ್ಟಿಯಾಗಿದ್ದ ಸುಳಿಗಾಳಿ (ಸ್ಟ್ರಫ್) ಕೇರಳ ಮಾರ್ಗವಾಗಿ, ಝಾರ್ಖಂಡ್ ಓರಿಸ್ಸಾ, ಮೂಲಕ ತಮಿಳುನಾಡು ಕರಾವಳಿ ಮೂಲಕ ಹಾದು ಹೋಗಿತ್ತು.
ಇದಾದ ಬಳಿಕ ಉಂಟಾದ ಹವಾಮಾನದಲ್ಲಿ ಬದಲಾವಣೆಗಳಿಂದಾಗಿ ಇದೀಗ ಮತ್ತೆ ಏಪ್ರಿಲ್ 21ರಿಂದ 23ರವರೆಗೆ ಕರ್ನಾಟಕಕ್ಕೆ ವರುಣಾಘಾತ ಎದುರಾಗುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿಗೆ ಧಾರಾಕಾರ ಮಳೆ
ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತಮಕೂರು, ಚಿತ್ರದುರ್ಗ, ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಮಡಿಕೇರಿ, ಶಿವಮೊಗ್ಗ ಜಿಲ್ಲೆಗಳ ಹಲವೆಡೆ ವ್ಯಾಪಕ ಮಳೆ ಆಗಲಿದೆ. ಆರಂಭಿಕ ಮೊದಲ ದಿನ (ಏ.21) ಅಷ್ಟಾಗಿ ಮಳೆ ಬಾರದಿರಬಹುದು. ಆದರೆ ನಂತರದ ಎರಡು ದಿನಗಳು ಈ ಜಿಲ್ಲೆಗಳ ಎಲ್ಲ ಪ್ರದೇಶಗಳು ಗುಡುಗು ಮಿಂಚು ಸಹಿತ ಮಳೆ ಕಾಣಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದೇ ಅವಧಿಯಲ್ಲಿ ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಹಲವೆಡೆ ಹಗುರದಿಂದ ಸಾಧಾರಣ ಮಳೆ ಬೀಳಬಹುದು. ಇನ್ನೂ ಹೆಚ್ಚು ಒಣ ಹವೇ ಎದುರಿಸುತ್ತಿರುವ ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಗಳ ಕೆಲವು ಕಡೆಗಳಲ್ಲಿ ಸಾಧಾರಣ ಮಳೆ ಆಗಲಿದೆ.
ರಾಜ್ಯದ ತಾಪಮಾನ ದಾಖಲಾತಿ ವಿವರ
ಏಪ್ರಿಲ್ 21ರವರೆಗೆ ರಾಜ್ಯದ ಬಹುತೇಕ ಕಡೆಗಳಲ್ಲಿ ಒಣಹವೆ ವಾತಾವರಣ, ಅಧಿಕ ಬಿಸಿಲಿನ ಅಲೆ ಮುಂದುವರಿಯಲಿದೆ. ಈ ವೇಳೆ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆ ತುಂತುರು ಮಳೆ ಬರಬಹುದು ಎಂದು ಇಲಾಖೆಯ ಮಂಗಳವಾರದ ವರದಿ ಮಾಹಿತಿ ನೀಡಿದೆ.
ಮಂಗಳವಾರ ಬೆಳಗ್ಗೆ 8 ಗಂಟೆಗೂ ಮುನ್ನ ಅಂದರೆ ಕಳೆದ 24 ಗಂಟೆಯಲ್ಲಿ ಉತ್ತರ ಒಳನಾಡಿನ ಕೆಲವು ಕಡೆ ತುಂತುರು ಮಳೆ ದಾಖಲಾಗಿದೆ. ಬಿಟ್ಟರೆ ಬೇರೆಲ್ಲೂ ಮಳೆ ಬಿದ್ದಿಲ್ಲ. ಮಂಗಳವಾರ ರಾಜ್ಯ ಗರಿಷ್ಠ ತಾಪಮಾನ ಕಲಬುರಗಿ ಮತ್ತು ರಾಯಚೂರಿನಲ್ಲಿ 41 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ವಿಜಯಪುರ ಮತ್ತು ಬಳ್ಳಾರಿಯಲ್ಲಿ 40 ಡಿಗ್ರಿ ಸೆಲ್ಸಿಯಸ್, ಉಳಿದಂತೆ ಬೀದರ್, ಚಿತ್ರದುರ್ಗ, ಧಾರವಾಡ, ಗದಗ, ಹಂಪಿ, ಬೆಳಗಾವಿಯಲ್ಲಿ ಅತ್ಯಧಿಕ ಉಷ್ಣಾಂಶ ಕಂಡು ಬಂದಿದೆ.
ಬೆಂಗಳೂರಿನ ಮಳೆ ಮಾಹಿತಿ
ಸಿಲಿಕಾನ್ ಸಿಟಿ ಬೆಂಗಳೂರಿಗೆ ಏಪ್ರಿಲ್ 21ರ ನಂತರ ಮಳೆರಾಯ ತಂಪೆರೆಯಲಿದ್ದಾನೆ. ಎರಡು ದಿನ ನಗರಕ್ಕೆ ಮಳೆ ಮುನ್ಸೂಚನೆ ಇದೆ. ಅಲ್ಲಿಯವರೆಗೆ ಬಿಸಿಲು ಸಹಿತ ಆಗಾಗ ಸಂಜೆ ಹೊತ್ತಿಗೆ ತಂಪು ಗಾಳಿ, ಮೋಡ ಕವಿದ ವಾತಾವರಣ ಕಂಡು ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ವೇಳೆ ಗರಿಷ್ಠ ತಾಪಮಾನ 34ಡಿಸೆ, ಕನಿಷ್ಠ 22 ಡಿ.ಸೆ. ಕಂಡು ಬರಲಿದೆ.












Click it and Unblock the Notifications