ಬೆಂಗಳೂರು ದಕ್ಷಿಣದಲ್ಲಿ ಗೃಹ ಮಂಡಳಿ ಸೈಟು ಮಾರಾಟ, ವಿವರಗಳು

ಬೆಂಗಳೂರು, ಫೆಬ್ರವರಿ 19: ಉದ್ಯಾನ ನಗರಿ ಬೆಂಗಳೂರಿನಲ್ಲಿ ಸೈಟು ಕೊಳ್ಳಲು ಆಲೋಚನೆ ನಡೆಸುತ್ತಿರುವ ಜನರಿಗೆ ಮಾಹಿತಿಯೊಂದಿದೆ. ಕರ್ನಾಟಕ ಗೃಹ ಮಂಡಳಿ (ಕೆಹೆಚ್‌ಬಿ) ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಸೈಟುಗಳ ಮಾರಾಟಕ್ಕೆ ಅರ್ಜಿಗಳನ್ನು ಕರೆದಿದೆ. 828 ಸೈಟುಗಳನ್ನು ಹಂಚಿಕೆ ಮಾಡಲಾಗುತ್ತಿದ್ದು, ಆಸಕ್ತರು ಅರ್ಜಿಗಳನ್ನು ಸಲ್ಲಿಕೆ ಮಾಡಲು ಫೆಬ್ರವರಿ 28 ಕೊನೆಯ ದಿನವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಕೋಟಾದಲ್ಲಿಯೂ ಸಹ ನಿವೇಶನಗಳು ಲಭ್ಯವಿದೆ.

ಕರ್ನಾಟಕ ಗೃಹ ಮಂಡಳಿ (ಕೆಹೆಚ್‌ಬಿ) ಬೆಂಗಳೂರು ದಕ್ಷಿಣ ತಾಲೂಕು ತಾವರೆಕೆರೆ ಹೋಬಳಿಯ ಬ್ಯಾಲಾಳು ಬಡಾವಣೆಯಲ್ಲಿ 7 ವರ್ಷಗಳ ಹಿಂದೆ 2,800ಕ್ಕೂ ಅಧಿಕ ನಿವೇಶನಗಳನ್ನು ಹೊಂದಿರುವ ಬಡಾವಣೆಯನ್ನು ಅಭವೃದ್ಧಿಪಡಿಸಿದೆ. 1,400 ಸೈಟುಗಳು ಹಂಚಿಕೆಯಾಗಿದ್ದು, ಉಳಿದ ಸೈಟುಗಳ ಹಂಚಿಕೆಗೆ ಈಗ ಅರ್ಜಿ ಕರೆಯಲಾಗಿದೆ.

Karnataka Housing Board Site Sale In Bengaluru South Details

ಈಗ 828 ಸೈಟುಗಳನ್ನು ಹಂಚಿಕೆ ಮಾಡಲಾಗುತ್ತದೆ. ಪ್ರತಿ ಚದರ ಅಡಿಗೆ 1,750 ರೂ. ದರವನ್ನು ನಿಗದಿ ಮಾಡಲಾಗಿದೆ. ಆರ್ಥಿಕವಾಗಿ ದುರ್ಬಲ ವರ್ಗದವರಿಗೆ 9 ನಿವೇಶನ ಲಭ್ಯವಿದೆ. ಈ ನಿವೇಶನಗಳಿಗೆ ಪ್ರತಿ ಚದರ ಅಡಿಗೆ 875 ರೂ. ದರವನ್ನು ನಿಗದಿಗೊಳಿಸಲಾಗಿದೆ.

ಬಡಾವಣೆಯ ವಿವರಗಳು: ಈ ವಸತಿ ಯೋಜನೆಯ ಸೈಟುಗಳ ಹಂಚಿಕೆಗೆ ಎರಡು ಬಾರಿ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಕಡಿಮೆ ಅರ್ಜಿಗಳು ಬಂದಿದ್ದ ಕಾರಣ ಉಳಿದ ಸೈಟುಗಳನ್ನು ಈಗ ಮತ್ತೆ ಹಂಚಿಕೆ ಮಾಡಲಾಗುತ್ತಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಫೆಬ್ರವರಿ 28ರ ತನಕ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಗೃಹ ಮಂಡಳಿ ಹೇಳಿದೆ.

20/30, 30/40, 30/50, 40/60 ಮತ್ತು 50/80 ಅಳತೆಯ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ. ಕಡಿಮೆ ಆದಾಯದ ಗುಂಪು (ಎಲ್‌ಐಜಿ) 197 ಸೈಟು, ಮಧ್ಯಮ ಆದಾಯದ ಗುಂಪು (ಎಂಐಜಿ) 555 ಸೈಟು, ಹೆಚ್ಚು ಆದಾಯದ ಗುಂಪು (ಎಚ್‌ಐಜಿ-1) 67 ಸೈಟುಗಳು ಲಭ್ಯವಿದೆ.

