ಯಲಹಂಕ ಜೆಡಿಎಸ್ ಅಭ್ಯರ್ಥಿ ಮುನೇಗೌಡರ ಕಟೌಟಿನ ತಲೆ ಕಡಿದ ದುಷ್ಕರ್ಮಿಗಳು: ಇದು ಬಿಜೆಪಿ ಶಾಸಕರದ್ದೇ ಕುಕೃತ್ಯ ಎಂದ ಜೆಡಿಎಸ್
ಯಲಹಂಕದ ಜೆಡಿಎಸ್ ಅಭ್ಯರ್ಥಿ ಮುನೇಗೌಡರ ಕಟೌಟಿನ ತಲೆಯನ್ನು ಕಡಿಯಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ತಮಗೆ ಸೋಲು ಕಟ್ಟಿಟ್ಟ ಬುತ್ತಿ ಎಂಬುವುದು ಬಿಜೆಪಿಗೆ ಖಚಿತವಾಗಿದೆ ಎಂದು ಜೆಡಿಎಸ್ ಹೇಳಿದೆ.
ಬೆಂಗಳೂರು, ಮಾರ್ಚ್ 15: ಯಲಹಂಕದ ಜೆಡಿಎಸ್ ಅಭ್ಯರ್ಥಿ ಮುನೇಗೌಡರ ಕಟೌಟಿನ ತಲೆಯನ್ನು ಕಡಿಯಲಾಗಿದೆ.ಈ ಬಾರಿಯ ಚುನಾವಣೆಯಲ್ಲಿ ತಮಗೆ ಸೋಲು ಕಟ್ಟಿಟ್ಟ ಬುತ್ತಿ ಎಂಬುವುದು ಬಿಜೆಪಿಗೆ ಖಚಿತವಾಗಿದೆ. ಹಾಗಾಗಿಯೇ ಸೋಲಿನ ಹತಾಶೆಯಿಂದ ಗೂಂಡಾ ರಾಜಕಾರಣ ಮಾಡಲು ಪ್ರಾರಂಭಿಸಿದೆ ಎಂದು ಜೆಡಿಎಸ್ ಆರೋಪಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್ ವಿಡಿಯೊ ತುಣುಕೊಂದನ್ನು ಹಂಚಿಕೊಂಡಿದೆ.
ಯಲಹಂಕದ ಜೆಡಿಎಸ್ ಅಭ್ಯರ್ಥಿ ಮುನೇಗೌಡರ ಕಟೌಟ್ನ ತಲೆಯನ್ನು ಕಡಿಯಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ತಮಗೆ ಸೋಲು ಕಟ್ಟಿಟ್ಟ ಬುತ್ತಿ ಎಂಬುವುದು @BJP4Karnataka ಗೆ ಖಚಿತವಾಗಿದೆ. ಹಾಗಾಗಿಯೇ ಸೋಲಿನ ಹತಾಶೆಯಿಂದ ಗೂಂಡಾ ರಾಜಕಾರಣ ಮಾಡಲು ಪ್ರಾರಂಭಿಸಿದೆ. 1/3#BJPGoons pic.twitter.com/vhbKUsXwz3
— Janata Dal Secular (@JanataDal_S) March 15, 2023
'ಸೋಲುವ ಭೀತಿಯಿಂದ ಬಿಜೆಪಿ ಶಾಸಕ ಎಸ್‌ಆರ್ ವಿಶ್ವನಾಥ್ ಎಸಗಿರುವ ಕುಕೃತ್ಯವಿದು ಎಂಬುವುದಕ್ಕೆ ಯಾವುದೇ ಅನುಮಾನವಿಲ್ಲ. ಪೊಲೀಸರು ಸುಮ್ಮನಿದ್ದರೂ ನಾಡಿನ ಜನತೆ ಇವೆಲ್ಲವನ್ನೂ ಗಮನಿಸುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ನಿಮಗೆ ಜನತೆ ಪಾಠ ಕಲಿಸಲಿದ್ದಾರೆ' ಎಂದೂ ಜೆಡಿಎಸ್ ತಿಳಿಸಿದ್ದಾರೆ.

