ರಾಜಕೀಯ ಪಕ್ಷಗಳ ಕೆಸರೆರಚಾಟದಲ್ಲಿ ಬಡವಾಯಿತೇ ರಾಜ್ಯದ ಅಭಿವೃದ್ಧಿ?
ಬೆಂಗಳೂರು, ಏಪ್ರಿಲ್ 19: ಕರ್ನಾಟಕದ ಚುನಾವಣೆಯನ್ನು ಅಭಿವೃದ್ಧಿಯ ಮುನ್ನೋಟದಲ್ಲಿ ನಡೆಸುತ್ತಿವೆ ಎಂದು ಆಡಳಿತಾರೂಢ ಕಾಂಗ್ರೆಸ್, ಪ್ರತಿಪಕ್ಷ ಬಿಜೆಪಿ ಅತ್ತ ಜೆಡಿಎಸ್ ಹೇಳುತ್ತಲೇ ಇದೆ. ಚುನಾವಣೆ ಘೋಷಣೆಗೂ ಮುನ್ನ ನವ ಕರ್ನಾಟಕ ನಿರ್ಮಾಣ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದ್ದರೆ ಪರಿವರ್ತನೆಯ ಹಾದಿ ಎಂದು ಬಿಜೆಪಿ ಹೇಳಿಕೊಂಡಿತ್ತು.
ಜೆಡಿಎಸ್ ಕೂಡ ಇದೇ ಧಾಟಿಯ ಮಾತುಗಳನ್ನು ಆಡುತ್ತಿದೆ. ಆದರೆ ಚುನಾವಣೆ ಹತ್ತಿರ ಬರುತ್ತಿದ್ದಂತೆ, ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಎಲ್ಲರ ಮಾತು ವರಸೆಗಳೇ ಬದಲಾಗಿವೆ. ಆ ಅಭಿವೃದ್ಧಿಯ ಕನಸು, ಅಭಿವೃದ್ಧಿಯ ಮಾತು ಹಾಗೂ ಆಶ್ವಾಸನೆ ಜನರ ನೈಜ ಬೇಡಿಕೆಗಳ ಕುರಿತ ಚರ್ಚೆಗಳು ದೂರವಾಗುತ್ತಿವೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಸಾಮಾಜಿಕ ಜಾಲತಾಣವಿರಬಹುದು ಅಥವಾ ಇತರೆ ಪ್ರಚಾರ ಮಾಧ್ಯಮಗಳಲ್ಲಿ ರಾಜಕೀಯ ಪಕ್ಷಗಳ ಅಭಿವೃದ್ಧಿಯ ಮಾತು ಕಾಣಿಸುತ್ತಲೇ ಇಲ್ಲ. ಸೋಲು ಗೆಲುವಿನ ಲೆಕ್ಕಾಚಾರ, ಘಟಾನುಘಟಿಗಳನ್ನು ಹೇಗೆ ಸೋಲಿಸುವುದು, ಅದಕ್ಕೆ ಸಂಬಂಧಿಸಿದಂತೆ ಜಾತಿ, ಪಕ್ಷಾಂತರ ಈ ರಾಜಕೀಯ ಕೆಸರೆರಚಾಟಗಳೇ ಕಣ್ಣಿಗೆ ಕಾಣಿಸುತ್ತಿವೆ.

ಪ್ರತಿ ದಿನ ಸಾರ್ವಜನಿಕ ಸಭೆ, ಸಮಾರಂಭ ಸುದ್ದಿಗೋಷ್ಠಿ, ಅಥವಾ ಇತರೆ ವೇದಿಕೆಗಳಲ್ಲಿ ರಾಜಕಾರಣಿಗಳು ಅಥವಾ ಅಭ್ಯರ್ಥಿಗಳು ಮಾತನಾಡುವುದನ್ನು ನೋಡಿದಾಗ ಈ ಅಂಶಗಳು ಗೋಚರಿಸುತ್ತವೆ. ಸಿದ್ದರಾಮಯ್ಯ ಅವರನ್ನು ಸೋಲಿಸುವುದು ಹೇಗೆ, ಕುಮಾರಸ್ವಾಮಿಯವರನ್ನು ಸೋಲಿಸುವುದು ಹೇಗೆ, ಯಡಿಯೂರಪ್ಪ ಅವರನ್ನು ಕಟ್ಟಿ ಹಾಕುವುದು ಹೇಗೆ, ಬೇರೆ ಅಭ್ಯರ್ಥಿಗಳನ್ನು ಸೆಳೆಯುವುದು ಹೇಗೆ ಆ ಅಭ್ಯರ್ಥಿಗಳು ನಮ್ಮ ಪಕ್ಷಕ್ಕೆ, ಬಂದರು, ಈ ಅಭ್ಯರ್ಥಿಗಳು ನಮ್ಮ ಪಕ್ಷಕ್ಕೆ ಬಂದರು, ಆ ಪಕ್ಷದಲ್ಲಿ ಆಂತರಿಕ ಭಿನ್ನಮತವಿದೆ, ಈ ಪಕ್ಷದಲ್ಲಿ ಆತಂರಿಕ ಗೊಂದಲ ಇದೇ ಚರ್ಚೆಗಳು ನಡೆಯುತ್ತಿದೆ.
ಎಲ್ಲಿಯೂ ಕೂಡ ಕರ್ನಾಟಕದ ರೈತರ ಸಮಸ್ಯೆಗಳಿಗೆ ಉತ್ತರ, ಕನ್ನಡಿಗರಿಗೆ ಉದ್ಯೋಗ, ಯುವಕರಿಗೆ ಉದ್ಯೋಗ, ಬ್ರಷ್ಟಾಚಾರ, ಮೂಲಸೌಕರ್ಯಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಕೈಗಾರಿಕೆಗಳ ಅಭಿವೃದ್ಧಿ, ಬಂಡವಾಳ ಆಕರ್ಷಣೆ ಕುರಿತಂತೆ ನಮ್ಮ ಸರ್ಕಾರ ಬಂದರೆ ಏನು ಮಾಡಲಿದೆ ಎನ್ನುವ ಯಾವುದೇ ಸ್ಪಷ್ಟ ಮಾತುಗಳನ್ನು ಯಾರೂ ಆಡುತ್ತಿಲ್ಲ.
ಈ ಬಗ್ಗೆ ಕೇಳಿದರೆ ನಮ್ಮದು ಪ್ರಣಾಳಿಕೆ ಬರುತ್ತದೆ ಎಂದು ಅದೇ ಹಳೆಯ ಸಿದ್ಧ ಉತ್ತರವನ್ನು ನೀಡುತ್ತಿದ್ದಾರೆ. ಆ ಪ್ರಣಾಳಿಕೆಯಲ್ಲಿರುವುದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಎನ್ನುವುದು ಕೂಡ ಎಲ್ಲರಿಗೂ ತಿಳಿದಿದೆ. ಆದಾಗ್ಯೂ ಅಭ್ಯರ್ಥಿಗಳು ತಮ್ಮ ಪ್ರಚಾರವನ್ನು ಅಥವಾ ರಾಜಕೀಯ ಪಕ್ಷಗಳು ಮುನ್ನೋಟಕ್ಕೆ ಮೀಸಲಿಡದಿದ್ದರೆ ಈ ಚುನಾವಣೆ ತನ್ನ ಅರ್ಥವನ್ನು ಕಳೆದುಕೊಳ್ಳಬಹುದು.












Click it and Unblock the Notifications