Bengaluru: ₹4,000 ಕೋಟಿ ಮೌಲ್ಯದ ಜಾಗ ಮರಳಿ ಅರಣ್ಯ ಇಲಾಖೆ ವಶಕ್ಕೆ: ಈಶ್ವರ್ ಖಂಡ್ರೆ
ಬೆಂಗಳೂರು, ಜೂನ್ 23: ಬೆಂಗಳೂರು ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ, ರಾಜಕಾಲುವೆ ಜಾಗ ಹೀಗೆ ಸಿಕ್ಕ ಸಿಕ್ಕ ಜಾಗಗಳನ್ನೆ ಅತಿಕ್ರಮ ಮಾಡಿಕೊಂಡು ಮನೆ, ಮಳಿಗೆ ಕಟ್ಟಿರುತ್ತಾರೆ. ಅಂತವುಗಳಿಗೆ ಸರ್ಕಾರ ಕಡಿವಾಣ ಹಾಕುತ್ತಲೇ ಬಂದಿದೆ. ಇದೀಗ ಬೆಂಗಳೂರು ಬೆಂಗಳೂರು ಪೂರ್ವ ತಾಲ್ಲೂಕಿನ ಕಾಡುಗೋಡಿ ಪ್ಲಾಂಟೇಷನ್‌ನಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಭೂಮಿಯನ್ನು ಅರಣ್ಯ ಇಲಾಖೆ ಮರಳಿ ವಶಕ್ಕೆ ಪಡೆದುಕೊಂಡಿದೆ.
ಕರ್ನಾಟಕ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಕಾಡುಗೋಡಿ ವ್ಯಾಪ್ತಿಯಲ್ಲಿ 120 ಎಕರೆ ಅರಣ್ಯ ಭೂಮಿಯನ್ನು ಅಧಿಕಾರಿಗಳು ಸೋಮವಾರ ಇಲಾಖೆಗೆ ಮರು ವಶಕ್ಕೆ ಪಡೆದಿದ್ದಾರೆ. ಇದು ಬರೋಬ್ಬರಿ ₹4,000 ಕೋಟಿ ಮೌಲ್ಯದ್ದಾಗಿದೆ ಎಂದು ತಿಳಿಸಿದರು.

ಅರಣ್ಯ ಸಚಿವರಾಗಿ ನಾನು, ಅರಣ್ಯ ವ್ಯಾಪ್ತಿಯ ಭೂಮಿ ಒತ್ತುವರಿ ವಿರುದ್ಧ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಅದರ ಭಾಗವಾಗಿ ನಡೆಯುತ್ತಿರುವ ಈ ಕಾರ್ಯಾಚರಣೆಯಲ್ಲಿ ನಗರದಲ್ಲಿನ ಶ್ವಾಸತಾಣಗಳ ಸಂರಕ್ಷಣೆಯತ್ತ ದೊಡ್ಡ ಹೆಜ್ಜೆ ಇಟ್ಟಿದ್ದೇವೆ. ನೂರಾರು ಎಕರೆ ಭೂಮಿ ಮರಳಿ ಸರ್ಕಾರದ ವ್ಯಾಪ್ತಿಗೆ ತಂದಿದ್ದೇವೆ. ಹೀಗೆ ನಿರಂತರ ಕಾರ್ಯಾಚರಣೆ ಮೂಲಕ ಕಳೆದ 2 ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ ಒತ್ತುವರಿಯಾಗಿದ್ದ ಸಾವಿರಾರು ಕೋಟಿ ಮೌಲ್ಯದ ಒಟ್ಟು ಅರಣ್ಯ ಭೂಮಿ 248 ಎಕರೆಯನ್ನು ಮರಳಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು. ಮೂಲಕ ಅರಣ್ಯ ಭೂಮಿ ಬೇರೆಯವರ ಪಾಲಾಗಿ, ಹಸಿರು ಕಡಿಮೆ ಆಗುತ್ತಿದ್ದನ್ನು ಅವರು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಅರಣ್ಯ ಇಲಾಖೆ ತಾಂತ್ರಿಕ ನೈಪುಣ್ಯತೆ ಬೇಕೆಂದು ಮನವಿ
