Ram mandir: ಅಯೋಧ್ಯೆಗೆ ಕರ್ನಾಟಕದ್ದೇ ಶ್ರೀರಾಮ ಮೂರ್ತಿ ಫೈನಲ್: ಇದನ್ನು ಕೆತ್ತಿದ ಶಿಲ್ಪಿ ಯಾವ ಊರಿನವರು ಗೊತ್ತಾ?
ಬೆಂಗಳೂರು, ಜನವರಿ 01: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದ್ದು, ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲು ಕರ್ನಾಟಕದ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಶ್ರೀರಾಮನ ಮೂರ್ತಿ ಆಯ್ಕೆಯಾಗಿದೆ. ಐತಿಹಾಸಿಕ ರಾಮ ಮಂದಿರದಲ್ಲಿ ಕರ್ನಾಟಕದ ಶಿಲ್ಪಿ ಕೆತ್ತಿರುವ ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗುತ್ತಿರುವುದು ರಾಜ್ಯಕ್ಕೆ ಹೆಮ್ಮೆಯ ವಿಚಾರವಾಗಿದೆ.
ಹೊಸ ವರ್ಷದ ದಿನವೇ ಅಯೋಧ್ಯೆ ರಾಮಮಂದಿರ ಸಮಿತಿಯು ಖುದ್ದು ಅರುಣ್ ಯೋಗಿರಾಜ್ ಅವರಿಗೆ ಕರೆ ಮಾಡಿ ನೀವು ರೂಪಿಸಿದ ವಿಗ್ರಹವನ್ನೇ ಆಯ್ಕೆ ಮಾಡಲಾಗಿದೆ ಎನ್ನುವ ಸಂದೇಶವನ್ನು ನೀಡಿದ್ದಾರೆ ಎನ್ನಲಾಗಿದೆ. ರಾಮ ಲಲ್ಲಾ ಮೂರ್ತಿಯನ್ನು ಹೆಚ್.ಡಿ.ಕೋಟೆ ತಾಲೂಕಿನ ಹಾರೋಹಳ್ಳಿ ಗ್ರಾಮದ ಕಲ್ಲಿನಿಂದ ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ್ದರು.

ಅಯೋಧ್ಯೆಯಲ್ಲಿ ಇದೇ ಜನವರಿ 22ರಂದು ಭವ್ಯ ರಾಮಮಂದಿರ ಲೋಕಾರ್ಪಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷವೇ ರಾಮನ ವಿಗ್ರಹ ತಯಾರಿಸಲು ದೇಶದ ಹಲವಾರು ಕಲಾವಿದರನ್ನು ಆಯ್ಕೆ ಮಾಡಲಾಗಿತ್ತು. ಇವರು ಕಳುಹಿಸಿದ ಮಾದರಿಗಳನ್ನು ಗುರುತಿಸಿ ಕೊನೆಗೆ ಕರ್ನಾಟಕದ ಇಬ್ಬರು ಹಾಗೂ ರಾಜಸ್ಥಾನದ ಒಬ್ಬರು ಕಲಾವಿದರ ಹೆಸರು ಅಂತಿಮಗೊಳಿಸಲಾಗಿತ್ತು.
ಇದರಲ್ಲಿ ಅರುಣ್ ಯೋಗಿರಾಜ್, ಜಿ.ಎಸ್.ಭಟ್ ಕರ್ನಾಟಕದವರಾದರೇ ಆಗಿದ್ದರು. ಸಂಜಯ್ ಪಾಂಡೆ ಎನ್ನುವ ಕಲಾವಿದರು ರಾಜಸ್ಥಾನದವರು. ಈ ಮೂವರು ತಾವು ಕೆತ್ತಿದ್ದ ಮೂರ್ತಿಗಳನ್ನು ತೆಗೆದುಕೊಂಡು ಹೋಗಿದ್ದರು. ಇದರಲ್ಲಿ ಅರುಣ್ ಯೋಗಿರಾಜ್ ವಿಗ್ರಹವನ್ನು ಅಂತಿಮಗೊಳಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅರುಣ್ ಯೋಗಿರಾಜ್ ಅವರು ಕೆತ್ತಿರುವ ಶ್ರೀರಾಮ ಮೂರ್ತಿ ಆಯ್ಕೆಯಾಗುತ್ತಿದ್ದಂತೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ವಿಪಕ್ಷ ನಾಯಕ ಆರ್.ಅಶೋಕ್ ಶುಭಕೋರಿದ್ದು. "ಕರ್ನಾಟಕದ ಹೆಮ್ಮೆಯ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಶ್ರೀರಾಮನ ಮೂರ್ತಿ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದ್ದು, ಶ್ರೀರಾಮನ ವಿಗ್ರಹ ಕೆತ್ತನೆಗೆ ಬಳಸಲಾದ ಕಲ್ಲು ಸಹ ನಮ್ಮ ಕರ್ನಾಟಕದ ಎಚ್.ಡಿ.ಕೋಟೆಯದ್ದು ಎಂಬುದು ಮತ್ತೊಂದು ವಿಶೇಷ" ಎಂದಿದ್ದಾರೆ.

