ರಸ್ತೆ ಅಪಘಾತದ ಬಲಿಪಶುಗಳು, ಸಹಾಯಕ್ಕೆ ಧಾವಿಸಿದ ಜನರ ರಕ್ಷಣಾ ನಿಯಮಗಳು-2026 ಜಾರಿಗೆ ಆದೇಶ
ಬೆಂಗಳೂರು: ರಸ್ತೆ ಅಪಘಾತಗಳು ಆದಾಗ ನಡೆಯುವಂತಹ ಒಂದಷ್ಟು ಚಿಕಿತ್ಸೆ ನಿರಾಕರಣೆ, ಪಾವತಿ, ಬಲಿಪಶುಗಳಿಗೆ ರಕ್ಷಣೆ, ಸಂತ್ರಸ್ತರ ರಕ್ಷಣೆಗೆ ನಿಂತ ಜನರ ರಕ್ಷಣೆಗಾಗಿ ನಿಯಮಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ಅಪಘಾತದ ಸಂದರ್ಭದಲ್ಲಿ ತಪ್ಪು ಮಾಡುವ ಅಥವಾ ಕೈಚೆಲ್ಲಿ ಕೂತು ವಿಫಲರಾಗುವ ವೈದ್ಯರು ಮತ್ತು ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.
ಹೌದು, ರಾಜ್ಯ ಆರೋಗ್ಯ ಇಲಾಖೆಯು ಬಲಿಪಶುಗಳು ಮತ್ತು ಬಲಿಪಶುಗಳಿಗೆ ಸಹಾಯ ಮಾಡುವ ಜನರನ್ನು ರಕ್ಷಿಸಲು ಆರೋಗ್ಯ ಇಲಾಖೆಯು ಕರ್ನಾಟಕ ಗುಡ್ ಸಮರಿಟನ್ ಮತ್ತು ವೈದ್ಯಕೀಯ ವೃತ್ತಿಪರ (ತುರ್ತು ಪರಿಸ್ಥಿತಿಗಳಲ್ಲಿ ರಕ್ಷಣೆ ಮತ್ತು ನಿಯಂತ್ರಣ) ನಿಯಮಗಳು-2026 ಅನ್ನು ರಾಜ್ಯದಲ್ಲಿ ಕಾರ್ಯಗತಗೊಳಿಸಲು ಮುಂದಾಗಿದೆ. ಈ ಕುರಿತು ಆದೇಶದಲ್ಲಿ ಏನೆಲ್ಲ ತಿಳಿಸಲಾಗಿದೆ ಎಂಬ ಮಾಹಿತಿ ಇಲ್ಲಿದೆ..

2018ರಲ್ಲೇ ಈ ಕಾನೂನನ್ನು ಅಂಗೀಕರಿಸಲಾಗಿತ್ತು. ಆದರೂ, ಹೊಸ ವಿಭಾಗವು ದೂರು ಪ್ರಾಧಿಕಾರ, ಪೊಲೀಸ್ ಶಿಸ್ತಿನ ಕಾರ್ಯವಿಧಾನ, 'ಗುಡ್ ಸಮರಿಟನ್ ನಿಧಿ'ಯ ರಚನೆ ಮತ್ತು ವಿವರಗಳು ಮತ್ತು ಬಲಿಪಶುಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಿಗೆ ಮರುಪಾವತಿಯ ಬಗ್ಗೆ ಕೊಂಚ ಗೊಂದಲಗಳಿದ್ದು, ಅವುಗಳ ಬಗ್ಗೆ ಈಗ ಇಲಾಖೆ ಸ್ಪಷ್ಟತೆ ಒದಗಿಸಿ, ಕಾರ್ಯಗತಗೊಳಿಸಲು ಸಜ್ಜಾಗಿದೆ.
ಈ ನಿಯಮಗಳಿಗೆ ಸಂಬಂಧಿಸಿದಂತೆ ಸರ್ಕಾರ ನೀಡಿರುವ ಆದೇಶದಲ್ಲಿ, ಪೊಲೀಸ್ ಅಧಿಕಾರಿ ಅಥವಾ ವೈದ್ಯರು ಅಪಘಾತದ ಬಲಿಪಶುಗಳಿಗೆ ಸಹಾಯ ಮಾಡಲು ವಿಫಲವಾದರೆ, ಉಪ ಆಯುಕ್ತರಿಗೆ ದೂರು ನೀಡಬಹುದಾಗಿದೆ. ಪೊಲೀಸ್ ಅಧಿಕಾರಿಗಳು ಪೊಲೀಸ್ ಶಿಸ್ತಿನ ಕ್ರಮದ ಅಡಿಯಲ್ಲಿ ಕ್ರಮ ಎದುರಿಸಬಹುದಾಗಿದೆ ಎಂದು ತಿಳಿಸಿದೆ. ಈ ಮೂಲಕ ವೈದ್ಯರು ಮತ್ತು ಪೊಲೀಸರಿಗೆ ಇಂತಹ ಸಂದರ್ಭಗಳಲ್ಲಿ ಸೂಕ್ತ ಕಾರ್ಯ ನಿರ್ವಹಣೆಗೆ ಸೂಚನೆ ನೀಡಿದೆ.
