ಪರಭಾಷಿಕರಿಗೆ ಇಂಗ್ಲೀಷ್‌ನಲ್ಲೇ ಕನ್ನಡ ಕಲಿಸೋ ಆಟೋ ಚಾಲಕ! ಶಹಬ್ಬಾಶ್ ಎಂದ ಸಚಿವ
ಬೆಂಗಳೂರಿನಲ್ಲಿರುವ ಪರಭಾಷಿಕರಿಗೆ ಕನ್ನಡ ಕಲಿಸಬೇಕು ಎನ್ನುವ ಸದುದ್ದೇಶದಿಂದ ಅಜ್ಜು ಸುಲ್ತಾನ್ ಎಂಬ ಆಟೋ ಚಾಲಕ ಕೈಇಟ್ಟಿರುವ ಹೊಸ ಪ್ರಯತ್ನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕನ್ನಡ ಬಾರದವರಿಗೆ ಸುಲಭವಾಗಿ ಭಾಷೆ ಕಲಿಸಬೇಕು ಎಂದು ಆಟೋದಲ್ಲಿ ಇವರು ಸಾಮಾನ್ಯವಾಗಿ ಮಾತನಾಡುವ ಕನ್ನಡದ ವಾಕ್ಯಗಳನ್ನು ಇಂಗ್ಲಿಷ್‌ನಲ್ಲಿ ಪ್ರಯಾಣಿಕರಿಗೆ ಅರ್ಥವಾಗುವ ಫಲಕ ಅಂಟಿಸಿ ಗಮನ ಸೆಳೆದಿದ್ದಾರೆ.
ಕನ್ನಡ ಗೊತ್ತಿಲ್ಲದ ಪ್ರಯಾಣಿಕರು ಆಟೋ ಹತ್ತಿದಾಗ ಭಾಷಾ ವಿಚಾರವಾಗಿ ಇತ್ತೀಚೆಗೆ ಹಲವು ಗಲಾಟೆಗಳು ವರದಿಯಾಗಿದ್ದವು. ಪ್ರಯಾಣಿಕರಿಗೆ ಕನ್ನಡದಲ್ಲಿ ಮಾತಾಡು ಎಂದು ಧಮ್ಕಿ ಹಾಕುವ ಬದಲಿಗೆ, ನೀವು ಕನ್ನಡವನ್ನು ಈ ರೀತಿ ಸುಲಭವಾಗಿ ಕಲಿಯಬಹುದು ಎಂದು ಮನದಟ್ಟು ಮಾಡಿಕೊಡಲು ಚಾಲಕ ಈ ಪ್ಲ್ಯಾನ್ ಮಾಡಿದ್ದಾರೆ.

ಆಟೋದಲ್ಲಿ ಇವರು ಅಳವಡಿಸಿರುವ ಕನ್ನಡ ಕಲಿಕೆಯ ಫಲಕವು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದಕ್ಕೆ ನೆಟ್ಟಿಗರಿಂದಲೂ ಪ್ರಶಂಸೆ ವ್ಯಕ್ತವಾಗಿದ್ದು, ಕನ್ನಡ ಕಲಿಸಲು ಇದಕ್ಕಿಂತ ಒಳ್ಳೆಯ ಉಪಾಯ ಇಲ್ಲ ಎಂದು ಸುಲ್ತಾನ್ ಅವರಿಗೆ ಸಲಾಂ ಹೊಡೆದಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಶ್ಲಾಘಿಸಿದ್ದಾರೆ. ಯಾವುದೇ ಭಾಷೆಯು ಕೇವಲ ಸಂವಹನಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಅಸ್ಮಿತೆ, ಬಾಂಧವ್ಯ, ಸಂಸ್ಕೃತಿ, ಪರಂಪರೆ, ವ್ಯಾಪಾರ ಎಲ್ಲದರಲ್ಲೂ ಭಾಷೆಯ ಪ್ರಭಾವ ಅತಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ.

