ಸೇವಾಭದ್ರತೆ ಸೇರಿ 15 ಬೇಡಿಕೆ ಈಡೇರಿಕೆ ಕಾಲೇಜು ಅತಿಥಿ ಉಪನ್ಯಾಸಕರ ಮನವಿ ಸಲ್ಲಿಕೆ
ಬೆಂಗಳೂರು, ನವೆಂಬರ್ 28: ಸೇವಾ ಭದ್ರತೆಯೊಂದಿಗೆ ವಾರ್ಷಿಕ ಶೇ.5ರಷ್ಟು ಗೌರವಧನ ಹೆಚ್ಚಳ ಸೇರಿದಂತೆ ವಿವಿಧ 15 ಬೇಡಿಕೆಗಳು ಈಡೇರಿಸುವಂತೆ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಉನ್ನತ ಶಿಕ್ಷಣ ಇಲಾಖೆ ಮನವಿ ಸಲ್ಲಿಸಿದೆ.
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ನೇತೃತ್ವದಲ್ಲಿ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಅರುಣ್ ಶಿವಮೊಗ್ಗ ಮತ್ತಿತರರು ಮನವಿ ಪತ್ರವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್‌ಗೆ ಸಲ್ಲಿಸಿದರು. ಮನವಿ ಸ್ವೀಕರಿಸಿದ ಸಚಿವರು ಬೇಡಿಕೆಗಳನ್ನು ಈಡೇರಿಸುವ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲಿಸುವುದಾಗಿ ಅವರು ಭರವಸೆ ನೀಡಿದರು.
ಅತಿಥಿ ಶಿಕ್ಷಕರ 15 ಬೇಡಿಕೆಗಳು?
ರಾಜ್ಯದ ಉನ್ನತ ಶಿಕ್ಷಣ ವಲಯದಲ್ಲಿ ಎನ್‌ಇಪಿ ಜಾರಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿರುವ 11 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿಗೆ ಸೇವಾ ವಿಲೀನದ ಸೌಲಭ್ಯ ನೀಡುವ ಮೂಲಕ, ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಬೇಕು. ಹಾಗೆಯೇ ಎನ್‌ಇಪಿ ಅನುಸಾರ 40ರಿಂದ 50 ವಿದ್ಯಾರ್ಥಿಗಳಂತೆ ಒಂದೊಂದು ತರಗತಿಗಳನ್ನು ವಿಭಾಗಿಸುವುದರಿಂದ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು ಎಂದು ಸಮಿತಿ ಕೇಳಿಕೊಂಡಿದೆ.

ಸೇವಾ ಭದ್ರತೆ, ನಿವೃತ್ತಿ ಸಂದರ್ಭದಲ್ಲಿ 25 ಲಕ್ಷ ರೂ.ಗಳ ಇಡಿಗಂಟು ಮತ್ತು ಕಾಯಂ ಉಪನ್ಯಾಸಕರಿಗೆ ನೀಡುವಂತೆ ತಮಗೂ ಓಓಡಿ ಹಾಗೂ ರಜೆ ಸೌಲಭ್ಯ ನೀಡುವುದು ಸೇರಿದಂತೆ ಮುಂತಾದ 15 ಬೇಡಿಕೆಗಳನ್ನು ಒಳಗೊಂಡ ಮನವಿ ಈಡೇರಿಸಬೇಕು.

ಇದರೊಂದಿಗೆ ನೇಮಕಾತಿಗಳಲ್ಲಿ ಮೀಸಲಾತಿ, ವಯೋಮಿತಿ ಸಡಿಲಿಕೆ, ವೇತನ ಸಹಿತ 6 ತಿಂಗಳ ಮಾತೃತ್ವ/ಪಿತೃತ್ವ ರಜೆ, ವಿಮೆ, ಇಎಸ್‌ಐ ಮತ್ತು ಇಪಿಎಫ್ ಸೌಲಭ್ಯಗಳನ್ನು ಕೂಡ ತಮಗೆ ಒದಗಿಸಬೇಕು. ಮೌಲ್ಯಮಾಪನಕ್ಕೆ ತೆರಳಿದ ದಿನಗಳ ಗೌರವಧನವನ್ನು ಕಡಿತ ಮಾಡಬಾರದು. ಪರಸ್ಪರ ಸ್ಥಳ ಬದಲಾವಣೆ ಮತ್ತು ಕಾರ್ಯಭಾರದ ಕೊರತೆ ಉಂಟಾದಲ್ಲಿ ಕರ್ತವ್ಯದಿಂದ ಬಿಡುಗಡೆಗೊಳಿಸದೆ ಕಾರ್ಯಭಾರವಿರುವ ಕಾಲೇಜುಗಳಿಗೆ ವರ್ಗಾವಣೆ ಮಾಡುವ ನೀತಿ ಜಾರಿಗೆ ತರಬೇಕು ಎಂದು ಮನವಿಯಲ್ಲಿ ಕೇಳಿಕೊಳ್ಳಲಾಗಿದೆ.












Click it and Unblock the Notifications