ಆರ್.ಆರ್.ನಗರ ಚುನಾವಣೆ : ಮುನಿರತ್ನ, ಕುಮಾರಸ್ವಾಮಿ ರಹಸ್ಯ ಚರ್ಚೆ!
ಬೆಂಗಳೂರು, ಮೇ 23 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜರಾಜೇಶ್ವರಿ ನಗರದ ಚುನಾವಣೆಯತ್ತ ಗಮನ ಹರಿಸಿದ್ದಾರೆ. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಬಳಿಕ ಕುಮಾರಸ್ವಾಮಿ ಅವರು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಬಳಿಕ ಸಂಸದ ಡಿ.ಕೆ.ಸುರೇಶ್ ಅವರು ಮುನಿರತ್ನ ಅವರ ಜೊತೆ ಕುಮಾರಸ್ವಾಮಿ ಅವರನ್ನು ಭೇಟಿಯಾದರು.
ವಿಧಾನಸೌಧದ ವಿಡಿಯೋ ಕಾನ್ಫರೆನ್ಸ್ ಕಚೇರಿಯಲ್ಲಿ ಕುಮಾರಸ್ವಾಮಿ, ಡಿ.ಕೆ.ಸುರೇಶ್, ಮುನಿರತ್ನ ಕೆಲವು ಹೊತ್ತು ರಾಜರಾಜೇಶ್ವರಿ ನಗರ ಚುನಾವಣೆ ಬಗ್ಗೆ ಮಾತುಕತೆ ನಡೆಸಿದರು. ಮೇ 28ರಂದು ಆರ್.ಆರ್.ನಗರ ಕ್ಷೇತ್ರದ ಚುನಾವಣೆ ನಡೆಯಲಿದೆ.

ಆರ್.ಆರ್.ನಗರ ಚುನಾವಣೆಯಲ್ಲಿಯೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರೆಯಲಿದೆ ಎಂಬುದು ಸದ್ಯದ ಸುದ್ದಿ. ಆದರೆ, ಕಾಂಗ್ರೆಸ್‌ನ ಬಿಬಿಎಂಪಿ ಸದಸ್ಯರು ಮುನಿರತ್ನ ಅವರು ಸ್ಪರ್ಧಿಸಬೇಕು. ಪಕ್ಷ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಬಾರದು ಎಂದು ಒತ್ತಾಯಿಸುತ್ತಿದ್ದಾರೆ.
9 ಸಾವಿರಕ್ಕೂ ಅಧಿಕ ವೋಟರ್ ಐಡಿ ಪತ್ತೆಯಾದ ಹಿನ್ನಲೆಯಲ್ಲಿ ಮೇ 12ರಂದು ನಡೆಯಬೇಕಿದ್ದ ರಾಜರಾಜೇಶ್ವರಿ ನಗರದ ಚುನಾವಣೆಯನ್ನು ಮೂಂದೂಡಲಾಗಿತ್ತು. ಮೇ 28ರಂದು ಚುನಾವಣೆ ನಡೆಯಲಿದ್ದು, ಮೇ 31ರಂದು ಫಲಿತಾಂಶ ಪ್ರಕಟವಾಗಲಿದೆ.
ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸಿ.ಎಚ್.ರಾಮಚಂದ್ರ, ಕಾಂಗ್ರೆಸ್ ಅಭ್ಯರ್ಥಿಯಾಗಿ ಮುನಿರತ್ನ. ಬಿಜೆಪಿಯಿಂದ ಮುನಿರಾಜು ಗೌಡ ಕಣದಲ್ಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಆದ್ದರಿಂದ, ಚುನಾವಣೆಯಲ್ಲಿ ಇಬ್ಬರೂ ಸೇರಿ ಬಿಜೆಪಿ ಸೋಲಿಸುವ ಬಗ್ಗೆ ಚರ್ಚೆ ನಡೆದಿದೆ.












Click it and Unblock the Notifications