ಬಿಬಿಎಂಪಿ ಚುನಾವಣೆ; ಬಜೆಟ್‌ನಲ್ಲಿ ಬೆಂಗಳೂರಿಗೆ ಹೆಚ್ಚಿನ ಅನುದಾನ?
ಬೆಂಗಳೂರು, ಜೂನ್ 13; ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 7ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಬೆಂಗಳೂರು ನಗರಕ್ಕೆ ಹೆಚ್ಚಿನ ಅನುದಾನ ನಿರೀಕ್ಷೆ ಮಾಡಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್ ಸಂಖ್ಯೆಯನ್ನು ಸರ್ಕಾರ 198 ರಿಂದ 243 ವಾರ್ಡ್‌ಗಳಿಗೆ ಹೆಚ್ಚಿಸಲಾಗುತ್ತಿದೆ. ಅದರಲ್ಲೂ ವಾರ್ಡ್ ಪುನರ್ ವಿಂಗಡನೆ ಮುಗಿದು ಬಿಬಿಎಂಪಿ ಚುನಾವಣೆ ನಡೆಲು ಸರ್ಕಾರ ನಿರ್ಧರಿಸಿದೆ. ಆದ್ದರಿಂದ ಬೆಂಗಳೂರು ನಗರಕ್ಕೆ ವಿಶೇಷ ಗಮನ ನೀಡಲಾಗುತ್ತದೆ.

ಬಿ. ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಅವರೇ ಇಟ್ಟುಕೊಂಡಿದ್ದರು. ಆದರೆ ಸಿದ್ದರಾಮಯ್ಯ ಈ ಖಾತೆಯನ್ನು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ಗೆ ನೀಡಿದ್ದಾರೆ. ಬಿಬಿಎಂಪಿ ಚುನಾವಣೆ ಎದುರಾಗುತ್ತಿರುವುದರಿಂದ ಬೆಂಗಳೂರು ನಗರಕ್ಕೆ ಬಜೆಟ್‌ನಲ್ಲಿ ಆದ್ಯತೆ ಸಿಗುವುದರಲ್ಲಿ ಅನುಮಾನವಿಲ್ಲ.
ಜೂನ್ 17ರಂದು ಸಭೆ; ಸುಮಾರು 3 ವರ್ಷಗಳಿಂದ ಬಿಬಿಎಂಪಿಯ ಆಡಳಿತ ಅಧಿಕಾರಿಗಳ ಕೈಯಲ್ಲಿ ಇದೆ. ಈಗ ಚುನಾವಣೆ ನಡೆಸಲು ಸರ್ಕಾರ ಮುಂದಾಗಿದೆ. ಇದಕ್ಕೂ ಮೊದಲು ಬಜೆಟ್ ಮಂಡನೆಯಾಗಲಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮ್ಯ ಜೂನ್ 17ರಂದು ಬಿಬಿಎಂಪಿಯ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ.
ಈ ಸಭೆಯಲ್ಲಿ ಬೆಂಗಳೂರು ನಗರದಲ್ಲಿ ಕೈಗೊಂಡಿರುವ ವಿವಿಧ ಯೋಜನೆಗಳು, ಸಂಚಾರ ಸಮಸ್ಯೆಗೆ ಪರಿಹಾರ, ಸಬ್ ಅರ್ಬನ್ ಮತ್ತು ಮೆಟ್ರೋ ರೈಲು ಯೋಜನೆ, ಮೂಲ ಸೌಕರ್ಯಗಳು ಹೀಗೆ ವಿವಿಧ ಪ್ರಮುಖ ಯೋಜನೆಗಳ ವಿವರಗಳನ್ನು ಮುಖ್ಯಮಂತ್ರಿಗಳಿಗೆ ವಿವರಿಸಿ ಹೆಚ್ಚಿನ ಅನುದಾನ ಪಡೆಯಲು ಸಹ ಬಿಬಿಎಂಪಿ ಅಧಿಕಾರಿಗಳು ತಯಾರಿ ನಡೆಸುತ್ತಿದ್ದಾರೆ.

