MB Patil: ಮುನ್ನೆಲೆಗೆ ಬಂತು ಕಾಂಗ್ರೆಸ್‌ನ ಹಿನ್ನಡೆ: ಆತ್ಮಾವಲೋಕನ ಎಂದ ಸಚಿವ
ಬೆಂಗಳೂರು, ಜೂನ್ 08: ಲೋಕಸಭಾ ಚುನಾವಣೆಯ ಕುರಿತು ಪ್ರತಿಕ್ರಿಯೆ, ಚರ್ಚೆಗಳು. ಆತ್ಮಾವಲೋಕನ ಬಗ್ಗೆ ಮಾತುಗಳು ಕೇಳಿ ಬಂದಿವೆ. ನಿರೀಕ್ಷಿತ ಸೀಟುಗಲು ಬಾರದಿದ್ದಕ್ಕೆ ಕರ್ನಾಟಕ ಕಾಂಗ್ರೆಸ್ ನಲ್ಲಿ ಐದು ಗ್ಯಾರೆಂಟಿಗಳನ್ನು ಪುನರ್ ಪರಿಶೀಲಿಸುವಂತೆ ಶಾಸಕರು ಆಗ್ರಹಿಸಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೆ ಸಚಿವರೊಬ್ಬರು ಕಾಂಗ್ರೆಸ್‌ಗೆ ಆದ ಹಿನ್ನಡೆ, ಅವಲೋಕನ ಕುರಿತು ಪ್ರತಿಕ್ರಿಯಿಸಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ನಾವು (ಕಾಂಗ್ರೆಸ್) ಕರ್ನಾಟಕದಲ್ಲಿ ಕನಿಷ್ಠ ಪಕ್ಷ 14 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ಆದರೆ 9 ಸ್ಥಾನಗಳಷ್ಟೇ ಬಂದಿವೆ. ಈ ಹಿನ್ನಡೆಗೆ ಅದ ಕಾರಣಗಳು ಏನು? ಎಂದು ಕಾಂಗ್ರೆಸ್ ಪಕ್ಷವು ಆತ್ಮಾವಲೋಕನ ಮಾಡಿಕೊಳ್ಳಲಿದೆ ಎಂದು ಪಕ್ಷದ ಹಿರಿಯ ನಾಯಕರು ಆಗಿರುವ ರಾಜ್ಯ ಕೈಗಾರಿಕೆ ಎಂಬಿ ಪಾಟೀಲ್ ಅವರು ಶನಿವಾರ ತಿಳಿಸಿದರು.

ಇಲ್ಲಿನ ನಿವಾಸದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, 'ಕಳೆದ ಒಂದು ವರ್ಷದಲ್ಲಿ ರಾಜ್ಯ ಸರಕಾರವು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು, ಜನರಿಗೆ ಅದರ ಲಾಭ ಸಿಗುವಂತೆ ಮಾಡಿತ್ತು. ಆದರೂ ನಾವು ಎಡವಿದ್ದೆಲ್ಲಿ ಎನ್ನುವುದನ್ನು ನಾವು ಕಂಡುಕೊಳ್ಳಲಿದ್ದೇವೆ. ಗೆಲ್ಲಬಹುದಾಗಿದ್ದ ಕೆಲವು ಕ್ಷೇತ್ರಗಳು ಕೈಜಾರಿರುವುದು ನಮಗೆ ಗೊತ್ತಾಗಿದೆ' ಎಂದು ಹೇಳಿದರು.
ಹಿನ್ನಡೆಗೆ ಯಾರನ್ನು ಹೊಣೆ ಮಾಡಲ್ಲ: ಸಚಿವ
ಚುನಾವಣೆ ಹಿನ್ನಡೆಗೆ ಯಾರೋ ಒಬ್ಬರನ್ನು ಹೊಣೆ ಮಾಡುವುದು ಸಾಧ್ಯವಿಲ್ಲ. ಸಚಿವರ ಅಥವಾ ಶಾಸಕರ ಮೌಲ್ಯಮಾಪನ ಕೂಡ ನಡೆಯುವುದಿಲ್ಲ. ಪಕ್ಷದ ಮುಂದಿನ ಕಾರ್ಯತಂತ್ರ ಏನಿರಬೇಕು ಎಂದಷ್ಟೇ ಚಿಂತಿಸಲಾಗುವುದು ಎಂದು ಅವರು ತಿಳಿಸಿದರು.
