ಬೆಳ್ಳಂಬೆಳಗ್ಗೆ ವಿಧಾನಸೌಧದಲ್ಲಿ ಬಿಜೆಪಿ ನಾಯಕರ ಕಸರತ್ತು ಪ್ರದರ್ಶನ
ಬೆಂಗಳೂರು, ಜುಲೈ 19: ವಿಶ್ವಾಸಮತ ಯಾಚನೆಗೆ ಅನುವು ಮಾಡಿಕೊಡದ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಧರಣಿ ಕೂತಿರುವ ಬಿಜೆಪಿ ನಾಯಕರು ಬೆಳಗ್ಗೆ ಎದ್ದು ವಿಧಾನಸೌಧದಲ್ಲಿ ವಾಕಿಂಗ್ ಮಾಡಿದ್ದಾರೆ.
ಸುಪ್ರೀಂಕೋರ್ಟ್ ಹಾಗೂ ರಾಜ್ಯಪಾಲರ ನಿರ್ದೇಶನದ ಹೊರತಾಗಿಯೂ ಸ್ಪೀಕರ್ ರಮೇಶ್ ಕುಮಾರ್ ವಿಶ್ವಾಸ ಮತ ಯಾಚನೆಗೆ ಅನುಮತಿ ನೀಡಿಲ್ಲ.
ಸ್ಪೀಕರ್ ಕೂಡ ರಾಜಕೀಯ ಲೆಕ್ಕಾಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗುರುವಾರ ಸಂಜೆಯಿಂದ ಬಿಜೆಪಿ ಶಾಸಕರು ವಿಧಾನಸಭೆಯೊಳಗೆ ಅಹೋರಾತ್ರಿ ಧರಣಿ ಕೂತಿದ್ದಾರೆ.

ಧರಣಿ ಹಿನ್ನೆಲೆಯಲ್ಲಿ ಗುರುವಾರ ರಾತ್ರಿಯೂ ಶಾಸಕರು ವಿಧಾನಸೌಧ ಆವರಣದಲ್ಲಿ ವಾಕಿಂಗ್ ನಡೆಸಿದ್ದರು. ಶುಕ್ರವಾರ ಬೆಳಗಿನ ಜಾವ ಎದ್ದ ಕೂಡಲೇ ಎಲ್ಲಾ ಶಾಸಕರು ಒಟ್ಟಾಗಿ ಮತ್ತೆ ವಾಕಿಂಗ್, ಜಾಗಿಂಗ್, ಯೋಗ ಹಾಗೂ ವ್ಯಾಯಾಮಗಳನ್ನು ಮಾಡುತ್ತಿದ್ದಾರೆ.
ಆದರೆ ಪ್ರತಿಪಕ್ಷಗಳ ಯಾವ ರೀತಿಯ ವ್ಯಾಯಾಮಗಳು ಸ್ಪೀಕರ್ ಮೇಲೆ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.
ಏತನ್ಮಧ್ಯೆ ಮಧ್ಯಾಹ್ನ 1.30ರ ಒಳಗೆ ವಿಶ್ವಾಸಮತ ಯಾಚಿಸುವಂತೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಗೆ ರಾಜ್ಯಪಾಲ ವಜುಭಾಯಿ ವಾಲಾ ಸೂಚಿಸಿದ್ದಾರೆ.
ಆದರೆ ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೈತ್ರಿ ಸರ್ಕಾರ ಅರ್ಜಿ ಸಲ್ಲಿಸಿದೆ. ಹೀಗಾಗಿ ದೋಸ್ತಿ ಸರ್ಕಾರದ ಭವಿಷ್ಯಕ್ಕೆ ಸಂಬಂಧಿಸಿದ ವ್ಯಾಯಾಮವು ಬೆಳಗಿನ ವಾಕಿಂಗ್, ಜಾಗಿಂಗ್, ಯೋಗಕ್ಕೆ ಸೀಮಿತವಾಗದೆ ದಿನವಿಡೀ ರಾಜಕೀಯ ವ್ಯಾಯಾಮಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ.
ಗುರುವಾರ ರಾತ್ರಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಜಗದೀಶ್ ಶೆಟ್ಟರ್ ಯಡಿಯೂರಪ್ಪ ಜೊತೆ ವಿಧಾನಸೌಧದಲ್ಲಿ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದರು.
ಯಡಿಯೂರಪ್ಪ ಎರಡು ದಿನ ಶಾಸಕರ ಜೊತೆ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಗುರುವಾರ ರಾತ್ರಿ ಸದನದಲ್ಲಿ ಧರಣಿ ಆರಂಭವಾಗುತ್ತಿದ್ದಂತೆ ವೈದ್ಯರು ಬಂದು ಯಡಿಯೂರಪ್ಪ ಆರೋಗ್ಯ ತಪಾಸಣೆ ನಡೆಸಿದರು. ಬಳಿಕ ಶಾಸಕರ ಜೊತೆ ಭೋಜನ ಸವಿದು ಯಡಿಯೂರಪ್ಪ ವಿಶ್ರಾಂತಿ ಪಡೆದರು












Click it and Unblock the Notifications