ಸಾಮಾನ್ಯ ವರ್ಗದ ಜೊತೆಗೆ ಎಸ್‌ಸಿ, ಎಸ್‌ಟಿ, ರಕ್ಷಣಾ ಇಲಾಖೆ, ಮಾಜಿ ಸೈನಿಕ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು, ಅಂಗವಿಕಲ, ಹಿರಿಯ ನಾಗರಿಕರ ಕೋಟಾದಲ್ಲಿಯೂ ಸೈಟುಗಳನ್ನು ಹಂಚಿಕೆ ಮಾಡಲಾಗುತ್ತದೆ. ಈ ಬಡಾವಣೆಗಾಗಿಯೇ 24 ಮೀಟರ್ ವಿಸ್ತೀರ್ಣದ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗಿದೆ. ಈ ಬಡಾವಣೆ ಮೈಸೂರು ರಸ್ತೆಯಿಂದ 8 ಕಿ. ಮೀ., ಮಾಗಡಿ ಮುಖ್ಯ ರಸ್ತೆಯಿಂದ 6 ಕಿ. ಮೀ. ದೂರದಲ್ಲಿದೆ. ಗೃಹ ಮಂಡಳಿ ಮಾಹಿತಿ ಪ್ರಕಾರ ಈಗಾಗಲೇ 90 ಅರ್ಜಿ ಸಲ್ಲಿಕೆಯಾಗಿದೆ.

ಷರತ್ತುಗಳು ಮತ್ತು ನಿಬಂಧನೆಗಳು

* ನಿವೇಶನ ಹಂಚಿಕೆಗಾಗಿ ಅರ್ಜಿ ಸಲ್ಲಿಸುವ ಅರ್ಜಿದಾರರು ನೋಂದಣಿ ಶುಲ್ಕ ಮತ್ತು ಆರಂಭಿಕ ಠೇವಣಿಯನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ e-payment ಮೂಲಕ ಪಾವತಿ ಮಾಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ನಿವೇಶನ ಹಂಚಿಕೆಗಾಗಿ ಅರ್ಜಿ ಸಲ್ಲಿಸಿ ನೋಂದಣಿ ಪಡೆದ ಅರ್ಜಿದಾರರಿಗೆ ನೋಂದಣಿ ಶುಲ್ಕವನ್ನು ಮರುಪಾವತಿ ಮಾಡಲಾಗುವುದಿಲ್ಲ.

* ಪ್ರಸ್ತುತ ಪ್ರಕಟಣೆಯಂತೆ ಆರಂಭಿಕ ಠೇವಣಿಯನ್ನು ಪಾವತಿಸುವ ಅರ್ಜಿದಾರರಿಗೆ ಕರ್ನಾಟಕ ಗೃಹ ಮಂಡಳಿ ಹಂಚಿಕೆ ನಿಯಮಾವಳಿಗಳು 1983 ನಿಯಮ 9 ರಂತೆ ಇ-ಟರಿ ಮುಖಾಂತರ ಸ್ವತ್ತುಗಳನ್ನು ಹಂಚಿಕೆ ಮಾಡಲಾಗುವುದು. ನಿವೇಶನಗಳನ್ನು ಒಂದೇ ಇಡಿಗಂಟಿನ (Outright sale) ಆಧಾರದ ಮೇಲೆ ಹಂಚಿಕೆ ಮಾಡಲಾಗುವುದು.

* ಆಯಾ ಪ್ರವರ್ಗವಾರು ಅಡಿಯಲ್ಲಿ ಮೀಸಲಾತಿ ಕೋರಿ ಅರ್ಜಿ ಸಲ್ಲಿಸುವವರು ಸಂಬಂಧಿಸಿದ ದೃಢೀಕೃತ ದಾಖಲಾತಿಯನ್ನು ಅರ್ಜಿಯೊಂದಿಗೆ ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಬೇಕು.

* ನಿವೇಶನಗಳನ್ನು ಈಗಾಗಲೇ ಪ್ರವರ್ಗವಾರು ಮೀಸಲಾತಿಯಡಿ ಹಂಚಿಕೆ ಮಾಡಿರುವುದರಿಂದ ಅರ್ಜಿಗಳನ್ನು ಪ್ರವರ್ಗವಾರು ವಿಂಗಡಿಸದೇ ಎಲ್ಲಾ ಅರ್ಜಿಗಳನ್ನು ಒಟ್ಟಿಗೆ ಸೇರಿಸಿ ಇ-ಲಾಟರಿ ಮಾಡಲಾಗುವುದು.