ಸದ್ಯ ದೇಶದಲ್ಲಿ ನಡೆದ ಚುನಾವಣೆ ಬಳಿಕ ಬಿಜೆಪಿಯ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿ ಆಗುತ್ತಿದ್ದಾರೆ. ಕಳೆದ ಎರಡು ಬಾರಿಗಿಂತ ಈ ಸಲ ಬಿಜೆಪಿ ಬಲ ಕಡಿಮೆ ಆಗಿದೆ. ಆದ್ದರಿಂದ ಈ ಭಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಎಷ್ಟು ದಿನ ಇರುತ್ತದೋ ಹೇಳಲು ಸಾಧ್ಯವಿಲ್ಲ.

ಎನ್‌ಡಿಎ ಸರ್ಕಾರ ಎಷ್ಟು ದಿನ ಇರಲಿದೆಯೋ?
ಅದರಲ್ಲೂ ನಿತೀಶ್ ಕುಮಾರ್ ತರಹದ ವ್ಯಕ್ತಿಯನ್ನು ಇಟ್ಟುಕೊಂಡು ಸರ್ಕಾರ ನಡೆಸುವುದು ಎಷ್ಟು ಕಷ್ಟ ಎನ್ನುವುದು ನಮಗೆ ಗೊತ್ತಿದೆ ಎಂದು ಅವರು ರಚನೆಯಾಗಲಿರುವ ಎನ್‌ಡಿಎ ಸರ್ಕಾರ ಎಷ್ಟು ದಿನ ಇರುತ್ತದೋ ಎಂದು ಹೇಳಲು ಸಾಧ್ಯವಿಲ್ಲವೆಂದು ಕೇಂದ್ರದ ಭವಿಷ್ಯದ ಕುರಿತು ಮಾರ್ಮಿಕವಾಗಿ ಹೇಳಿದರು.
ಇನ್ನೂ ಚುನಾವಣೆಯಲ್ಲಿ ನೆರೆಯ ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಾಸ್ಥಾನಗಳಲ್ಲಿ ಬಿಜೆಪಿ ಹೆಚ್ಚಿನ ಕಡೆ ಸೋಲಲಿದೆ ಎಂದು ನಾನು ಮೊದಲೇ ಹೇಳಿದ್ದೆ. ಫಲಿತಾಂಶ ನೋಡಿದರೆ ನಾನು ಹೇಳಿದಂತೆ ಆಗಿದೆ ಎಂದು ಅವರು ತಮ್ಮ ಹೇಳಿಕೆಯನ್ನು ನೆನಪಿಸಿದರು.
ಕರ್ನಾಟಕ ಆಡಳಿತ ಪಕ್ಷ ಕಾಂಗ್ರೆಸ್‌ಗೆ ಕಡಿಮೆ ಸ್ಥಾನಗಳು ಬಂದಿವೆ. ಅದರಲ್ಲೂ ವಿಧಾನಸಭೆಯ ಗೆಲುವಿಗೆ ಕಾರಣವಾಗಿದ್ದ ಐದು ಗ್ಯಾರೆಂಟಿ ಯೋಜನೆಗಳ ಜಾರಿ ಹೊರತಾಗಿಯೂ ಹಿನ್ನಡೆ ಅನುಭವಿಸಲಾಗಿದೆ ಎಂದು ಪರೋಕ್ಷವಾಗಿ ಶಾಸಕರು, ಸಚಿವರೇ ಒಪ್ಪಿಕೊಂಡಂತಾಗಿದೆ. ಹೀಗಾಗಿ ಒಂದಷ್ಟು ಶಾಸಕರು ಗ್ಯಾರೆಂಟಿ ಯೋಜನೆ ಮರು ಪರಿಶೀಲಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications