Corona: ಹೊಸ ವರ್ಷಾಚರಣೆ ಬ್ರೇಕ್ ಹಾಕುತ್ತಾ ಕೊರೊನಾ..? ಕರ್ನಾಟಕದಲ್ಲಿ ಕೊರೊನಾ ಕಟ್ಟೆಚ್ಚರ
ಬೆಂಗಳೂರು, ಡಿಸೆಂಬರ್ 18: ಕಳೆದ ಎರಡು ವರ್ಷಗಳಿಂದ ಕೊರೊನಾ ಪರಿಸ್ಥಿತಿಯಿಂದ ಹೊರಬಂದಿರುವ ಜನರಿಗೆ ಮತ್ತೆ ಕೋವಿಡ್ 19 ಆತಂಕ ಎದುರಾಗಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಸಂಪೂರ್ಣ ಕಡಿಮೆಯಾಗಿ ಜನ ಕೊರೊನಾ ಸಾಂಕ್ರಾಮಿಕ ರೋಗವನ್ನು ಮರೆತ್ತಿದ್ದರು. ಆದರೆ ಇದೀಗ ಹೊಸ ವರ್ಷದ ಆಚರಣೆ ಹೊಸ್ತಿಲಲ್ಲೇ ಕೋವಿಡ್ ಆತಂಕ ಹೆಚ್ಚಾಗಿದೆ.
ಕರ್ನಾಟಕದ ನೆರೆಯ ರಾಜ್ಯ ಕೇರಳದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿದ್ದು ರಾಜ್ಯದ ಗಡಿಭಾಗದಲ್ಲೂ ಆತಂಕ ಹೆಚ್ಚಾಗಿದೆ. ಕೇರಳದಲ್ಲಿ ಕಳೆದ ನವೆಂಬರ್ ಇಡೀ ತಿಂಗಳಲ್ಲಿ ಒಟ್ಟು 479 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಓರ್ವ ಸೋಂಕಿತ ಮೃತಪಟ್ಟಿದ್ದಾರೆ. ಆದರೆ ಡಿಸೆಂಬರ್ ತಿಂಗಳ ಮೊದಲ ಎರಡು ವಾರಗಳಲ್ಲಿ ಬರೋಬ್ಬರಿ ಒಂದು ಸಾವಿರಕ್ಕೂ ಹೆಚ್ಚು ಕೊರೊನಾ ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.

ದೇಶದಲ್ಲಿನ ಶೇಕಡಾ 90ಕ್ಕಿಂತ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ಕೇರಳದಲ್ಲೇ ದಾಖಲಾಗಿದೆ. ಕೋವಿಡ್ 19 ವೈರಾಣುವಿನ ಹೊಸ ರೂಪಾಂತರಿ ಜೆಎನ್-1 (ಒಮಿಕ್ರಾನ್ ಉಪತಳಿ) ಕೇರಳದ ವೃದ್ಧೆಯೊಬ್ಬರಲ್ಲಿ ಪತ್ತೆಯಾಗಿದೆ ಈ ಹಿನ್ನೆಲೆಯಲ್ಲಿ ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಇನ್ನು ನೆರೆಯ ರಾಜ್ಯ ಕೇರಳದಲ್ಲಿ ಕೊರೊನಾ ಹೆಚ್ಚಾಗುತ್ತಿದ್ದಂತೆ ಕರ್ನಾಟಕದ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ. 'ಕೇರಳದಲ್ಲಿ ಹೆಚ್ಚಾಗುತ್ತಿರುವ ಕೋವಿಡ್ ಪ್ರಕರಣಗಳು ಈಗಾಗಲೇ ಆತಂಕಕ್ಕೆ ಕಾರಣವಾಗಿದ್ದು, ಈಗ ರಾಜ್ಯದಲ್ಲಿ ಮೃತಪಟ್ಟಿರುವ ವ್ಯಕ್ತಿಯಲ್ಲಿ ಕೋವಿಡ್ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ವಿಕಾಸಸೌಧದಲ್ಲಿ ಇಲಾಖೆ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಿಗೆ ಕೋವಿಡ್ ಹತ್ತಿಕ್ಕಲು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಇನ್ನು ಆಕ್ಸಿಜನ್, ಬೆಡ್, ಔಷಧಿ ಹಾಗೂ ರೋಗಿಗಳ ಮಾಹಿತಿ ಪಡೆಯುವಂತೆ ಸಂಬಂಧಿಸಿದ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸಂದೇಶ ರವಾನೆ ಮಾಡಲಾಗಿದೆ.

ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಜನರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಉಪಯೋಗಿಸುವ ಮೂಲ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಪಾಲಿಸಿ' ಎಂದು ಆರೋಗ್ಯ ಸಚಿವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಇನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಡಿಸೆಂಬರ್ 19 ಮಂಗಳವಾರ ರಾಜ್ಯ ಕೋವಿಡ್ ತಾಂತ್ರಿಕಾ ಸಲಹಾ ಸಮಿತಿಯ ಸಭೆ ಕರೆದಿದ್ದಾರೆ. ಸಲಹಾ ಸಮಿತಿ ಅಧ್ಯಕ್ಷ ಡಾ.ರವಿ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಹಾಗೂ ಹೊಸ ನಿಯಮಗಳ ಜಾರಿಯ ಬಗ್ಗೆ ನಿರ್ಧರಿಸುವ ಸಾಧ್ಯತೆ ಇದೆ. ಇನ್ನೇನು ಹೊಸ ವರ್ಷ ಆಚರಣೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಸ್ಥಳಗಳು ಸಿದ್ಧವಾಗುತ್ತಿದ್ದು, ಕೊರೊನಾದಿಂದ ಹೊಸ ವರ್ಷಾಚರಣೆಗೆ ಬ್ರೇಕ್ ಬೀಳುವ ಆತಂಕ ಎದುರಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆಗೆ ಹೊಸ ನಿಯಮಗಳನ್ನು ಜಾರಿ ಮಾಡಿದರೆ, ಇದು ಹೊಸ ವರ್ಷಾಚರಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.












Click it and Unblock the Notifications