Shakti Scheme: ರಾಜ್ಯ ಸಾರಿಗೆ ನಿಗಮಗಳ ಆರ್ಥಿಕ ಹೊರೆ ನೀಗಿಸಲು ಅನುದಾನ ಬಿಡುಗಡೆ ಪ್ರಸ್ತಾವನೆ ತಿರಸ್ಕಾರ
ಬೆಂಗಳೂರು, ಜೂನ್ 15: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಒದಗಿಸುವ 'ಶಕ್ತಿ' ಯೋಜನೆ ಜಾರಿ ಮಾಡಿದೆ. ಆದರೆ ನಾಲ್ಕು ನಿಗಮಗಳ ಹಣಕಾಸಿನ ಹೊರೆ ಸರಿದೂರಿಸಲು ಆರ್ಥಿಕ ಇಲಾಖೆ
ಅನುದಾನ ನೀಡುವುದಿಲ್ಲ ಎಂದಿದೆ. ಈ ಕುರಿತು ರಾಜ್ಯ ಬಿಜೆಪಿ ಟ್ವೀಟ್ ಮಾಡಿ ಕಾಂಗ್ರೆಸ್ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರಲು ಕಾರಣವಾದ ಐದು ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆಯು ಒಂದು. ಈ ಯೋಜನೆಯಿಂದಾಗಿ ಜೂನ್ 11ರಿಂದ ರಾಜ್ಯದ ನಾಲ್ಕು ನಿಗಮಗಳ ಸರ್ಕಾರಿ ಬಸ್‌ಗಳಲ್ಲಿ ಕೋಟ್ಯಾಂತರ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಸಾರಿಗೆ ಬಸ್‌ಗಳಿಗಾಗಿ ಇಷ್ಟು ದಿನ ಗುದ್ದಾಟ, ರಶ್, ಬಸ್ ಗಳ ಕೊರತೆಯು ಈ ಉಚಿತ ಪ್ರಯಾಣ ಯೋಜನೆ ಜಾರಿ ಬಳಿಕ ಆರಂಭವಾಗಿದೆ.
ಆದರೆ ನಿತ್ಯ ಲಕ್ಷಾಂತರ ಮಂದಿ ಮಹಿಳೆಯರಿಗೆ ಉಚಿತವಾಗಿ ಕರೆದೊಯತ್ತಿರುವುದರಿಂದ ನಿಗಮಗಳಿಗೆ ಆರ್ಥಿಕ ಹೊರೆ ಉಂಟಾಗುತ್ತಿದೆ. ಈ ಸಂಬಂಧ ಅನುದಾನ ಬಿಡುಗಡೆಗಾಗಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ರಾಜ್ಯ ಆರ್ಥಿಕ ಇಲಾಖೆ ತಿರಸ್ಕರಿಸಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಎಟಿಎಂ ಸರ್ಕಾರದ (#ATMSarkara) ಎಂದು ಹ್ಯಾಷ್‌ಟ್ಯಾಗ್ ಹಾಕಿ ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿ ಮಾಡಿರುವ ಟ್ವೀಟ್‌ನಲ್ಲಿ ಹಣಕಾಸು ಇಲಾಖೆ ನಾಲ್ಕು ನಿಗಮಗಳಿಗೆ ಅನುದಾನ ವಿಚಾರವಾಗಿ ನೀಡಿದ ತಿರಸ್ಕಾರ ಪತ್ರವನ್ನು ಪೋಸ್ಟ್ ಮಾಡಲಾಗಿದೆ. ಶಕ್ತಿ ಯೋಜನೆ ಪರಿಣಾಮ ಬೆಂಗಳೂರು ಮಹಾನಗರ ಸಾರಿಗೆ (BMTC), ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಗಳಿಗೆ ಉಂಟಾಗುವ ಆರ್ಥಿಕ ಹೊರೆಯನ್ನು ಸರಿದೂಗಿಸಲು ಅನುದಾನ ನೀಡುವುದು ಸಾಧ್ಯವಿಲ್ಲವೆಂದು ಆರ್ಥಿಕ ಇಲಾಖೆ ಸಾರಿಗೆ ಸಂಸ್ಥೆಗಳ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂದು ಬಿಜೆಪಿ ತಿಳಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತಮ್ಮ ಯೋಚನಾರಹಿತ ಯೋಜನೆಗಳ ಜಾರಿಯ ನೆಪದಲ್ಲಿ ಸಾರಿಗೆ ಸಂಸ್ಥೆಗಳ ನೌಕರರು ಹಾಗೂ ನಿಗಮಗಳನ್ನು ರಸ್ತೆಗೆ ತರಬೇಡಿ ಎಂದು ಕಾಂಗ್ರೆಸ್ ಯೋಜನೆಗಳನ್ನು, ಆಡಳಿತವನ್ನು ಬಿಜೆಪಿ ಟೀಕಿಸಿದೆ.
#ATMSarkara ದ ಗ್ಯಾರಂಟಿ ಎಫೆಕ್ಟ್..!
