ನಿವೇಶನ ಹಂಚಿಕೆ, ಬಹಿರಂಗ ಹರಾಜು ಎಲ್ಲವೂ ಬಿಡಿಎ ವೆಬ್‌ಸೈಟ್‌ಗೆ ಬರಲಿ: ಹೈಕೋರ್ಟ್
ಬೆಂಗಳೂರು, ಸೆ.10: ನಿವೇಶನ ಹಂಚಿಕೆ, ಬಹಿರಂಗ ಹರಾಜು ಸೇರಿದಂತೆ ಯಾವ ಚಟುವಟಿಕೆಗಳನ್ನೂ ಪಾರದರ್ಶಕವಾಗಿ ಮಾಡದೆ ನಿಯಮಗಳನ್ನು ಗಾಳಿಗೆ ತೂರಿ 'ಗೋಲ್ ಮಾಲ್'ಗೆ ಹೆಸರಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ಕ್ಕೆ ಹೈಕೋರ್ಟ್ ಸರಿಯಾದ ತಪರಾಕಿ ನೀಡಿದೆ.
ಪ್ರಾಧಿಕಾರ ತನ್ನೆಲ್ಲಾ ಕಾರ್ಯಚಟುವಟಿಕೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಇದೀಗ ಬಡಾವಣೆ ರಚನೆಯ ಪ್ರತಿಯೊಂದು ವಿವರಗಳನ್ನು ಪ್ರಾಧಿಕಾರ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಹುಕುಂ ಹೊರಡಿಸಿದೆ.
ಅಲ್ಲದೆ, ಇದೇ ವಿಚಾರ ಕುರಿತಂತೆ ಹೈಕೋರ್ಟ್ ಸ್ವಯಂ ಪ್ರೇರಿತ ಪಿಐಎಲ್ ದಾಖಲು ಮಾಡಿಕೊಂಡಿದೆ.
ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಿರುವ ಮೂವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಏಕಸದಸ್ಯ ಪೀಠ ಬಡಾವಣೆ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವಂತೆ ನಿರ್ದೇಶನ ನೀಡಿತ್ತು.

ಅದನ್ನು ಪ್ರಶ್ನಿಸಿ ಬಿಡಿಎ ಸಲ್ಲಿಸಿದ ಮೇಲ್ಮನವಿ ಇತ್ಯರ್ಥಪಡಿಸುವಾಗ ಹಂಗಾಮಿ ಸಿಜೆ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಈ ಆದೇಶವನ್ನು ನೀಡಿದೆ.
ಹಾಗಾಗಿ ಇನ್ನು ಸಾರ್ವಜನಿಕರು ನಿಟ್ಟುಸಿರುವ ಬಿಡುವಂತಾಗಿದ್ದು, ಬಿಡಿಎ ಎಲ್ಲ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಹಾಕಲೇಬೇಕು, ಏನೇನೋ ಕಾರಣ ಹೇಳಿ ತಪ್ಪಿಸಿಕೊಳ್ಳಲಾಗದು. ಹಾಗೇನಾದರೂ ಮಾಡಿದರೆ ನ್ಯಾಯಾಂಗ ನಿಂದನೆ ಕ್ರಮ ಎದುರಿಸಬೇಕಾಗುತ್ತದೆ.
ಅರ್ಕಾವತಿ ಬಡಾವಣೆಯ ವಿವರಗಳನ್ನು ಅಪ್‌ಲೋಡ್ ಮಾಡಲು ನ್ಯಾಯಪೀಠ ಪ್ರಾಧಿಕಾರಕ್ಕೆ 10 ವಾರಗಳ ಕಾಲಾವಕಾಶ ನೀಡಿದೆ. ಜೊತೆಗೆ ಉಳಿದ ವಿವರಗಳನ್ನೂ ಸಹ ಅಪ್‌ಲೋಡ್ ಮಾಡಲು ಆದೇಶಿಸಿದೆ.
ಎಲ್ಲ ವಿವರ ವೆಬ್ ಹೋಸ್ಟ್ ಮಾಡಿ: ನ್ಯಾಯಪೀಠವು ''ಬಿಡಿಎ ಮಾಹಿತಿ ಹಕ್ಕು ಕಾಯಿದೆ 2005ರ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಪ್ರಾಧಿಕಾರ ಹೇಳುವುದು ಅನಾವಶ್ಯಕವಾಗಿದೆ. ಆದ್ದರಿಂದ, ಬಿಡಿಎ ತನ್ನ ಕಾರ್ಯಚಟುವಟಿಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಅಗತ್ಯವಿದೆ ಮತ್ತು ಅದರ ಮೂಲಕ ರೂಪುಗೊಂಡ ಬಡಾವಣೆಗಳ ಎಲ್ಲಾವಿವರಗಳನ್ನು ವೆಬ್-ಹೋಸ್ಟ್ ಮಾಡುವ ಅಗತ್ಯವಿದೆ'' ಎಂದು ಆದೇಶಿಸಿದೆ.
ಬಡಾವಣೆಗಳ ರಚನೆಗೆ ಹೊರಡಿಸಲಾದ ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆಗಳಲ್ಲಿ ಸೂಚಿಸಲಾದ ಭೂಮಿಯ ಒಟ್ಟು ವಿಸ್ತೀರ್ಣ, ಡಿನೋಟಿಫಿಕೇಷನ್‌ಗೆ ಕಾರಣಗಳ ವಿವರಗಳು ಮತ್ತು ಡಿನೋಟಿಫಿಕೇಷನ್‌ನ ಪ್ರತಿಗಳನ್ನು ಗ್ರಾಮ ನಕ್ಷೆಯೊಂದಿಗೆ ಅತಿಕ್ರಮಿಸುವ ಮೂಲಕ ಆಯಾ ಗ್ರಾಫಿಕ್ ವಿವರಣೆಯೊಂದಿಗೆ ಬಿಡಿಎ ವೆಬ್‌ಸೈಟ್‌ನಲ್ಲಿ ಪ್ರತ್ಯೇಕವಾಗಿ ಅಪ್‌ಲೋಡ್ ಮಾಡಬೇಕು/ಗೂಗಲ್ ನಕ್ಷೆ/ಪರಿಷ್ಕೃತ ಮಾಸ್ಟರ್‌ಪ್ಲಾನ್ ಇತ್ಯಾದಿ ವಿವರಗಳಿರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಲ್ಲದೆ, ಯಾವಾಗ ಸ್ವಾಧೀನಪಡಿಸಿಕೊಳ್ಳಲಾಯಿತು ಎಂಬ ವಿವರಗಳೊಂದಿಗೆ ಸ್ವಾಧೀನಪಡಿಸಿಕೊಂಡ ಭೂಮಿಯ ವಿಸ್ತೀರ್ಣ, ಸ್ವಾಧೀನ ಸೂಚನೆಗಳು, ಮಹಜರ್‌ಗಳು ಮತ್ತು ಬಿಡಿಎ ಕಾಯಿದೆ 1976ರ ಸೆಕ್ಷ ನ್ 16(2) ರ ಅಡಿಯಲ್ಲಿ ಅಭಿವೃದ್ಧಿ ಯೋಜನೆ ಅಧಿಸೂಚನೆಗಳ ಪ್ರತಿಗಳೊಂದಿಗೆ ವೆಬ್-ಹೋಸ್ಟ್ ಮಾಡಬೇಕಾಗಿದೆ.

ಇಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಲಾದ ಭೂಮಿಯ ಒಟ್ಟು ವಿಸ್ತೀರ್ಣ, ಅಳತೆಗಳೊಂದಿಗೆ ರಚಿಸಲಾದ ಒಟ್ಟು ನಿವೇಶನಗಳ ಸಂಖ್ಯೆ ಮತ್ತು ಪ್ರತಿ ಸರ್ವೆ ನಂಬರ್‌ನಲ್ಲಿ ರಚಿಸಲಾದ ನಿವೇಶನಗಳ ಸಂಖ್ಯೆಯೊಂದಿಗೆ ನಿವೇಶನಗಳ ಸಂಖ್ಯೆಗಳು ಮತ್ತು ಪ್ರತಿ ಬಡಾವಣೆಯಲ್ಲಿ ಅವುಗಳ ಅಳತೆಯ ಬಗ್ಗೆ ಸರ್ವೆ ಸಂಖ್ಯೆವಾರು ವಿವರಗಳು ಸಹ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕೆಂದು ಸೂಚಿಸಲಾಗಿದೆ.
ಮೂಲೆ ನಿವೇಶನ ಹರಾಜಿಗೆ ಹಸಿರು ನಿಶಾನೆ: ಇದೇ ವೇಳೆ ವಿಭಾಗೀಯ ಪೀಠವು 2022ರ ಮೇ 31ರಂದು ಅರ್ಕಾವತಿ ಲೇಔಟ್‌ನಲ್ಲಿನ ಮೂಲೆ ನಿವೇಶನಗಳ ಹರಾಜಿಗೆ ತಡೆ ನೀಡಿದ್ದ ಮಧ್ಯಂತರ ಆದೇಶವನ್ನು ಮಾರ್ಪಡು ಮಾಡಿತು. ಅಲ್ಲದೆ, ಏಕಸದಸ್ಯಪೀಠದ ಮುಂದೆ ಅರ್ಜಿ ಹೂಡಿರುವವರಿಗೆ ಮೂರು ನಿವೇಶನಗಳನ್ನು ಕಾಯ್ದಿರಿಸಿದ ನಂತರ ಇತರೆ ನಿವೇಶಗಳನ್ನು ಹರಾಜು ಮಾಡಲು ಬಿಡಿಎಗೆ ಅನುಮತಿ ನೀಡಿತು.
ಅರ್ಕಾವತಿ ಬಡಾವಣೆಯಲ್ಲಿ ತಮ್ಮ ಪರವಾಗಿ ನೋಂದಣಿಯಾಗಿರುವ ನಿವೇಶನಗಳನ್ನು ಬಡಾವಣೆಯ ವಿನ್ಯಾಸದಲ್ಲಿ ಬದಲಾವಣೆ ಮಾಡಿ ರಸ್ತೆ ನಿರ್ಮಾಣಕ್ಕೆ ಅಕ್ರಮವಾಗಿ ಮತ್ತು ಏಕಪಕ್ಷೀಯವಾಗಿ ಬಳಸಿಕೊಳ್ಳುವ ಮೂಲಕ ಪರ್ಯಾಯ ನಿವೇಶನ ಹಂಚಿಕೆ ಮಾಡಿರುವ ಬಿಡಿಎ ನಿರ್ಧಾರವನ್ನು ಅರ್ಜಿದಾರರು ಪ್ರಶ್ನಿಸಿದ್ದರು.












Click it and Unblock the Notifications