'ಎಸ್‌ಆರ್ ವಿಶ್ವನಾಥ್ ಅವರೇ, ಆಂಧ್ರ ಮಾಡಲ್ ಗೂಂಡಾ ರಾಜಕಾರಣಕ್ಕೆ ಕರ್ನಾಟಕದಲ್ಲಿ ಯಾವುದೇ ನೆಲೆಯಿಲ್ಲ.ನೈತಿಕತೆಯ ಮೇಲೆ ರಾಜಕಾರಣ ಮಾಡಿ ,ಅಖಾಡಕ್ಕಿಳಿದು ಸ್ಪರ್ಧೆ ಮಾಡಿ. ಗೂಂಡಾ ರಾಜಕಾರಣದಿಂದ ಈ ಬಾರಿಯೂ ನಿಮಗೆ ಗೆಲುವಾಗಲಿದೆ ಎಂಬ ಕನಸು ಬಿಟ್ಟುಬಿಡಿ' ಎಂದು ಜೆಡಿಎಸ್ ಹೇಳಿದೆ.
ರಾಜಧಾನಿಯಲ್ಲಿ ಮಹಿಳೆಗೆ ಸುರಕ್ಷತೆ ಇಲ್ಲ
'ರಾಜಧಾನಿಯಲ್ಲಿ ಮಹಿಳಾ ಸುರಕ್ಷತೆ ದಿನೇ ದಿನೇ ಕುಸಿಯುತ್ತಿದ್ದು, ಬೈಯ್ಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬಳಿ ಡ್ರಮ್ ಒಂದರಲ್ಲಿ ಹೆಣ್ಣುಮಗಳೊಬ್ಬಳ ಶವ ಸಿಕ್ಕಿದೆ. ಕಳೆದ ನಾಲ್ಕು ತಿಂಗಳಲ್ಲಿ ಮೂರನೇ ಬಾರಿ ಇಂತಹ ದುರ್ಘಟನೆ ನಡೆದಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರೆ, ನಿಮ್ಮ ಇಲಾಖೆ ಏನು ಮಾಡುತ್ತಿದೆ' ಎಂದು ಜೆಡಿಎಸ್ ಪ್ರಶ್ನಿಸಿದೆ.
'ಜಗತ್ತಿನ ಪ್ರಮುಖ ನಗರದಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ಬಗ್ಗೆ ನಿಗಾ ಇಡಬೇಕಿರುವ ಪೊಲೀಸ್ ಇಲಾಖೆ ತನ್ನ ಕರ್ತವ್ಯ ಮರೆಯುತ್ತಿದೆಯೇ? ರಾಜ್ಯ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅಧೋಗತಿಗೆ ಇಳಿದಿರುವುದಕ್ಕೆ ಸಾಕ್ಷಿ ಈ ಆಘಾತಕಾರಿ ಘಟನೆಗಳು. ಕಳಪೆ ಆಡಳಿತ ನಡೆಸಿ, ಇಡೀ ಇಲಾಖೆಯನ್ನು ಸಾಯಿಸಲಾಗಿದೆ' ಎಂದೂ ಜೆಡಿಎಸ್ ಆರೋಪಿಸಿದೆ.

VIP ಅತಿಥಿಗಳ ಆತಿಥ್ಯಕ್ಕಾಗಿ 260 ಕೋಟಿ ರೂ. ಖರ್ಚು
'ಬಿಜೆಪಿ ಸರ್ಕಾರ 3 ವರ್ಷಗಳ ಅವಧಿಯಲ್ಲಿ VIP ಅತಿಥಿಗಳ ಆತಿಥ್ಯಕ್ಕಾಗಿ 260 ಕೋಟಿ ರೂ. ಖರ್ಚು ಮಾಡಿದೆ. ಹೀಗೆ ಖರ್ಚು ಮಾಡಲಾಗಿರುವ ಈ ದುಡ್ಡು ನಾಡಿನ ಜನರು ಬೆವರು ಸುರಿಸಿ ಕಟ್ಟಿದ ತೆರಿಗೆಯ ಹಣ. ಈ VIP ಅತಿಥಿಗಳಿಂದ ನಾಡಿಗೆ 1 ರುಪಾಯಿಯ ಲಾಭವೂ ಆಗಿಲ್ಲ' ಎಂದು ಜೆಡಿಎಸ್ ಟೀಕಿಸಿದೆ.
'ನಮ್ಮ ಹಿರಿಯರು ಕಟ್ಟಿ ಬೆಳೆಸಿದ ಸಂಸ್ಥೆಗಳನ್ನು ಕಬಳಿಸಲು ಅಥವಾ ನಾಡನ್ನು ಒಡೆಯಲು ಇವರ VIP ಗಳು ರಾಜ್ಯಕ್ಕೆ ಬರುತ್ತಾರೆ. 'ಉಂಡೂ ಹೋದ ಕೊಂಡೂ ಹೋದ' ಎಂಬ ಪರಿಸ್ಥಿತಿ ನಮ್ಮ ನಾಡಿನದ್ದು. ಚುನಾವಣೆ ವೇಳೆ ಪ್ರತ್ಯಕ್ಷರಾಗುವ ಇಂತಹ VIPಗಳಿಗೆ ಈ ದುಂದುವೆಚ್ಚ ಯಾಕೆ?' ಎಂದು ಪ್ರಶ್ನಿಸಿದೆ.
'ಯೋಜನೆಗಳಿಗೆ ನೀಡಲು ಬಿಜೆಪಿ ಸರ್ಕಾರದ ಬಳಿ ಹಣವಿಲ್ಲ. ಪಡಿತರ ಯೋಜನೆಯಲ್ಲಿ ನೀಡುತ್ತಿದ್ದ ಅಕ್ಕಿಯನ್ನೂ ಸರ್ಕಾರ ಕಡಿತ ಮಾಡಿದೆ. ಜನರಿಗೆ ತಿನ್ನಲು ಅನ್ನ ನೀಡದ ಸರ್ಕಾರ VIPಗಳ ಮುಡಿಗೆ ಮಲ್ಲಿಗೆ ಹೂವು ಮುಡಿಸಿದೆ' ಎಂದು ಜೆಡಿಎಸ್ ಟೀಕಿಸಿದೆ.












Click it and Unblock the Notifications