ಚಿಕಿತ್ಸೆ ನಿಲ್ಲಸದೇ ಮುಂದುವರಿಸುವುದು ಕಡ್ಡಾಯ
'ಗುಡ್ ಸಮರಿಟನ್ ನಿಧಿ'ಯನ್ನು ಸಿಎಸ್ಆರ್ ನಿಧಿಗಳು, ದೇಣಿಗೆಗಳು, ಸರ್ಕಾರಿ ರಸ್ತೆ ಸುರಕ್ಷತಾ ನಿಧಿಗಳು ಅಥವಾ ಇತರ ಸರ್ಕಾರಿ ಯೋಜನೆಗಳಿಂದ ನೆರವು ನೀಡಲಾಗುತ್ತದೆ. ಅಗತ್ಯವಿದ್ದರೆ ಸಾಲಗಳನ್ನು ಪಡೆಯಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ರೋಗಿಗಳು ಚಿಕಿತ್ಸೆಗೆ ಪಾವತಿಸಲು ಸಾಧ್ಯವಾಗದಿದ್ದರೆ, ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನಿಲ್ಲಿಸದೇ ಮುಂದುವರಿಸಬೇಕೆಂದು ಆದೇಶದಲ್ಲಿ ಹೇಳಲಾಗಿದೆ. ಆಸ್ಪತ್ರೆಯು ಆರೋಗ್ಯ ಭಾರತ ಆರೋಗ್ಯ ಕರ್ನಾಟಕದ ಅಡಿಯಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಹಣವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಅಪಘಾತದ ಬಲಿಪಶುಗಳಿಗೆ ಚಿಕಿತ್ಸೆ ಮುಂದುವರಿಸಿ ಅವರ ಜೀವ ಕಾಪಾಡಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ.
ಚಿಕಿತ್ಸೆ ದರ ನಿಗದಿಯಿಂದ ಅತೃಪ್ತಿ ತಂದಲ್ಲಿ ಏನು ಮಾಡಬೇಕು?
ಚಿಕಿತ್ಸೆಗೆ ಆಸ್ಪತ್ರೆಗಳಿಗೆ ಸರ್ಕಾರಿ ದರಗಳ ಅನ್ವಯ ಹಣ ಪಾವತಿ ಆಗಲಿದೆ. ಸರ್ಕಾರಿ ದರಗಳಲ್ಲಿ ಆಸ್ಪತ್ರೆಯನ್ನು ಪಟ್ಟಿ ಮಾಡದಿದ್ದರೆ, ವೈದ್ಯಕೀಯ ತಜ್ಞರ ಸಮಿತಿಯು ದರಗಳ ಬಗ್ಗೆ ನಿರ್ಧಾರ ಕೈಗೊಳ್ಳಬಹುದಾಗಿದೆ. ಒಂದು ವೇಳೆ ಸರ್ಕಾರ ಪಾವತಿಸಿದ ದರ ಅಥವಾ ಪಾವತಿಗೆ ಮಾಡಿದ ದರ ನಿಗದಿಯು ಅತೃಪ್ತಿ ತಂದಲ್ಲಿ ಆಸ್ಪತ್ರೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತರನ್ನು ಸಹ ಭೇಟಿ ಮಾಡಲು ಅವಕಾಶ ಇದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಒಟ್ಟಾರೆ ರಸ್ತೆ ಅಪಘಾತವಾದಾಗ ಬಲಿಪಶುಗಳು ಹಾಗೂ ಸಂತ್ರಸ್ತರನ್ನು ರಕ್ಷಣೆ ಮಾಡಲು ಮುಂದಾದ ಸಾರ್ವಜನಿಕರಿಗೆ ರಕ್ಷಣೆ ಒದಗಿಸುವ, ಅಪಘಾತದ ಸಂದರ್ಭದಲ್ಲಿ ಸ್ಪಂದಿಸುವುದು ಈ ನಿಯಮಗಳ ಉದ್ದೇವಾಗಿದೆ.












Click it and Unblock the Notifications