— BJP Karnataka (@BJP4Karnataka) June 15, 2023
ಶಕ್ತಿ ಯೋಜನೆ ಪರಿಣಾಮ BMTC, KSRTC ಸೇರಿ ರಾಜ್ಯದ ಎಲ್ಲಾ ಸಾರಿಗೆ ಸಂಸ್ಥೆಗಳಿಗೆ ಉಂಟಾಗುವ ಆರ್ಥಿಕ ಹೊರೆಯನ್ನು ಸರಿದೂಗಿಸಲು ಅನುದಾನ ನೀಡುವುದು ಸಾಧ್ಯವಿಲ್ಲವೆಂದು ಆರ್ಥಿಕ ಇಲಾಖೆ ಸಾರಿಗೆ ಸಂಸ್ಥೆಗಳ ಪ್ರಸ್ತಾವನೆಯನ್ನು ತಿರಸ್ಕರಿಸಿದೆ.
ಮಾನ್ಯ @siddaramaiah ರವರೇ, ತಮ್ಮ ಯೋಚನಾರಹಿತ ಯೋಜನೆಗಳ… pic.twitter.com/7i8QFFymRg
ಆರ್ಥಿಕ ಇಲಾಖೆ ಪತ್ರದಲ್ಲೇನಿದೆ?
ಬಿಜೆಪಿ ಮಾಡಿರುವ ಪೋಸ್ಟ್‌ನಲ್ಲಿ, ಸಾರಿಗೆ ನಿಗಮಗಳ ವೇತನ ಪರಿಷ್ಕರಣೆ ಹೆಚ್ಚುವರಿ ವೆಚ್ಚ ನಿಭಾಯಿಸಲು ವಿಶೇಷ ಅನುದಾನ ನೀಡುವಂತೆ ಸಾರಿಗೆ ಸಂಸ್ಥೆಗಳು ರಾಜ್ಯ ಆರ್ಥಿಕ ಇಲಾಖೆಗೆ ಈ ಹಿಂದೆಯೇ ಮನವಿ ಮಾಡಿದ್ದವು. ಅದಕ್ಕೆ ಉತ್ತರಿಸಿ ಪತ್ರ ಬರೆದ ಆರ್ಥಿಕ ಇಲಾಖೆಯು ''ಸಾರಿಗೆ ನಿಗಮಗಳ ಪ್ರಸ್ತಾವನೆ ಒಪ್ಪಲು ಸಾಧ್ಯವಿಲ್ಲ. ನಿಮ್ಮ ಮನವಿ ಪರಿಶೀಲಿಸಿದ್ದೇವೆ.
ಸಾರಿಗೆ ನಿಗಮಗಳ ನೌಕರರ ವೇತನ, ಪರಿಷ್ಕರಣೆಯಿಂದ ಉಂಟಾಗುವ ವೆಚ್ಚವನ್ನು ನಿಗಮಗಳು ಆಂತರಿಕ ಸಂಪನ್ಮೂಲಗಳಿಂದ ಭರಿಸುವಂತೆ ಹಾಗೂ ಇನ್ನು ಮುಂದೆ ವೇತನ ಪಾವತಿಗಾಗಿ- ಇಂಧನ ವೆಚ್ಚಕ್ಕಾಗಿ ಹೆಚ್ಚುವರಿ ಅನುದಾನವನ್ನು ಒದಗಿಸಲು ಅವಕಾಶ ಆಗುವುದಿಲ್ಲವೆಂದು ತಿಳಿಸಿ'' ಇಲಾಖೆ ಸಾರಿಗೆ ನಿಗಮಗಳಿಗೆ ಪತ್ರ ರವಾನಿಸಿದೆ.
ನಿಗಮಗಳ ಆರ್ಥಿಕ ಹೊರೆಗೆ ಸ್ಪಂದನೆ ಇಲ್ಲ
ಸಾರಿಗೆ ನಿಗಮಗಳ ವೇತನ ಪರಿಷ್ಕರಣೆಯ ಹೆಚ್ಚುವರಿ ವೆಚ್ಚವನ್ನು ನಿಭಾಯಿಸಲು ವಿಶೇಷ ಅನುದಾನ ನೀಡುವಂತೆ ತಿಂಗಳುಗಳ ಹಿಂದೆ ಮನವಿ ಮಾಡಲಾಗಿದೆ. ಆದರೆ ಶಕ್ತಿ ಯೋಜನೆ ಜಾರಿಗೆ ಒಂದೆರಡು ದಿನ ಮುನ್ನ ನೀವು ಕೇಳಿರುವ ಅನುದಾನ ಬಿಡುಗಡೆ ಅಸಾಧ್ಯವೆಂದು ಹೇಳಿದೆ.
ಈ ಮೂಲಕ ವೇತನ ಹೆಚ್ಚಳ, ನಿಗಮಗಳ ಇನ್ನಿತರ ಆರ್ಥಿಕ ಹೊರೆಗಳಿಗೆ ಸ್ಪಂದಿಸದ ಹಣಕಾಸು ಇಲಾಖೆ, ಇನ್ನೂ ಉಚಿತ ಪ್ರಯಾಣದ ವೆಚ್ಚವನ್ನು ಹೇಗೆ ಸರಿದೂಗಿಸಿ ನಿಗಮಗಳನ್ನು, ನೌಕರರನ್ನು ಉತ್ತಮ ಹಾದಿಗೆ ತರಬಲ್ಲದು ಎಂದು ಬಿಜೆಪಿ ಕಿಡಿ ಕಾರಿದೆ.












Click it and Unblock the Notifications