ಫೆಬ್ರವರಿಯಲ್ಲಿ ಬಜೆಟ್ ಮಂಡನೆ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು ನಗರದ ಅಭಿವೃದ್ಧಿಗಾಗಿ 9,698 ಕೋಟಿ ರೂ.ಗಳ ಅನುದಾನ ಘೋಷಣೆ ಮಾಡಿದ್ದರು. ಈ ಅನುದಾನ ಬಾಕಿ ಉಳಿದಿರುವ ವೈಟ್ ಟಾಪಿಂಗ್ ಕಾಮಗಾರಿ, ಫ್ಲೈ ಓವರ್ ನಿರ್ಮಾಣ, ನೀರಿನ ಪೂರೈಕೆ ಯೋಜನೆಗಳು, ಕಸ ಸಂಸ್ಕರಣೆ ಮುಂತಾದವುಗಳಿಗೆ ಬಿಡುಗಡೆಯಾಗುವ ನಿರೀಕ್ಷೆ ಇತ್ತು.
ಆದರೆ ಈಗ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಬೆಂಗಳೂರು ನಗರಾಭಿವೃದ್ಧಿ ಖಾತೆಯೂ ಪ್ರಭಾವಿಯಾದ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಕೈಯಲ್ಲಿ ಇರುವುದರಿಂದ ಇನ್ನೂ ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿ ಬಿಬಿಎಂಪಿ ಇದೆ. ಅದಕ್ಕಾಗಿಯೇ ಮುಖ್ಯಮಂತ್ರಿಗಳ ಮುಂದೆ ಮಂಡಿಸಲು ಬಿಬಿಎಂಪಿ ಯೋಜನೆಗಳ ವಿವರಗಳನ್ನು ಸಂಗ್ರಹ ಮಾಡಿ, ಪ್ರಸ್ತಾವನೆ ಸಿದ್ಧಗೊಳಿಸುತ್ತಿದೆ.
ಬೆಂಗಳೂರು ನಗರ ಮಾತ್ರವಲ್ಲ ನಗರದ ಹೊರವಲಯಗಳ ಅಭಿವೃದ್ಧಿಯನ್ನು ಸಹ ಕೈಗೆತ್ತಿಕೊಳ್ಳಬೇಕಿದೆ. ಅದರಲ್ಲೂ ರಸ್ತೆ, ಕಸ ಸಂಸ್ಕರಣೆ, ಕುಡಿಯುವ ನೀರಿನ ಪೂರೈಕೆ ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ. ಡಿ. ಕೆ. ಶಿವಕುಮಾರ್ ಈಗಾಗಲೇ ಸರ್ವಪಕ್ಷಗಳ ಸಭೆ ನಡೆಸಿ ಬೆಂಗಳೂರು ಅಭಿವೃದ್ಧಿ ಯೋಜನೆಗಳ ಕುರಿತು ಸಲಹೆಗಳನ್ನು ಪಡೆದಿದ್ದಾರೆ.
ಮಂಗಳವಾರ ಡಿ. ಕೆ. ಶಿವಕುಮಾರ್ ಬೆಂಗಳೂರು ನಗರ ಪ್ರದಕ್ಷಿಣೆ ನಡೆಸಿದರು. ಹೆಬ್ಬಾಳ ಫ್ಲೈಓವರ್ ಬಳಿ ಕಾಮಗಾರಿಗಳ ಪರಿಶೀಲನೆ ನಡೆಸಿ ಸಂಚಾರ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. ವಿಮಾನ ನಿಲ್ದಾಣ, ಹೈದರಾಬಾದ್ ಹಾಗೂ ಐಟಿ ಹಬ್‌ಗಳನ್ನು ಸಂಪರ್ಕಿಸುವ ಹೆಬ್ಬಾಳ ಮೇಲ್ಸೇತುವೆ ಅಗಲೀಕರಣಕ್ಕೆ ಸಾಕಷ್ಟು ಬೇಡಿಕೆಗಳು ಕೇಳಿಬಂದಿದ್ದು ಉದ್ದೇಶಿತ ಯೋಜನೆಯ ನೀಲನಕ್ಷೆಗಳನ್ನು ಈ ವೇಳೆ ಸಚಿವರು ವೀಕ್ಷಿಸಿದರು.
ಸಚಿವ ಡಿ. ಕೆ. ಶಿವಕುಮಾರ್ ಬಿಎಂಆರ್‌ಸಿಎಲ್, ಬಿಡಿಎ ಅಧಿಕಾರಿಗಳ ಜೊತೆ ಸಭೆ ನಡೆಸಿ ನಡೆಯುತ್ತಿರುವ ಯೋಜನೆ, ಅಗತ್ಯವಿರುವ ಅನುದಾನದ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುವ ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ಡಿ. ಕೆ. ಶಿವಕುಮಾರ್ ಸಹ ಪಾಲ್ಗೊಂಡು ಬೆಂಗಳೂರು ನಗರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಿದ್ದಾರೆ.
ಬಿಎಂಆರ್‌ಸಿಎಲ್ ಕೈಗೊಂಡಿರುವ ವಿವಿಧ ನಮ್ಮ ಮೆಟ್ರೋ ಯೋಜನೆಗಳ ಪೈಕಿ ಈ ವರ್ಷ ಮೂರು ಯೋಜನೆಗಳು ಪೂರ್ಣಗೊಳ್ಳುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕಿದೆ. ಅಲ್ಲದೇ ನಗರದ ಸಂಚಾರ ದಟ್ಟಣೆ ನಿವಾರಣೆ ಮಾಡಲಿದೆ ಎಂದು ಅಂದಾಜಿಸಲಾದ ಸಬ್ ಅರ್ಬನ್ ರೈಲು ಯೋಜನೆಗೆ ಸಹ ಅನುದಾನದ ಅಗತ್ಯವಿದೆ. ಈ ಯೋಜನೆ ಅಂದುಕೊಂಡಷ್ಟು ವೇಗವಾಗಿ ಸಾಗುತ್ತಿಲ್ಲ.












Click it and Unblock the Notifications