'ವಾಸವಾಗಿರುವವನೇ ಮನೆಯ ಒಡೆಯ' ವಿಧೇಯಕ ಜಾರಿ
ಕಾಯ್ದೆ ಪ್ರಕಾರ, ಲಂಬಾಣಿ ತಾಂಡ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ನಾಯಕರ ಹಟ್ಟಿ, ಮಜಾರೆ ಗ್ರಾಮ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್ ಕಾಲೋನಿಗಳಂಥ ದಾಖಲಿಸಿಲ್ಲದ ಜನವಸತಿಗಳಲ್ಲಿ ವಾಸಿಸುತ್ತಿರುವ ವಾಸದ ಮನೆಗಳು ಸಕ್ರಮ.
ಬೆಂಗಳೂರು, ಮಾರ್ಚ್ 24 (ಕರ್ನಾಟಕ ವಾರ್ತೆ): ಕರ್ನಾಟಕ ಭೂ ಸುಧಾರಣೆಗಳ ಅಧಿನಿಯಮ 1961 ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವೆಂದು ಸದನದಲ್ಲಿ ವಿಧೇಯಕವನ್ನು ಮಂಡಿಸಲಾಯಿತು. ಸದನ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ ನಂತರ ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಅಧಿನಿಯಮ 2016 ವನ್ನು ಜಾರಿಗೆ ತರಲಾಯಿತು.
ಕಾಯ್ದೆ ಪ್ರಕಾರ, ಲಂಬಾಣಿ ತಾಂಡ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ನಾಯಕರ ಹಟ್ಟಿ, ಮಜಾರೆ ಗ್ರಾಮ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್ ಕಾಲೋನಿಗಳಂಥ ದಾಖಲಿಸಿಲ್ಲದ ಜನವಸತಿಗಳಲ್ಲಿ ವಾಸಿಸುತ್ತಿರುವ ವಾಸದ ಮನೆಗಳನ್ನು ಇರುವ ನಿವೇಶನದ ಸಹಿತವಾಗಿ ಎಲ್ಲಾ ಉಪಾಧಿಗಳಿಂದ ಮುಕ್ತವಾಗಿ ರಾಜ್ಯ ಸರ್ಕಾರದಲ್ಲಿ ಯಾವುದೇ ಅಡ್ಡಿಯಿಲ್ಲದೆ ನೋಂದಾವಣಿ ಮಾಡಿಸಿಕೊಳ್ಳತಕ್ಕದ್ದು ಎಂದು ತಿದ್ದುಪಡಿ ತರಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸ್ವಾತಂತ್ಯ್ರಾ ನಂತರ ಉಳುವವನೆ ಭೂಮಿಯ ಒಡೆಯ ಎಂಬ ಕಾನೂನು ಬಂದ ನಂತರ ಇವತ್ತು ನಮ್ಮ ಸರ್ಕಾರ ತಂದಿರುವ ಇದೊಂದು ಐತಿಹಾಸಿಕ ವಿಧೇಯಕ ಇದಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ನೀಡಿದ್ದ ಮಾತಿನಂತೆ ನಡೆದಿದೆ.

ದಾಖಲೆಗಳಿಲ್ಲದೆಯೂ ಯಾರು ವಾಸ ಮಾಡುತ್ತಿದ್ದಾರೋ ಆ ವಸತಿಗೆ ಅವರೇ ಒಡೆಯರಾಗುತ್ತಾರೆ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಈ ತಿದ್ದುಪಡಿಯನ್ನು ತರಲು ಶಾಸಕ ಶಿವಮೂರ್ತಿ ಮತ್ತಿತರರು ಒತ್ತಾಯ ಹಾಕುತ್ತಲೇ ಇದ್ದರು. ಆಗ ನಿವೃತ್ತ ವಿಶೇಷ ಜಿಲ್ಲಾಧಿಕಾರಿಗಳಾದ ನರಸಿಂಹಯ್ಯ ಅವರ ಅಧ್ಯಕ್ಷತೆಯಲ್ಲಿ ಕಾನೂನು ಇಲಾಖೆಯ ನಿವೃತ್ತ ಕಾರ್ಯದರ್ಶಿಗಳಾದ ಎಂ.ಆರ್ ಹೆಗ್ಗಡೆ, ನಿವೃತ್ತ ಕೆಎಎಸ್ ಜಂಟಿ ನಿರ್ದೇಶಕ ಅನಂತರಾಮಯ್ಯ, ಕಾನೂನು ಸಚಿವರನ್ನೊಳಗೊಂಡ ಸಮಿತಿ ರಚಿಸಿ ವರದಿ ಪಡೆದು, ಹೈಕೋರ್ಟ್ ಜಡ್ಜ್ ಜೊತೆ ಚರ್ಚಿಸಿ, ವಾಸಮಾಡುತ್ತಿರುವವರೇ ವಾರಸುದಾರರಾಗುತ್ತಾರೆ ಎಂಬ ಕಾಯ್ದೆ ತರಲಾಗಿದೆ.
ಇದೊಂದು ಅತ್ಯಂತ ಕ್ರಾಂತಿಕಾರಕ , ಪ್ರಗತಿದಾಯಕ ವಿಧೇಯಕವಾಗಿದ್ದು, ಸುವರ್ಣಾಕ್ಷರದಲ್ಲಿ ಬರೆದಿಡುವಂತಹದ್ದು. ಅಧ್ಯಕ್ಷರು ಇಂತಹಾ ಉತ್ತಮ ಬಿಲ್ ಪಾಸ್ ಮಾಡಲು ಅವಕಾಶಕೊಟ್ಟಿದ್ದಕ್ಕಾಗಿ ಹಾಗೂ ಸದನದಲ್ಲಿ ವಿರೋಧಪಕ್ಷದ ನಾಯಕರು, ಸದಸ್ಯರು, ಜೆಡಿಎಸ್ ನಾಯಕರುಗಳು ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಒಪ್ಪಿಗೆ ಕೊಟ್ಟಿದ್ದಾರೆ ಅದಕ್ಕಾಗಿ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದರು.

