Price Hike: ಬೇಸಿಗೆಯಲ್ಲಿ ಗ್ರಾಹಕರಿಗೆ ವಿದ್ಯುತ್ ದರ ಏರಿಕೆ ಶಾಕ್: 1ಯೂನಿಟ್‌ಗೆ ಹೆಚ್ಚಾಗಿದ್ದೆಷ್ಟು?
ಬೆಂಗಳೂರು: ಸಾಮಾನ್ಯವಾಗಿ ಬೇಸಿಗೆಯಲ್ಲಿ ವಿದ್ಯುತ್ ಬಳಕೆ ಹೆಚ್ಚುತ್ತದೆ. ಫ್ಯಾನ್, ಕೂಲರ್, ಎಸಿ, ಫ್ರಿಡ್ಜ್ ಸೇರಿ ಇತರ ಕಾರ್ಯಗಳಿಗೆ ಹೆಚ್ಚಿನ ವಿದ್ಯುತ್ ಬಳಕೆ ಆಗುತ್ತದೆ. ಇದೀಗ ವಿದ್ಯುತ್ ಉಪಯೋಗಕ್ಕೂ ಆಲೋಚನೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಕಾರಣ ರಾಜ್ಯ ಸರ್ಕಾರ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ವಿದ್ಯುತ್ ದರ ಏರಿಕೆ ಮಾಡಿದೆ. ಬೆಲೆ ಹೆಚ್ಚಿಸಲು ಈಗಾಗಲೇ ಆಯೋಗ ಅನುಮತಿ ಸಹ ನೀಡಿದೆ. ಈ ವಿಚಾರವಾಗಿ ಮಾಜಿ ಸಿಎಂ ಬಿ.ಎಸ್.ಯೂಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
ವಿದ್ಯುತ್ ಸರಬರಾಜು ಮಾಡುವ ಕಂಪನಿಗಳ ಆದಾಯದಲ್ಲಿನ ಖೋತಾ ಸರಿದೂಗಿಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ಗೆ 56 ಪೈಸೆ ಹಾಗೂ ಚೆಸ್ಕಾಂ ವ್ಯಾಪ್ತಿಯಲ್ಲಿ ಯೂನಿಟ್‌ಗೆ 15 ಪೈಸೆ ಏರಿಕೆ ಮಾಡಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‍ಸಿ) ಅನುಮತಿ ನೀಡಿದೆ.

ಅಡುಗೆ ಅನಿಲ, ಇಂಧನ ಇನ್ನಿತರ ವಸ್ತುಗಳು ದುಬಾರಿ ಇರುವ ಇಂದಿನ ಸನ್ನಿವೇಶದಲ್ಲಿ ಸರ್ಕಾರದ ಈ ವಿದ್ಯುತ್ ದರ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ. ವಿಶೇಷವೆಂದರೆ ಮೆಸ್ಕಾಂ ವ್ಯಾಪ್ತಿಯಲ್ಲಿ ಯೂನಿಟ್‌ಗೆ 09 ಪೈಸೆ, ಹೆಸ್ಕಾಂ ಮತ್ತು ಜೆಸ್ಕಾಂ ವ್ಯಾಪ್ತಿಯಲ್ಲಿ ಯೂನಿಟ್‌ಗೆ ತಲಾ 10 ಪೈಸೆ ಹಿಂತಿರುಗಿಸುವಂತೆ ನಿರ್ದೇಶಿಸಲಾಗಿದೆ. ಇದು 2024,25ನೇ ವರ್ಷದಲ್ಲಿ ಬಳಸಿದ್ದ ವಿದ್ಯುತ್‌ಗೆ ಇದು ಅನ್ವಯವಾಗುವಂತೆ ಜಾರಿಗೊಳಿಸಲಾಗುತ್ತಿದೆ.
ಇನ್ನೂ ವಿದ್ಯುತ್ ದರ ಏರಿಕೆ ಮಾಡಬೇಕೆಂಬ ಕೋರಿಕೆ ವಿದ್ಯುತ್ ಕಂಪನಿಗಳಿಂದ ಒತ್ತಾಯ ಕೇಳಿ ಬರುತ್ತಲೇ ಇತ್ತು. ಈ ಬಗ್ಗೆ ಪ್ರಸ್ತಾವನೆ ಸರ್ಕಾರದ ಮುಂದಿತ್ತು. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‍ಸಿ) ಕೊನೆಗೂ ದರ ಹೆಚ್ಚಿಸಲು ಒಪ್ಪಿಗೆ ನೀಡಿದ್ದು, ಅದಕ್ಕೆ ವೆಚ್ಚ ನಿರ್ವಹಣೆಯನ್ನು ಉಲ್ಲೇಖಿಸಿದೆ. ಮೂರು ವರ್ಷಗಳಿಗೆ ಸಂಬಂಧಿಸಿದಂತೆ ದರ ನಿಗದಿ ಮಾಡಿ 2025ರ ಮಾರ್ಚ್‌ನಲ್ಲಿ ಆದೇಶಿಸಿತ್ತು.
ಈ ಹಿಂದೆ ಆದೇಶಿಸಿದಂತೆ 2026ರ ಏಪ್ರಿಲ್ 1ರಿಂದಲೇ ವಿದ್ಯುತ್ ದರ ಏರಿಕೆ ಜಾರಿಗೆ ಬರಲಿದೆ. ಯಾರೆಲ್ಲ ನಿರ್ದಿಷ್ಟ ಯೂನಿಟ್ ಗೂ ಅಧಿಕ ವಿದ್ಯುತ್ ಬಳಸುತ್ತೀರೋ ಅವರಿಗೆಲ್ಲ ಅನ್ವಯವಾಗಲಿದೆ. ಮಿತಿ ಒಳಗಿನ ಬಳಕೆಗೆ ಗೃಹ ಜ್ಯೋತಿ ಯೋಜನೆಯಡಿ ಸರ್ಕಾರದಿಂಚ ಉಚಿತ ಬಳಕೆಗೆ ಅವಕಾಶ ಇದೆ.
ವಿದ್ಯುತ್ ಏರಿಕೆ ಆಕ್ಷೇಪಿಸಿದ ಯಡಿಯೂರಪ್ಪ, ವಾಪಾಸ್‌ಗೆ ಆಗ್ರಹ
ಚಿಕ್ಕಮಗಳೂರಿನ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಸರ್ಕಾರ ಬೇಕಾಬಿಟ್ಟಿಯಾಗಿ ವಿದ್ಯುತ್ ದರ ಏರಿಸುವುದು ಖಂಡನೀಯ, ಇದು ಸರಿಯಲ್ಲ. ದರ ಹೆಚ್ಚಳವಾದರೆ ಜನ ಸಾಮಾನ್ಯರು ಬದುಕು ಕಷ್ಟವಾಗಲಿದೆ. ಉತ್ತಮ ಆಡಳಿತ ನೀಡದೇ ಹೀಗೆ ದರ ಏರಿಕೆ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕೂಡಲೇ ವಿದ್ಯುತ್ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು. ಜನರು ನೆಮ್ಮದಿಯಿಂದ ಜೀವಿಸಲು ಅವಕಾಶ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.














Click it and Unblock the Notifications