* ಅರ್ಥಿಕ ದುರ್ಬಲ ವರ್ಗದ ನಿವೇಶನಗಳನ್ನು ಶೇ.50 ರಷ್ಟು ರಿಯಾಯಿತಿ ದರದಲ್ಲಿ ಹಂಚಿಕೆ ಮಾಡುತ್ತಿರುವುದರಿಂದ, ಅರ್ಜಿದಾರರು ಇತ್ತೀಚಿನ ತಮ್ಮ ಕುಟುಂಬದ ವಾರ್ಷಿಕ ವರಮಾನ, ನಗರ ಪ್ರದೇಶದ ಅರ್ಜಿದಾರರು ರೂ. 2,00,000 ಮತ್ತು ಗ್ರಾಮೀಣ ಪ್ರದೇಶದ ಅರ್ಜಿದಾರರು ವಾರ್ಷಿಕ ವರಮಾನ ರೂ.1.20,000ಗಳಿಗೆ ಮೀರದಿರುವ ಬಗ್ಗೆ ಸಂಬಂಧಪಟ್ಟ ತಹಶೀಲ್ದಾರ್ ಅವರಿಂದ ಆದಾಯ ಪ್ರಮಾಣ ಪತ್ರವನ್ನು ಪಡೆದು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡುವುದು.

*ಅರ್ಜಿ ಸಲ್ಲಿಸುವುದಕ್ಕೆ ಮೊದಲು 10 ವರ್ಷಗಳಿಗೆ ಕಡಿಮೆ ಇಲ್ಲದಷ್ಟು ಕಾಲ ಅರ್ಜಿದಾರರು ಕರ್ನಾಟಕ ರಾಜ್ಯದ ಸಾಮಾನ್ಯ ನಿವಾಸಿಯಾಗಿರುವುದಕ್ಕೆ ಹಾಗೂ ಅರ್ಜಿದಾರರ ಪತಿ/ ಪತ್ನಿ ಮತ್ತು ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಕರ್ನಾಟಕ ಗೃಹ ಮಂಡಳಿ ಅಥವಾ ಇನ್ನಿತರ ಯಾವುದೇ ಸ್ಥಳೀಯ ಸಂಸ್ಥೆ/ ಪ್ರಾಧಿಕಾರದಿಂದಾಗಲಿ, ಫ್ಲಾಟ್/ ಮನೆ/ ನಿವೇಶನ ಪಡೆದಿರುವುದಿಲ್ಲವೆಂದು ನೋಟರಿ ಮೂಲಕ ಪ್ರಮಾಣೀಕರಿಸಿದ ಪ್ರಮಾಣಪತ್ರ ಅಪ್‌ಲೋಡ್ ಮಾಡಬೇಕು.

* ಹಂಚಿಕೆ ನಂತರ ಹಂಚಿಕೆದಾರದ ಕೋರಿಕೆ ಮೇರೆಗೆ ಅಥವಾ ಹಂಚಿಕೆದಾರರು ನಿಗಧಿತ ಸಮಯದಲ್ಲಿ ಹಣ ಸಂದಾಯಿ ಮಾಡದ ಸಂದರ್ಭದಲ್ಲಿ ಹಂಚಿಕೆಯನ್ನು ರದ್ದುಪಡಿಸಿ ಆರಂಭಿಕ ಠೇವಣಿ ಹಣದಲ್ಲಿ ಶೇ. 25 ರಷ್ಟು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಈ ಹಂಚಿಕೆಯು ಕರ್ನಾಟಕ ಗೃಹ ಮಂಡಳಿ 1983ರ ಹಂಚಿಕೆ ನಿಯಮ ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಗೃಮಂ, ಬೆಂಗಳೂರು ನಗರ ಜಿಲ್ಲಾ ಯೋಜನಾ ಕಛೇರಿಯನ್ನು ಸಂಪರ್ಕಿಸಬಹುದು. ಮೊಬೈಲ್ ನಂಬರ್ 9845600099.

ಸಹಾಯಕ ಕಂದಾಯ ಅಧಿಕಾರಿ, ಹಂಚಿಕೆ ಶಾಖೆ, ಕರ್ನಾಟಕ ಗೃಹ ಮಂಡಳಿ, 4ನೇ ಮಹಡಿ, ಕಾವೇರಿ ಭವನ, ಬೆಂಗಳೂರು ಇವರನ್ನು ಖುದ್ದಾಗಿ ಅಥವಾ 9164839817, 080-22273511 ಮೂಲಕ ಸಂಪರ್ಕಿಸುವುದು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಗೃಹ ಮಂಡಳಿ ವೆಬ್‌ಸೈಟ್‌ಗೆ ಭೇಟಿ ನೀಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+