ಹೌದು, ಇತ್ತೀಚೆಗೆ ವಿಕಾಸಸೌಧದಲ್ಲಿ ಕೇರಳದ ಅರಣ್ಯ ಸಚಿವ ಎ.ಕೆ. ಸಶೀಂದ್ರನ್ ಅವರು ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿಯಾಗಿ ಮಹತ್ವದ ವಿಷಯಗಳನ್ನು ಚರ್ಚಿಸಿದರು. ತಮ್ಮ ರಾಜ್ಯದ ತ್ರಿಶೂರ್ ಜಿಲ್ಲೆಯ ಪುಥೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಜೈವಿಕ ಉದ್ಯಾನಕ್ಕಾಗಿ ಕರ್ನಾಟಕ ಅರಣ್ಯ ಇಲಾಖೆಯ ತಾಂತ್ರಿಕ ನೈಪುಣ್ಯತೆ ಹಾಗೂ ಜ್ಞಾನ ವಿನಿಮಯ ಮಾಡಬೇಕು ಎಂದು ನೆರವು ಕೋರಿದ್ದಾರೆ.
ಆಗಸ್ಟ್‌ಗೆ ಜೈವಿಕ ಉದ್ಯಾನ ಆರಂಭ
ಈ ಜೈವಿಕ ಉದ್ಯಾನವು 136.8 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿದೆ. ಆಗಸ್ಟ್ ಅಂತ್ಯಕ್ಕೆ ಕಾರ್ಯಾರಂಭ ಮಾಡಲು ಕೇರಳ ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ವನ್ಯಜೀವಿ ನಿರ್ವಹಣೆಗೆ ಅಗತ್ಯವಿರುವ ನೈಪುಣ್ಯತೆ ಹಂಚಿಕೊಳ್ಳಲು ನಾವು ಸಮ್ಮತಿಸಿದ್ದೇವೆ ಎಂದು ಅವರು ರಾಜ್ಯ ಸಚಿವರಿಗೆ ತಿಳಿಸಿದರು.
ಸಭೆಯಲ್ಲಿ ಕೇರಳ ಅರಣ್ಯ ಇಲಾಖೆಯ ಮುಖ್ಯ ವನ್ಯಜೀವಿ ಪರಿಪಾಲಕ ಶ್ರೀ ಪ್ರಮೋದ್ ಜಿ ಕೃಷ್ಣನ್ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಮೀನಾಕ್ಷಿ ನೇಗಿ, ಸುಭಾಷ್ ಮಲ್ಕಡೆ, ಸುನೀಲ್ ಪನ್ವಾರ್, ಸೂರ್ಯ ಸೇನ್ ಇತರ ಅಧಿಕಾರಿಗಳು ಪಾಲ್ಗೊಂಡು, ಕೇರಳ ರಾಜ್ಯದಲ್ಲಿ ಡೀಮ್ಡ್ ಅರಣ್ಯ ಹಾಗೂ ಕಸ್ತೂರಿ ರಂಗನ್ ವರದಿ ಕುರಿತಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಸ್ಪರ ಚರ್ಚೆ ನಡೆಸಿದರು. ಶೀಘ್ರವೇ ಕರ್ನಾಟಕ ಹಾಗೂ ಕೇರಳ ರಾಜ್ಯ ಅರಣ್ಯ ಇಲಾಖೆಗಳ ಮಧ್ಯ ಉತ್ತಮ ಸಂಪರ್ಕ, ಇಲಾಖೆ ಬೆಳೆವಣಿಯ ಪರಸ್ಪರ ಸಹಕಾರ ನೀಡಲಿವೆ. ಈ ಬಗ್ಗೆ ಈಶ್ವರ್ ಖಂಡ್ರೆ ಅವರು ಭರವಸೆ ನೀಡಿದ್ದಾರೆ...












Click it and Unblock the Notifications