ಭಾಷೆ ಬಾಂಧವ್ಯವನ್ನು ಬೆಸೆಯುವುದಕ್ಕಿರುವುದೇ ಹೊರತು ಸಂಘರ್ಷಕ್ಕಿರುವುದಲ್ಲ, ಕರ್ನಾಟಕದಲ್ಲಿ ಇತ್ತೀಚಿಗೆ ಭಾಷೆಯ ಕಾರಣಕ್ಕೆ ಆಟೋ ಚಾಲಕರೊಂದಿಗೆ ಪರಭಾಷಿಕರ ಸಂಘರ್ಷದ ಘಟನೆಗಳು ನಡೆದಿದ್ದವು. ಇದನ್ನು ಗಮನದಲ್ಲಿರಿಸಿಕೊಂಡು ಆಟೋ ಚಾಲಕರೊಬ್ಬರು ತಂತ್ರಜ್ಞಾನವನ್ನು ಬಳಸಿ ಕನ್ನಡ ಕಲಿಕೆಯನ್ನು ಹಾಗೂ ಭಾಷಾ ಸಾಮರಸ್ಯವನ್ನು ಉತ್ತೇಜಿಸಲು ಕೈಗೊಂಡಿರುವ ಪ್ರಯತ್ನವು ಅಭಿನಂದನಾರ್ಹ ಎಂದು ಪ್ರಿಯಾಂಕ್ ಹೇಳಿದ್ದಾರೆ.
ಪರಭಾಷಿಕರಿಗೆ ಕನ್ನಡ ಕಲಿಸುವ ಈ ಪ್ರಯತ್ನವು ಸಣ್ಣದಾಗಿ ಕಂಡರೂ ಇದರ ಪರಿಣಾಮ ಅಗಾಧವಾಗಿರುತ್ತದೆ.
ಕನ್ನಡದ ಸೇವೆ ಮಾಡುತ್ತಿರುವ ಆಟೋ ಕನ್ನಡಿಗನಿಗೆ ಅಭಿನಂದನೆಗಳು. ಬೆಂಗಳೂರು ಗ್ಲೋಬಲ್ ಸಿಟಿ ಎಂಬ ಹೆಸರು ಪಡೆದಿದ್ದರೂ ಸಹ ಇಲ್ಲಿ ನಮ್ಮ ಭಾಷೆಯನ್ನು ಉಳಿಸಿಕೊಳ್ಳುವ ಕರ್ತವ್ಯ ನಮ್ಮೆಲ್ಲರದ್ದಾಗಿದೆ ಎಂದು ಕರೆ ನೀಡಿದ್ದಾರೆ.
ದೀಕ್ಷೆಯ ತೊಡು ಇಂದೇ, ಕಂಕಣ ಕಟ್ಟಿಂದೇ! ಕನ್ನಡ ನಾಡೊಂದೇ..ಇನ್ನೆಂದೂ ತಾನೊಂದೆ..ಕನ್ನಡ ಜನರೆಲ್ಲರ ಮೇಲಾಣೆ..ಕನ್ನಡ ನಾಡೊಂದಾಗದೆ ಮಾಣೆ.. ತೊಡು ದೀಕ್ಷೆಯ! ಇಡು ರಕ್ಷೆಯ ಕಂಕಣ ಕಟ್ಟಿಂದೇ! ಎನ್ನುವ ಕುವೆಂಪುರವರ ಈ ಕವಿವಾಣಿಯ ಪ್ರೇರಣೆಯೊಂದಿಗೆ ಎಲ್ಲ ಕನ್ನಡಿಗರೂ ಈ ಕನ್ನಡದ ಕಾಯಕಕ್ಕೆ ಕೈಜೋಡಿಸಿದರೆ ಉತ್ತಮ ಫಲಿತಾಂಶವನ್ನು ಕಾಣುವುದು ನಿಶ್ಚಿತ ಎಂದು ಮನವಿ ಮಾಡಿದ್ದಾರೆ.
ಆಟೋ ಚಾಲಕ ಮಾಡಿದ್ದೇನು?: ಆಟೋ ಚಾಲಕ ಸುಲ್ತಾನ್ ಅವರು ಪ್ರಯಾಣಿಕರಿಗೆಂದೇ ಒಂದು ಕನ್ನಡ ಭಾಷಾ ಕಲಿಕೆಯ ಪೋಸ್ಟರ್ ರೆಡಿ ಮಾಡಿದ್ದಾರೆ. ಇದರಲ್ಲಿ ಒಬ್ಬ ಪ್ರಯಾಣಿಕರು ಆಟೋ ಪ್ರಯಾಣದ ವೇಳೆ ಏನೆಲ್ಲ ಮಾತನಾಡುತ್ತಾರೆ ಎಂಬುದನ್ನು ಪಟ್ಟಿ ಮಾಡಿ, ಅದನ್ನು ಅವರಿಗೆ ಅರ್ಥವಾಗುವಂತೆ ಕನ್ನಡದ ವಾಕ್ಯಗಳನ್ನು ಇಂಗ್ಲೀಷ್‌ನಲ್ಲೇ ಸುಲಭವಾಗಿ ಅರ್ಥವಾಗುವಂತೆ ಮುದ್ರಿಸಿದ್ದಾರೆ.