ಅಧ್ಯಕ್ಷರಾದ ಕೋಳಿವಾಡ ಅವರು ಮಾತನಾಡಿ, ವಿಧೇಯಕಕ್ಕೆ ಒಕ್ಕೊರಲಿನಿಂದ ಒಪ್ಪಿಗೆ ಕೊಟ್ಟ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು ಸೇರಿದಂತೆ ಎಲ್ಲಾ ಸದಸ್ಯರುಗಳಿಗೂ ನಾನು ವಂದಿಸುತ್ತೇನೆ ಎಂದರು.
ವಿರೋಧ ಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್ ಅವರು ಮಾತನಾಡಿ, ''ಈ ವಿದೇಯಕ ಅತ್ಯುತ್ತಮವಾಗಿದ್ದು, ಕೆಳವರ್ಗದ, ಸಮಾಜದಲ್ಲಿ ಗುರುತಿಸಿಕೊಂಡಿರದ ಅನೇಕ ತಂಡಗಳಿಗೆ ಇದರಿಂದ ಉಪಯೋಗವಾಗಿದೆ. ಅನೇಕ ವರ್ಷಗಳಿಂದ ನಾವು ಇದನ್ನು ತರಬೇಕೆಂದು ಬೆಂಬಲಿಸುತ್ತಲೇ ಬಂದಿದ್ದೆವು ಎಂದರು.

ಆನಂತರ ತಮ್ಮ ಮಾತುಗಳನ್ನು ಮುಂದುವರಿಸಿದ ಅವರು, ''ಇದರಲ್ಲಿ ಇನ್ನು ಏನಾದರೂ ಸಣ್ಣಪುಟ್ಟ ಕಾನೂನು ತೊಡಕುಗಳಿದ್ದಲ್ಲಿ ಸರಿಪಡಿಸಿ ತಕ್ಷಣದಿಂದ ಜಾರಿಯಾಗಲು ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ಆದೇಶ ನೀಡಬೇಕು. ಆ ಮೂಲಕ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ಅದರ ಫಲ ಸಿಗುವಂತಾಗಬೇಕು, ಇದನ್ನು ಎಲ್ಲರೂ ಪಕ್ಷಬೇದ ಮರೆತು ಜಾರಿಗೆ ತಂದಿದ್ದೇವೆ. ಇದೊಂದು ಉತ್ತಮ ಕೆಲಸ'' ಎಂದರು.

ಸಚಿವ ಕಾಗೋಡು ತಿಮ್ಮಪ್ಪ ಅವರು ಮಾತನಾಡಿ, ''ಉಳುವವನೆ ಭೂಮಿಯ ಒಡೆಯ ಎಂಬ ಕಾಯ್ದೆ ತರುವಾಗ ತಮ್ಮ ಹೋರಾಟದ ದಿನಗಳನ್ನು ನೆನೆಸಿಕೊಳ್ಳುತ್ತಾ, ಇವತ್ತು ಇದೊಂದು ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದೇವೆ. ಇಂತಹಾ ಸನ್ನಿವೇಶದಲ್ಲಿ ಇಲ್ಲಿ ನಾನಿರುವುದು ನಮ್ಮ ಪುಣ್ಯ, ಇದೊಂದು ಇತಿಹಾಸ ಸೃಷ್ಟಿಮಾಡುವ ಕೆಲಸ'' ಎಂದರು.
ಸಚಿವ ಆಂಜನೇಯ, ಸಚಿವ ಶಿವರಾಜ್ ತಂಗಡಗಿ ಮತ್ತಿತರ ಸಚಿವರು, ಶಾಸಕರು ಅನೇಕ ತಳ ವರ್ಗದ ವಸತಿ ಹೀನ ಜನಾಂಗಕ್ಕೆ ಕಂದಾಯ ಗ್ರಾಮ, ಗ್ರಾಮ ಮಾನ್ಯತೆಯನ್ನು ಸರ್ಕಾರ ಕಲ್ಪಿಸಿಕೊಟ್ಟಿದೆ. ಧ್ವನಿ ಇಲ್ಲದವರಿಗೆ ಧ್ವನಿ ನೀಡಿದೆ. ಇದು ಯುಗಾದಿಯ ಹೊಸವರ್ಷಕ್ಕೆ ಸರ್ಕಾರ ಕೊಟ್ಟ ಉಡುಗೊರೆ, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಇಂತಹಾ ಉತ್ತಮ ವಿಧೇಯಕವನ್ನು ತಂದಂತಹಾ ವಿಶೇಷವಾಗಿ ಆ ವರ್ಗದ ಜನರಿಗೆ ಕೊಟ್ಟಂತಹಾ ಹಕ್ಕಿಗಾಗಿ ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇವೆ ಎಂದರು.












Click it and Unblock the Notifications