"ರಾಮದೂತ ಹನುಮಂತನ ಜನ್ಮಸ್ಥಳ ಇರುವ ಪುಣ್ಯಭೂಮಿಯಾದ ಕರ್ನಾಟಕಕ್ಕೂ ಶ್ರೀರಾಮನಿಗೂ ಅವಿನಾಭಾವ ಸಂಭವವಿದೆ. ಶ್ರೀರಾಮನ ಮೂರ್ತಿ ಕೆತ್ತುವ ಐತಿಹಾಸಿಕ ಮತ್ತು ಪುಣ್ಯ ಕಾರ್ಯದಲ್ಲಿ ಭಾಗಿಯಾದ ಕರುನಾಡಿನ ಹೆಮ್ಮೆಯ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು" ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕೂಡ ಶುಭಾಶಯ ತಿಳಿಸಿದ್ದು, "ಶ್ರೀ ರಾಮ-ಹನುಮರ ಬಾಂಧವ್ಯಕ್ಕೆ ಕರುನಾಡ ನಂಟಿದೆ, ಇದೀಗ ರಾಮನೂರಿನ ಗುಡಿಯನು. ಮೈಸೂರಿನ ಬಾಲರಾಮನು ಬೆಳಗುವನು ಮೈಸೂರಿನ ಅಪ್ರತಿಮ ಶಿಲ್ಪ ಕಲಾ ಪ್ರತಿಭೆ ಅರುಣ್ ಯೋಗಿರಾಜ್ ಅವರ ಭಕ್ತಿ ಕೌಶಲ್ಯದ ಕೆತ್ತನೆಯಿಂದ ಪಡಿಮೂಡಿದ ರಾಮಲಲಾ ಮೂರ್ತಿಯು ಜನವರಿ 22 ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ನೆರವೇರುತ್ತಿರುವುದು ಮೈಸೂರಿನ ಹಿರಿಮೆ, ಕರುನಾಡ ಹೆಮ್ಮೆಯಾಗಿದೆ.
ರಾಮನ ಭಂಟ ಹನುಮಂತನು ಹುಟ್ಟಿರುವ ನಮ್ಮ ಕನ್ನಡನಾಡಿನಲ್ಲಿ, ಶ್ರೀರಾಮನಿಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಅದೇ ರೀತಿ ಶ್ರೀರಾಮನ ವಿಗ್ರಹವೂ ಕರ್ನಾಟಕದ ಶಿಲ್ಪಿಯಿಂದಲೇ ಕೆತ್ತನೆಯಾಗಿರುವುದು ಭಾವನಾತ್ಮಕ ಭಕ್ತಿ ತರಿಸಿದೆ. ಅಂತರಾಷ್ಟ್ರೀಯ ಗಮನ ಸೆಳೆದ ಕೇದಾರನಾಥದ ಆದಿ ಶಂಕರಚಾರ್ಯ, ದೆಹಲಿಯ ಇಂಡಿಯಾ ಗೇಟ್ ಬಳಿಯ ಸುಭಾಷ್ ಚಂದ್ರ ಬೋಸ್, ಇದೀಗ ವಿಶ್ವ ಹಿಂದೂಗಳ ಹೃದಯದಲ್ಲಿ ನೆಲೆಸಲಿರುವ ಅಯೋಧ್ಯೆಯ ಬಾಲ ರಾಮನ ಮೂರ್ತಿಯ ವಿಗ್ರಹ ರೂಪಿಸಿ, ರಾಜ್ಯಕ್ಕೆ ಶ್ರೇಷ್ಠ ಕೀರ್ತಿ ತಂದ ಶಿಲ್ಪಿ ಅರುಣ್ ಯೋಗಿರಾಜ್ ಹಾಗೂ ಈ ಕಾರ್ಯದಲ್ಲಿ ಹೆಗಲುಕೊಟ್ಟ ಅವರ ತಂಡದವರಿಗೆ ತುಂಬು ಹೃದಯದ ಅಭಿನಂದನೆಗಳು" ಎಂದಿದ್ದಾರೆ.












Click it and Unblock the Notifications