ಉದಾಹರಣೆಗೆ ಪ್ರಯಾಣಿಕರು ಆಟೋ ಹತ್ತುವಾಗ, ಚಾಲಕರನ್ನು ಮಾತನಾಡಿಸುವುದು, ಚಿಲ್ಲರೆ ಕೊಡುವುದು, ಹಣ ಪಾವತಿ, ಯಾವ ಸ್ಥಳ ತಲುಪಬೇಕು? ಎಂಬುದನ್ನು ಕನ್ನಡದಲ್ಲಿ ಹೇಗೆ ಕೇಳಬಹುದು ಎಂದು ಅದನ್ನು ಇಂಗ್ಲೀಷ್‌ಗೆ ಟೈಪಿಂಗ್ ಭಾಷೆಯಂತೆ ಸಿದ್ಧಪಡಿಸಿದ್ದಾರೆ.
ಕನ್ನಡದಲ್ಲಿ ಏನೆಲ್ಲ ಕಲೀಬಹುದು?: ನಮಸ್ಕಾರ ಸರ್, ನಾನು ಕನ್ನಡ ಕಲೀತಾ ಇದ್ದೀನಿ, ಸ್ವಲ್ಪ ಬೇಗ ಹೋಗಿ, ಸ್ವಲ್ಪ ನಿಧಾನವಾಗಿ ಹೋಗಿ, ಸ್ವಲ್ಪ ಮುಂದೆ ಹೋಗಿ ಬಲಕ್ಕೆ ತಗೊಳ್ಳಿ...ಇಲ್ಲೇ ನಿಲ್ಸಿ, ಎಷ್ಟು ಆಯ್ತು?, ಯುಪಿಐ ಇದ್ಯಾ ಇಲ್ಲಾ ಕ್ಯಾಶಾ? ನಿಮ್ ಹತ್ರ ನೂರು ರೂಪಾಯಿಗೆ ಚಿಲ್ಲರೆ ಇದ್ಯಾ? ಎಂಬುದನ್ನು ಇಂಗ್ಲೀಷ್‌ನಲ್ಲೇ ಟೈಪ್ ಮಾಡಿ, ಇಂಗ್ಲಿಷ್ ವಾಕ್ಯಗಳನ್ನು ಕನ್ನಡದಲ್ಲಿ ಉಚ್ಚರಿಸುವುದು ಹೇಗೆ? ಎನ್ನುವ ವಾಕ್ಯಗಳನ್ನು ಇಂಗ್ಲೀಷ್‌ನಲ್ಲೇ ಓದಿಕೊಂಡು ಪ್ರಯಾಣಿಕರು ಕನ್ನಡದಲ್ಲಿ ಮಾತನಾಡಬಹುದು.
ಆಟೋ ಚಾಲಕ ಸುಲ್ತಾನ್ ಅವರ ಕಾರ್ಯಕ್ಕೆ ವಿವಿಧ ಆಟೋ ಸಂಘಟನೆಗಳು ಕೂಡ ಸಾಥ್ ನೀಡಿವೆ. ಇದೇ ಪೋಸ್ಟರ್‌ಗಳನ್ನು ತಮ್ಮ ಆಟೋದಲ್ಲೂ ಅಳವಡಿಸಿಕೊಳ್ಳುತ್ತಿದ್ದಾರೆ. ಇನ್ನು ಮೊದಲ ಹಂತದಲ್ಲಿ ಕನಿಷ್ಠ 1000 ಆಟೋಗಳಲ್ಲಿ ಈ ಪೋಸ್ಟರ್ ಅಂಟಿಸಬೇಕು ಎಂದು ಸುಲ್ತಾನ್ ಗುರಿ ಇಟ್ಟುಕೊಂಡಿದ್ದಾರೆ.












Click it and Unblock the Notifications